ADVERTISEMENT

ಸ್ತುತಿಶಂಕರ | ಅಧ್ಯಾತ್ಮಲೋಕದ ಯಾನ; ಕಲ್ಯಾಣವೃಷ್ಟಿ ಮಹಾಭಿಯಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:54 IST
Last Updated 19 ಡಿಸೆಂಬರ್ 2025, 15:54 IST
<div class="paragraphs"><p>ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮಿ,&nbsp;ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿ</p></div>

ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮಿ, ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿ

   

ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರದ 50 ನೆಯ ವರ್ಷದ ಈ ಸಂದರ್ಭದಲ್ಲಿ ‘ಸುವರ್ಣ ಭಾರತೀ’ ಎಂಬ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅವುಗಳಲ್ಲಿ ’ವೇದಾಂತ ಭಾರತೀ’ ಸಂಸ್ಥೆಯ ಪರವಾಗಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರ ಅಪ್ಪಣೆಯಂತೆ, ಯಡತೊರೆಯ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲೆಡೆ ಕಲ್ಯಾಣವೃಷ್ಟಿಸ್ತವ ಮಹಾಭಿಯಾನವು ನಡೆಯುತ್ತಿದೆ. ಇದರ ಅಂಗವಾಗಿ ಶ್ರೀ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ-ನಕ್ಷತ್ರಮಾಲಾ-ಸ್ತೋತ್ರ, ಶ್ರೀ ಲಕ್ಷ್ಮೀನೃಸಿಂಹ-ಕರಾವಲಂಬ-ಸ್ತೋತ್ರ ಎಂಬ ಮೂರು ಸ್ತೋತ್ರಗಳ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ 2024ರ ಶಿವರಾತ್ರಿಯಂದು ಜಗದ್ಗುರು ಮಹಾಸ್ವಾಮಿಗಳ ಅಪ್ಪಣೆಯ ಮೇರೆಗೆ ಆರಂಭಗೊಂಡಾಗಿನಿಂದ ಈವರೆಗೆ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಆಸ್ತಿಕರು ಈ ಸ್ತೋತ್ರಗಳ ಪಾರಾಯಣ ಹಾಗೂ ಸಮರ್ಪಣೆಯನ್ನು ನೆರವೇರಿಸಿದ್ದಾರೆ. ಇದೀಗ ಮೈಸೂರಿನಲ್ಲಿ ಈ ಸ್ತೋತ್ರಮಹಾಸಮರ್ಪಣೆ ಕಾರ್ಯಕ್ರಮವು 20-12-2025ರಂದು ಸಂಜೆ 4ಗಂಟೆಯಿಂದ ಮೈಸೂರಿನ ಅರಮನೆ ಆವರಣದಲ್ಲಿ ಸ್ತುತಿಶಂಕರ ಎನ್ನುವ ಹೆಸರಿನ ಅಡಿಯಲ್ಲಿ ನೆರವೇರಲಿದೆ.

ಸ್ತೋತ್ರಗಳ ಮಹತ್ತ್ವ

ADVERTISEMENT

ಶ್ರೀ ಆದಿಶಂಕರ ಭಗವತ್ಪಾದರು ಭಾರತೀಯ ತತ್ತ್ವಶಾಸ್ತ್ರದ ಮೂಲವಾದ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದಿದ್ದಾರೆ. ಅಷ್ಟೇ ಅಲ್ಲ, ಶ್ರೀಮದ್ಭಗವದ್ಗೀತೆ, ಬ್ರಹ್ಮಸೂತ್ರ ಸೇರಿದಂತೆ ಪ್ರಸ್ಥಾನತ್ರಯಕ್ಕೆ ಅವರು ಭಾಷ್ಯವನ್ನು ಬರೆದು, ಲೋಕಕ್ಕೆ ಮಹದುಪಕಾರವನ್ನು ಮಾಡಿದ್ದಾರೆ. ಈ ಉಪನಿಷತ್, ಭಾಷ್ಯಾದಿ ಗ್ರಂಥಗಳು ತತ್ತ್ವಶಾಸ್ತ್ರೀಯ ವಿಚಾರಗಳನ್ನು ಒಳಗೊಂಡಿದ್ದು, ಸಾಮಾನ್ಯ ಜನರಿಗೆ ಅದು ನಿಲುಕಲಾರದೆಂಬ ಕಾರಣಕ್ಕೆ ಶ್ರೀ ಶಂಕರಾಚಾರ್ಯರು ಅನೇಕ ದಿವ್ಯಸ್ತೋತ್ರಗಳನ್ನು ರಚಿಸಿ, ಜನಸಾಮಾನ್ಯರೂ ಕೂಡ ತತ್ತ್ವಶಾಸ್ತ್ರೀಯ ವಿಚಾರಗಳನ್ನು ತಿಳಿದುಕೊಂಡು ಭಗವಂತನ ಸ್ವರೂಪವನ್ನು ಅರಿತುಕೊಳ್ಳುವುದಕ್ಕೆ ಸಾಧನವನ್ನು ಕಲ್ಪಿಸಿದ್ದಾರೆ. ಸ್ತೋತ್ರಸಾಹಿತ್ಯವು ಭಗವಂತನ ಸ್ಮರಣೆಯ ಮೂಲಕ ಆತ್ಮತತ್ತ್ವವಿಚಾರವನ್ನು ಜನಸಾಮಾನ್ಯರಿಗೂ ಕೂಡ ತಲುಪುವಲ್ಲಿ ಸಹಕರಿಸುತ್ತದೆ. ಶ್ರೀ ಶಂಕರಾಚಾರ್ಯರು ಬರೆದಿರುವ ಪ್ರಕರಣ ಗ್ರಂಥಗಳು ಹಾಗೂ ಸ್ತೋತ್ರಸಾಹಿತ್ಯವು ಅತ್ಯಂತ ವಿಶಿಷ್ಟವಾದುದಾಗಿದ್ದು, ಭಗವಂತನ ನಾಮಸ್ಮರಣೆಯ ಜೊತೆಯಲ್ಲೇ ಪರಮಾತ್ಮನ ಸ್ವರೂಪವನ್ನು ಹಾಗೂ ಆತ್ಮತತ್ತ್ವವನ್ನು ಅತ್ಯಂತ ಸರಳವಾಗಿ ಕಟ್ಟಿಕೊಡುವ ಸಾಹಿತ್ಯರತ್ನವಾಗಿದೆ.

ಶ್ರೀ ಶಂಕರಾಚಾರ್ಯರು ರಚಿಸಿರುವ ಪ್ರತಿಯೊಂದು ಸ್ತೋತ್ರದ ಪಾರಾಯಣಕ್ಕೂ ವಿಶೇಷವಾದ ಫಲವಿದೆ. ಕೇವಲ ಪಾರಾಯಣ ಮಾತ್ರದಿಂದಲೇ ಮನುಷ್ಯನ ಪಾಪಗಳು ನಾಶವಾಗುವುದಷ್ಟೇ ಅಲ್ಲದೇ, ಈ ಸ್ತೋತ್ರಗಳಲ್ಲಿ ಶ್ರೀ ಶಂಕರರು ಅನೇಕ ಬೀಜಮಂತ್ರಗಳನ್ನೂ ಕೂಡ ಒಳಗೊಂಡು ರಚಿಸಿರುವುದರಿಂದ ಉಪಾಸಕರಿಗೆ, ಸಾಧಕರಿಗೆ, ಜಿಜ್ಞಾಸುಗಳಿಗೆ, ಸಾಮಾನ್ಯ ಭಕ್ತರಿಗೆ ಸೇರಿದಂತೆ ಎಲ್ಲರಿಗೂ ಅವರವರ ಸ್ತರದಿಂದ ತನ್ನ ಅಧ್ಯಾತ್ಮದ ಸಾಧನೆಯನ್ನು ಉತ್ತಮಗೊಳಿಸಿಕೊಳ್ಳಲು ಈ ಸ್ತೋತ್ರಸಾಹಿತ್ಯವು ಒಂದು ಸಾಧನವಾಗಿದೆ. ಇದನ್ನು ಮನಗಂಡು ‘ಸುವರ್ಣ ಭಾರತೀ’ ಎಂಬ ಹೆಸರಿನಲ್ಲಿ ವರ್ಷಪೂರ್ತಿ ನಡೆಯುತ್ತಿರುವ ಅನೇಕ ಕಾರ್ಯಕ್ರಮಗಳಲ್ಲಿ ಶ್ರೀ ಶಂಕರರು ರಚಿಸಿರುವ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಹಾಗೂ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರದ ಪಾರಾಯಣವನ್ನು ವೇದಾಂತ ಭಾರತಿಯು ಅನೇಕ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದಾದ್ಯಂತ ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದೆ.

ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ:

ಶ್ರೀ ಶಂಕರರು ಬರೆದಿರುವ ಅನೇಕ ಸ್ತೋತ್ರಗಳಲ್ಲಿ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಅಥವಾ ಶ್ರೀ ಲಕ್ಷ್ಮೀನೃಸಿಂಹ ಕರುಣಾರಸ ಸ್ತೋತ್ರವು ಅತ್ಯಂತ ವಿಶಿಷ್ಟವಾದುದು. ಈ ಸ್ತೋತ್ರದಲ್ಲಿ ವಿಶೇಷವಾಗಿ ಶ್ರೀ ಶಂಕರರು ಸಂಸಾರದ ಅನಿತ್ಯತ್ವವನ್ನು ಪ್ರತಿಪಾದಿಸಿದ್ದಾರೆ. ಈ ಮೂಲಕ ಭಕ್ತ ಜಿಜ್ಞಾಸುಗಳ ಆಧ್ಯಾತ್ಮಿಕ ಹಾಗೂ ಬೌದ್ಧಿಕ ಸ್ತರವನ್ನು ಉನ್ನತೀಕರಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಸ್ತೋತ್ರವನ್ನು ರಚಿಸಲಾಗಿದೆ. ಸಂಸಾರದ ಅನಿತ್ಯತ್ವವನ್ನು ಪ್ರತಿಪಾದಿಸುತ್ತಾ, ಈ ಸಂಸಾರವೆಂಬ ದಾವಾನಲದಿಂದ ತಪ್ಪಿಸಿಕೊಳ್ಳಲು ಬೇಕಾಗುವ ಎಲ್ಲ ಪ್ರಾರ್ಥನೆಗಳನ್ನು ಈ ಸ್ತೋತ್ರದಲ್ಲಿ ಶ್ರೀ ಶಂಕರರು ಮಾಡಿದ್ದಾರೆ. ಪ್ರತಿಯೊಂದು ಸ್ತೋತ್ರದ ಕೊನೆಯ ಪಾದವು ‘ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್’ ಎಂಬುವುದಾಗಿ ಕೊನೆಗೊಳ್ಳುತ್ತದೆ. ಅಂದರೆ ಹೇ ಲಕ್ಷ್ಮೀನೃಸಿಂಹನೇ! ನನಗೆ ನಿನ್ನ ಕೈಗಳ ಆಸರೆಯನ್ನು ಕೊಡು ಎಂಬುವುದು ಈ ಪ್ರಾರ್ಥನೆಯ ಸಾರ.

ಲಕ್ಷ್ಮೀನೃಸಿಂಹನ ದಿವ್ಯ ರೂಪವನ್ನು ವರ್ಣಿಸುತ್ತ ಶ್ರೀ ಶಂಕರರು ಕ್ಷೀರಾಬ್ಧಿಯಲ್ಲಿ ಚಕ್ರಪಾಣಿಯಾಗಿ ಪವಡಿಸಿರುವ, ಆದಿಶೇಷನ ಫಣಿಯಲ್ಲಿರುವ ಮಣಿಯಿಂದ ವಿರಾಜಿತನಾಗಿರುವ, ಶಾಶ್ವತನೂ, ಶರಣು ಹೊಕ್ಕವರನ್ನು ಕಾಪಾಡುವವನೂ, ಸಂಸಾರ ಸಮುದ್ರದಿಂದ ರಕ್ಷಿಸುವವನೂ ಆದಂತಹ ಆ ಲಕ್ಷ್ಮೀನೃಸಿಂಹನು ನನಗೆ ತನ್ನ ಕೈಯ ಆಶ್ರಯವನ್ನು ಕೊಟ್ಟು ಕಾಪಾಡಲಿ ಎಂಬುವುದಾಗಿ ಪ್ರಾರ್ಥಿಸಿಕೊಳ್ಳುತ್ತಾರೆ. ಮುಂದುವರೆದು ಬ್ರಹ್ಮೇಂದ್ರ, ರುದ್ರ, ಮರುತ್ತುಗಳೇ ಮೊದಲಾದ ಎಲ್ಲರೂ ಆ ಲಕ್ಷ್ಮೀನೃಸಿಂಹನ ಪಾದಾರವಿಂದಗಳಿಗೆ ಎರಗುವ ಮೂಲಕ ತಮ್ಮ ಕಿರೀಟದ ಕಾಂತಿಯಿಂದ ಲಕ್ಷ್ಮೀನೃಸಿಂಹನ ಪಾದಾರವಿಂದವನ್ನು ಬೆಳಗುತ್ತಿದ್ದಾರೆ. ಅಂತಹ ಪಾದಪದ್ಮಗಳ ಸಮೀಪಕ್ಕೆ ಬಂದಿರುವಂತಹ ಸಂಸಾರವೆನ್ನುವ ದಾವಾನಲದಿಂದ ನಿರಂತರವಾಗಿ ಸುಡಲ್ಪಟ್ಟ ಶರೀರವನ್ನುಳ್ಳ ಎಲ್ಲ ಭಕ್ತರನ್ನು ಹೇ ಲಕ್ಷ್ಮೀನೃಸಿಂಹನೇ ಕರಾವಲಂಬನದ ಮೂಲಕ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ.

ಸಂಸಾರದ ಹೋಲಿಕೆಗಳು :

ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರದಲ್ಲಿ ಸಂಸಾರದಲ್ಲಿ ಬಿದ್ದು ಒದ್ದಾಡುತ್ತಿರುವ ಸಾಮಾನ್ಯನ ಅಳಲನ್ನು ಶ್ರೀ ಶಂಕರರು ತೋಡಿಕೊಂಡಿದ್ದಾರೆ. ಅವರು ಸಂಸಾರ ಜಾಲದಿಂದ ಮುಕ್ತರಾದ ಅವತಾರಪುರುಷರಾಗಿದ್ದರೂ ಕೂಡ ಸಂಸಾರವೆಂಬ ಕೂಪದಲ್ಲಿ ಬಿದ್ದು ಅಗಾಧವಾದ ದುಃಖವನ್ನು ಅನುಭವಿಸುತ್ತಿರುವ ಎಲ್ಲ ದೀನರನ್ನು ಉದ್ಧರಿಸುವ ದೃಷ್ಟಿಯಿಂದ ಈ ಸ್ತೋತ್ರದಲ್ಲಿ ಒಬ್ಬ ಸಂಸಾರಿಯ ರೂಪದಲ್ಲಿ ಪ್ರಾರ್ಥನೆಯನ್ನು ಗೈದಿದ್ದಾರೆ. ಮೂರನೇ ಶ್ಲೋಕದಿಂದ ಹನ್ನೆರಡನೆಯ ಶ್ಲೋಕದವರೆಗೆ ಶಂಕರರು ಈ ಸ್ತೋತ್ರದಲ್ಲಿ ಸಂಸಾರವೆಂಬ ಸಾಗರದ ವರ್ಣನೆಯನ್ನು ಅನೇಕ ಉಪಮೆಗಳ ಮೂಲಕ ಮಾಡಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ಹಿಂದಿನ ಜನ್ಮದ ಕರ್ಮಗಳ ಮೂಲಕ ನಾನಾವಿಧವಾದ ಶರೀರವನ್ನು ಹೊಂದುತ್ತ ಜನನ ಮರಣಾದಿ ವಿಕಾರಗಳಿಗೆ ಒಳಗಾಗುತ್ತಾನೆ. ಹೀಗೆ ಕರ್ಮಗಳಿಂದಾಗಿ ಭೀಕರವಾದ ಸಂಸಾರವನ್ನು ಹೊಂದಿ ಪರಿತಪಿಸುತ್ತಾನೆ. ಇಂತಹ ಸಂಸಾರವನ್ನು ಈ ಸ್ತೋತ್ರದಲ್ಲಿ ಬಲೆಗೂ, ದೊಡ್ಡದಾದ ಆನೆಗೂ, ಕೂಪಕ್ಕೂ, ದಾವಾಗ್ನಿಗೂ, ವಿಷಸರ್ಪಕ್ಕೂ, ಒಂದು ಮರಕ್ಕೂ, ಸಾಗರಕ್ಕೂ, ಗಹನವಾದ ಅರಣ್ಯಕ್ಕೂ ಹೋಲಿಸಿ ಶ್ರೀ ಶಂಕರರು ವಿಧವಿಧವಾಗಿ ಸಂಸಾರದಿಂದ ತಪ್ತನಾದ ವ್ಯಕ್ತಿಯ ಪರವಾಗಿ ಪ್ರಾರ್ಥನೆಯನ್ನು ಮಾಡಿಕೊಂಡಿದ್ದಾರೆ.

ಮರಣದ ಭೀಕರತೆ:

ಕೊನೆಯಲ್ಲಿ ಜೀವನು ಹೊಂದುವ ಮರಣ ಪ್ರಕ್ರಿಯೆಯನ್ನು ವಿವರಿಸುತ್ತ, ‘ಬದ್ಧ್ವಾ ಗಲೇ ಯಮಭಟಾ ಬಹು ತರ್ಜಯಂತಃ ಕರ್ಷಂತಿ ಯತ್ರ ಭವಪಾಶಶತೈರ್ಯುತಂ ಮಾಮ್ | ಏಕಾಕಿನಂ ಪರವಶಂ ಚಕಿತಂ ದಯಾಲೋ ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್’ ಎನ್ನುವ ಮೂಲಕ ಅತ್ಯಂತ ಅಸಹನೀಯವಾದ ದುಃಖವನ್ನು ಮರಣದ ಸಮಯದಲ್ಲಿ ಅನುಭವಿಸಬೇಕಾಗುತ್ತದೆ. ಸಂಸಾರದ ಅವಸ್ಥೆಯಲ್ಲಿ ನಾನು ಮತ್ತು ನನ್ನವರು ಎಂಬ ಅಭಿಮಾನದಿಂದ ಎಲ್ಲರೂ ನನ್ನವರು ಮತ್ತು ಎಲ್ಲರೂ ನನಗಾಗಿಯೇ ಎಂಬ ಭಾವವನ್ನು ಹೊಂದಿದ ಅದೇ ವ್ಯಕ್ತಿ ಯಾವಾಗ ಮರಣ ಹೊಂದುತ್ತಾನೋ ಆಗ ಆತ ಏಕಾಕಿಯಾಗಿ ಯಮಾಲಯಕ್ಕೆ ಹೋಗಬೇಕಾಗುತ್ತದೆ. ಯಮಭಟರು ಒಂದೊಂದು ಪಾಪಕ್ಕೂ ತಮ್ಮ ಕೈಯ್ಯಲ್ಲಿರುವ ಆಯುಧಗಳಿಂದ ನಮ್ಮನ್ನು ಹಿಂಸಿಸುತ್ತ, ಯಮಾಲಯಕ್ಕೆ ಕೊಂಡೊಯ್ಯುತ್ತಾರೆ. ಇಂಥ ಭೀಕರವಾದ ಸ್ಥಿತಿಯನ್ನು ಸಂಸಾರಿಯಾದ ಎಲ್ಲರೂ ಅನುಭವಿಸಲೇಬೇಕಾಗುತ್ತದೆ. ಹಾಗಾಗಿ ಆದಷ್ಟು ಬೇಗ ನನಗೆ ಈ ಸಂಸಾರದಿಂದ ಮುಕ್ತಿಯನ್ನು ಒದಗಿಸಿಕೊಡು. ಸಂಸಾರವೆಂಬ ಈ ವಿಷಸರ್ಪದ ಭಯದಿಂದ ನನ್ನನ್ನು ಕಾಪಾಡು ಎಂಬುವುದಾಗಿ ಇದರಲ್ಲಿ ಪ್ರಾರ್ಥಿಸಲಾಗಿದೆ. ಈ ಮೂಲಕ ಧರ್ಮಾರ್ಥಕಾಮಮೋಕ್ಷಗಳಲ್ಲಿ ನಿತ್ಯವೂ ನಿರತಿಶವೂ ಆದ ಮೋಕ್ಷದ ಪ್ರಾರ್ಥನೆಯನ್ನು ಮಾಡಲಾಗಿದೆ. ಹಾಗಾಗಿ ಇದು ಕೇವಲ ದೇವತಾ ಸ್ತುತಿ ಮಾತ್ರವಲ್ಲದೇ, ಸಂಸಾರದ ಮರ್ತ್ಯತ್ವವನ್ನು ತಿಳಿಸುತ್ತ, ಪರಮಪುರುಷಾರ್ಥದ ಪ್ರಾಪ್ತಿಗಾಗಿ ಪ್ರಾರ್ಥಿಸಿಕೊಳ್ಳುವ ಸ್ತೋತ್ರವಾಗಿದೆ.

ಒಬ್ಬ ಸಂಸಾರಿಯ ಸ್ಥಿತಿಯನ್ನು ವಿವರಿಸುತ್ತ ಹದಿನೈದನೆಯ ಶ್ಲೋಕದಲ್ಲಿ, ನಾನು ವಿವೇಕವೆಂಬ ಕಣ್ಣುಗಳನ್ನು ಕಳೆದು ಅಂಧನಾಗಿದ್ದೇನೆ. ಇಂದ್ರಿಯಗಳೆಂಬ ಬಲಿಷ್ಠವಾದ ಕಳ್ಳರು ನನ್ನ ವಿವೇಕವನ್ನು ಕದ್ದಿದ್ದಾರೆ. ಇಂಥ ಅಂಧತ್ವಕ್ಕೆ ಒಳಗಾಗಿ ಮೋಹವೆಂಬ ಮಹಾ ಕೂಪದಲ್ಲಿ ಬಿದ್ದು ಒದ್ದಾಡುತ್ತಿದ್ದೇನೆ. ಹಾಗಾಗಿ ನೀನು ನಿನ್ನ ಕರಾವಲಂಬನೆಯ ಮೂಲಕ ಕಾಪಾಡಬೇಕು ಎಂಬುವುದಾಗಿ ಇಲ್ಲಿ ವರ್ಣಿಸಲಾಗಿದೆ. ಅಲ್ಲದೇ ನೀನು ಪ್ರಹ್ಲಾದ, ನಾರದ, ಪರಾಶರ, ಪುಂಡರೀಕ, ವ್ಯಾಸಾದಿ ಭಾಗವತ ಪುಂಗವರ ಹೃದಯದಲ್ಲಿ ನಿವಾಸ ಮಾಡುವವನಾಗಿದ್ದೀಯೆ. ಈ ಎಲ್ಲ ಭಕ್ತರ ಹಿತದಲ್ಲಿಯೇ ಅನುರಕ್ತನಾದ ನೀನು ನನ್ನನ್ನು ಕೈ ಬಿಡದೇ ಕಾಪಾಡಬೇಕು ಎಂಬುವುದಾಗಿ ಪ್ರಾರ್ಥಿಸಲಾಗಿದೆ.

ಸ್ತೋತ್ರದ ಫಲಶ್ರುತಿ:

ಈ ಲಕ್ಷ್ಮೀನೃಸಿಂಹ ಕಲಾವಲಂಬ ಸ್ತೋತ್ರದ ಫಲವನ್ನು ಕೊನೆಯ ಶ್ಲೋಕದಲ್ಲಿ ವಿವರಿಸಲಾಗಿದೆ. ಅದೇನೆಂದರೆ, ಯಾರು ಈ ಸ್ತೋತ್ರವನ್ನು ಭಕ್ತಿಭಾವಪುರಸ್ಸರವಾಗಿ ಪ್ರತಿನಿತ್ಯವೂ ಪಠಿಸುತ್ತಾರೆಯೋ ಅವರು ಆ ವಿಷ್ಣುವಿನ ಚರಣಗಳನ್ನೇ ಕೊನೆಯಲ್ಲಿ ಹೊಂದುತ್ತಾರೆ. ಆ ಮೂಲಕ ಮೋಕ್ಷವನ್ನು ಪಡೆಯುತ್ತಾರೆ ಎಂಬುವುದಾಗಿ ತಿಳಿಸಲಾಗಿದೆ. ಹೀಗೆ ಸ್ತೋತ್ರಗಳು ಸ್ತುತ್ಯಾತ್ಮಕವಾಗಿದ್ದರೂ, ಭಕ್ತಿಪ್ರಧಾನವಾಗಿದ್ದರೂ, ಭಕ್ತಿಯ ಮೂಲಕವೇ ವಿವೇಕ ವೈರಾಗ್ಯಗಳನ್ನು ಹೊಂದಿ ತನ್ಮೂಲಕ ಪರಮಪುರುಷಾರ್ಥವಾದ ಮೋಕ್ಷವನ್ನು ಹೊಂದುವಂತಹ ದಿವ್ಯ ಸಾಧನಗಳೂ ಆಗಿವೆ. ಇಂಥ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳೆಂಬ ಅದ್ಭುತವೂ ರಮಣೀಯವೂ, ನಾನಾ ಛಂದಸ್ಸಿನಿಂದ ಕೂಡಿದಂಥವೂ, ಅತಿ ಶ್ರೇಷ್ಠವಾದ ಫಲವನ್ನು ಹೊಂದಿದಂತವೂ ಆದ ಸ್ತೋತ್ರಗಳ ಪಾರಾಯಣದ ಮಹಾಸಮರ್ಪಣೆಯ ಕಾರ್ಯಕ್ರಮದಲ್ಲಿ ಲಕ್ಷಾಧಿಕ ಭಕ್ತಜನರು ಪಾಲ್ಗೊಂಡು ಏಕಕಂಠದಲ್ಲಿ ಈ ಸ್ತೋತ್ರಗಳನ್ನು ಪಠಿಸಲಿದ್ದಾರೆ. ಅದಕ್ಕೆ ಸಾಕ್ಷಿಯಾಗುವುದೇ ಜೀವನದ ಮಹಾಭಾಗ್ಯ.

ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸಂನ್ಯಾಸಸ್ವೀಕಾರದ ಸುವರ್ಣಮಹೋತ್ಸವದ ಸಂದರ್ಭದಲ್ಲಿ ನಡೆಯುತ್ತಿರುವ ಇಂತಹ ಪುಣ್ಯಕರವಾದ ಕೈಂಕರ್ಯದಲ್ಲಿ ನಾವೆಲ್ಲರೂ ಪಾಲ್ಗೊಂಡು, ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳೋಣ.


(ಲೇಖಕರು: ಪ್ರಾಧ್ಯಾಪಕರು, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಶೃಂಗೇರಿ)