ADVERTISEMENT

ಸ್ತುತಿಶಂಕರ | ಸ್ತೋತ್ರಪಾರಾಯಣ ಅಭಿಯಾನದ ಮಹಾಸಮರ್ಪಣೆ; ಸರ್ವರಿಗೂ ಸ್ವಾಗತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 14:18 IST
Last Updated 17 ಡಿಸೆಂಬರ್ 2025, 14:18 IST
<div class="paragraphs"><p>ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿ</p></div>

ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿ

   M S MANJUNATH

ಪರತತ್ವದ ಕಡೆಯ ’ಅಯನ’ವೇ (ಪ್ರಯಾಣ) 'ಪಾರಾಯಣ’. ಸ್ತೋತ್ರಪಾರಾಯಣವು ನಮ್ಮ ಮನೋಬುದ್ಧಿಗಳನ್ನು ಪರತತ್ವದ ಧ್ಯಾನದಲ್ಲಿ ತೊಡಗಿಸುವಂತಹ ವಾಙ್ಮಯಸಾಧನವಾಗಿದೆ. ಪರಮಾತ್ಮನ ಅಮೂರ್ತತತ್ವಸ್ವರೂಪವನ್ನು ಗ್ರಹಿಸಲಾಗದ ನಮ್ಮ ಮನಸ್ಸನ್ನು ಪಳಗಿಸಿ ಕ್ರಮೇಣ ಪರತತ್ವದತ್ತ ಹರಿಯಿಸಲು, ಪರಮಾತ್ಮನೇ ಕರುಣೆತಾಳಿ ಸಾಕಾರಮೂರ್ತಿಗಳಲ್ಲಿ ಆವಿರ್ಭವಿಸುತ್ತಾನೆ. ನಮ್ಮ ಧ್ಯಾನೋಪಾಸನೆಗೆ ಒದಗುತ್ತಾನೆ. ಅಂತಹ ಪ್ರಶಸ್ತವಾದ ವೇದಾಗಮೋಕ್ತ ದೇವತಾರೂಪಗಳೂ, ತತ್ಸಂಬಂಧಿಯಾದ ಮಂತ್ರ-ತಂತ್ರ-ಯಂತ್ರಗಳೂ ಋಷಿಸಂಸ್ಕೃತಿಯಲ್ಲಿ ಉಳಿದು ಬಂದಿವೆ. ಅನ್ನಗತಪ್ರಾಣರಾದ ಕಲಿಯುಗದ ಮನುಜರಲ್ಲಿ ಶ್ರದ್ಧೆ ಸಹನೆಗಳು ಕುಗ್ಗಿವೆ. ದೀಕ್ಷೆ-ತರಬೇತಿಗಳ ಆನುಕೂಲ್ಯವೂ ಕಡಿಮೆ ಆಗಿದೆ. ಹಾಗಾಗಿ ಉಪವಾಸ, ಜಾಗರಣೆ, ಆಹಾರನಿಯಮಗಳೂ, ಗಾಢಧ್ಯಾನ ಮುಂತಾದ ಕಷ್ಟಸಾಧನೆಗಳಿಗಿಂತ ಸ್ತೋತ್ರಪಾರಾಯಣ ಮತ್ತು ನಾಮಸಂಕೀರ್ತನೆಗಳ ಮಾರ್ಗವೇ ಸುಲಭಶಕ್ಯ ಎನ್ನುವುದು ಪ್ರಾಜ್ಞರ ನಿರ್ದೇಶ. ಆಧುನಿಕತೆಯ ನೆವದಲ್ಲಿ ವಿಕೃತಭೋಗಗಳು ನಮ್ಮ ಕಣ್ಮನಗಳ ಶಕ್ತಿಯನ್ನೂ ಸ್ತವವನ್ನೂ ಬಿಗಿಯನ್ನೂ ಹಾಳುಗೆಡವುತ್ತಿವೆ. ಓದಲು ಕೇಳಲು ಧ್ಯಾನಿಸಲು ಅಲೋಚಿಸಲೂ ನಿರ್ಧರಿಸಲೂ ಬೇಕಾದ ಮನೋಬಲವೂ ಹ್ರಾಸವಾಗುತ್ತಿದೆ. ಈ ಮನೋಬಲದ ಸಂಚಯವಾಗಲು ಇರುವ ವಿಶಿಷ್ಟವಿಧಾನಗಳ ಪೈಕಿ ಸ್ತೋತ್ರಪಾರಾಯಣವು ಸುಲಭಶಕ್ಯ, ಶ್ರವಣಸುಭಗ, ಆನಂದದಾಯಕ.

ಪುರಾಣ-ರಾಮಾಯಣ-ಮಹಾಭಾರತ ಸಾಹಿತ್ಯದಲ್ಲೇ ಆದಿತ್ಯಹೃದಯ, ವಿಷ್ಣುಸಹಸ್ರನಾಮ, ಶಿವಸಹಸ್ರನಾಮ, ಲಲಿತಾಸಹಸ್ರನಾಮ ಮುಂತಾದ ಪಾರಾಯಣಯೋಗ್ಯವಾದ ಪ್ರಶಸ್ತಸ್ತೋತ್ರಗಳಿವೆ. ಇದಲ್ಲದೆ ಕಾಲಕಾಲಕ್ಕೆ ಉಗಮಿಸಿದ ಮಹಾಯೋಗಿವರ್ಯರುಗಳು ಮಂತ್ರಗರ್ಭಿತ ಸುಭಗಸ್ತೋತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಶ್ರೀಶಂಕರಭಗವತ್ಪಾದರು ತಮಗೆ ಧ್ಯಾನಸಿದ್ಧವಾದ ದೇವತಾ ನಾಮರೂಪಗಳನ್ನು ದೇವಭಾಷೆಯ ಪ್ರಶಸ್ತಸ್ತೋತ್ರಗಳಲ್ಲಿ ರಚಿಸಿಟ್ಟು, ಪಾಮರಜನಕ್ಕೂ ಆ ಪುಣ್ಯವು ಹರಿದುಬರುವಂತೆ ಮಾಡಿ ಲೋಕಕಾರುಣ್ಯವನ್ನು ಮೆರೆದಿದ್ದಾರೆ.

ADVERTISEMENT

ಶಂಕರಾಚಾರ್ಯರ ಹಲವು ಸ್ತೋತ್ರಗಳನ್ನು ಜನಮಾನಸವು ಶತಮಾನಗಳಿಂದಲೂ ನಿತ್ಯಪಠನಕ್ಕೆ ಬಳಸುತ್ತಬಂದಿದೆ. ಸಕಲ ಸನ್ಮಂಗಲವನ್ನುಂಟುಮಾಡುವಂತಹ ಈ ಸ್ತೋತ್ರಗಳನ್ನು ಒಂದೇ ರಾಗ-ವಿನ್ಯಾಸದಲ್ಲಿ ಒಮ್ಮೆಲೆ ಲಕ್ಷೋಪಲಕ್ಷಜನರು ಕಲಿತು, ಕುಳಿತು ಹಾಡಿ ಭಗವದರ್ಪಣೆ ಮಾಡುವಂತಹ ಹಲವಾರು ಮಂಗಲಕರ ಅಭಿಯಾನಗಳನ್ನು ಈಗಾಗಲೇ ಕರ್ನಾಟಕದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದಂತಹ ಪರಮಪೂಜ್ಯರಾದ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಶ್ರೀಮಠವು ಶಾಂಕರಸಂದೇಶಪ್ರಸಾರ ಕಾರ್ಯದ ಮೂಲಕ ಸನಾತನಧರ್ಮ, ಸಾಹಿತ್ಯವನ್ನು,ವಿಶೇಷವಾಗಿ ದೇವತಾನುಗ್ರಹಕಾರಿಯಾದಂತಹ ಆಚಾರ್ಯರ ಸ್ತೋತ್ರರತ್ನಗಳನ್ನು ಮನೆಮನೆಗೂ ಮನಮನಕ್ಕೂ ತಲುಪಿಸುವಂತಹ ಕಾರ್ಯವನ್ನು ವೇದಾಂತಭಾರತೀ ಸಂಸ್ಥೆಯು ದಶಕಗಳಿಂದ ದೇಶಾದ್ಯಂತ ಭರದಿಂದ ನಡೆಸುತ್ತಬಂದಿದೆ. ಇದರಿಂದಾಗಿ ಈಗಾಗಲೆ ಲಕ್ಷೋಪಜನರು ದೈನಂದಿನ ಪಾರಾಯಣಕ್ಕೆ ಸ್ತೋತ್ರಸಾಮಗ್ರಿಯನ್ನು ಪಡೆದು ಧನ್ಯರೆನಿಸಿದ್ದಾರೆ. ಸಂಸ್ಕೃತಭಾಷೆಯನ್ನೂ ಕನ್ನಡವೇ ಮುಂತಾದ ದೇಶಭಾಷೆಗಳನ್ನೂ ಶುದ್ಧರೂಪದಲ್ಲಿ ಕಲಿಸಲಾಗದೆ ಹೋಗುತ್ತಿರುವ ಆಂಗ್ಲಶಿಕ್ಷಣದ ಕುತ್ಸಿತವ್ಯವಸ್ಥೆಯಲ್ಲಿ, ಸ್ತೋತ್ರಪಾರಾಯಣದ ಅಭ್ಯಾಸವು ಕುಂಠಿತವಾಗುತ್ತಿರುವುದು ಶೋಚನೀಯ. ಈ ಹಿನ್ನಲೆಯಲ್ಲಿ ಪ್ರಶಸ್ತ ಸ್ತೋತ್ರವಾಙ್ಮಯವನ್ನು ಉಳಿಸಿ ಬೆಳೆಸುವ ವ್ರತವನ್ನು ಪೂಜ್ಯರು ಕೈಗೊಂಡಿರುವುದು ಅತ್ಯಂತ ಸೂಕ್ತ. ಇವನ್ನು ಏಕರಾಗವಿನ್ಯಾಸದಲ್ಲಿ ಸರ್ವತ್ರ ತಲುಪಿಸಿ, ಸರ್ವರೂ ಒಕ್ಕೊರಳಿಂದ ಪಠಿಸುವಂತೆ ಮಾಡಲು ಸಂಕಲ್ಪಿಸಿರುವುದು ಅಸಾಧಾರಣ ಕಾರ್ಯದೀಕ್ಷೆಯೇ ಸರಿ. ಪೂಜ್ಯರ ದಕ್ಷ ನಾಯಕತ್ವದಡಿ ನೂರಾರು ಕಾರ್ಯಕರ್ತರು ಶ್ರಮಿಸಿ ಈ ಕಾರ್ಯವನ್ನು ಪ್ರತಿ ಅಭಿಯಾನದಲ್ಲೂ ಸಫಲವಾಗಿಸುತ್ತ ಬಂದಿರುವುದೂ ಸ್ತುತ್ಯರ್ಹ. ಹಿಂದಿನ ಅಭಿಯಾನದ ಮಹಾಸಮರ್ಪಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದೀಜೀರವರೇ ಭಾಗವಹಿಸಿ ಹರಸಿರುವುದಂತೂ ಈ ಮಹಾಪಾರಾಯಣಯಜ್ಞಕ್ಕೆ ಮತ್ತಷ್ಟು ಸಾರ್ಥಕ್ಯವನ್ನು ತಂದಿದೆ.

ಈ ಬಾರಿಯ ಸ್ತೋತ್ರಮಹಾಸಮರ್ಪಣೆಯ ಕಾರ್ಯಕ್ರಮವನ್ನು ಸ್ತುತಿಶಂಕರ ಎನ್ನುವ ಹೆಸರಿನಡಿಯಲ್ಲಿ ಮೈಸೂರು ಅರಮನೆಯ ಆವರಣದಲ್ಲಿ ಇದೇ 20 ಡಿಸೆಂಬರ್ 2025ರಂದು ಆಯೋಜಿಸಲಾಗಿದೆ. ಕುಲಲಿಂಗಪ್ರಾಂತಗಳ ಭೇದವಿಲ್ಲದೆ ಆಬಾಲವೃದ್ಧರೆಲ್ಲರೂ ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.

ಪರಮಕಲ್ಯಾಣಕಾರಕವಾದ ಕಲ್ಯಾಣವೃಷ್ಟಿಸ್ತವವನ್ನೂ, ಶಿವಪಂಚಾಕ್ಷರನಕ್ಷತ್ರಮಾಲಾಸ್ತೋತ್ರ ಮತ್ತು ಲಕ್ಷ್ಮೀನೃಸಿಂಹಕರಾವಲಂಬನಸ್ತೋತ್ರಗಳನ್ನು ಈ ಬಾರಿಯ ಪಾರಾಯಣಾಭಿಯಾನಕ್ಕಾಗಿ ಆಯ್ದುಕೊಳ್ಳಲಾಗಿದೆ. ಇವನ್ನು ಸರಳ ರಾಗವಿನ್ಯಾಸಕ್ಕೆ ಕಟ್ಟಿ, ಅದನ್ನು ಲಕ್ಷೋಪಜನರಿಗೆ ಕಲಿಸಲು ನೂರಾರು ಸ್ವಯಂಸೇವಕರನ್ನು ತರಬೇತಿಗೊಳಿಸಲಾಗಿದೆ. ಅವುಗಳ ಧ್ವನಿಮುದ್ರಣವನ್ನೂ ಸಾಮಾಜಿಕಜಾಲತಾಣದಲ್ಲಿ ಒದಗಿಸಲಾಗಿದೆ. ದೊಡ್ಡಗಾತ್ರದ ಸ್ಫುಟಾಕ್ಷರಗಳಲ್ಲಿ ಈ ಸ್ತೋತ್ರಗಳನ್ನು ಹೊಂದಿರುವಂತಹ ಪುಟ್ಟ ಪುಸ್ತಕಗಳನ್ನೂ ನಾಡಿನಾದ್ಯಂತ ಅಪಾರಸಂಖ್ಯೆಯಲ್ಲಿ ಹಂಚಲಾಗಿದೆ. ಈಗಾಗಲೇ ಆಸ್ತಿಕರೂ, ನೂರಾರು ಉತ್ಸಾಹಿತಂಡಗಳೂ ಇವನ್ನು ಕಲಿತು ಮಹಾಸಮರ್ಪಣೆಯಲ್ಲಿ ಭಾಗವಹಿಸಲು ಸನ್ನದ್ಧರಾಗುತ್ತಿದ್ದಾರೆ. ಈ ಮೂರುಸ್ತೋತ್ರರತ್ನಗಳ ಮಹಾಸಮರ್ಪಣೆಯ ಕಾರ್ಯಕ್ರಮವು ಶೃಂಗೇರಿ ಜಗದ್ಗುರು ಶ್ರೀಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಲಿದೆ.

ವರ್ಣಲಿಂಗಜಾತಿಭೇದವಿಲ್ಲದೆ, ಆಬಾಲವೃದ್ಧರೆಲ್ಲರೂ ಈ ಸ್ತೋತ್ರರತ್ನಗಳನ್ನು ಕಲಿತು ಪಠಿಸಿ ಈ ಮಹಾಸಮರ್ಪಣೆಯಲ್ಲಿ ಭಾಗವಹಿಸಲು ಇದೊಂದು ದಿವ್ಯಾವಕಾಶ. ಶಂಕರಾಚಾರ್ಯರ ಭಕ್ತಿಜ್ಞಾನಾಮೃತಗಳನ್ನು ಹೊತ್ತ ಈ ಸ್ತೋತ್ರಗಳಪಠಣ ಪರಮಪುಣ್ಯಪ್ರದವಾದದ್ದು. ದೇವತಾನುಗ್ರಹದೊಡನೆ ಆಚಾರ್ಯರ ಅಶೀರ್ವಾದವೂ ನಮಗೆ ಹರಿದು ಬರುತ್ತದೆ.

ಚಾಂಚಲ್ಯಚಾಪಲ್ಯಗಳಿಗೆ ತುತ್ತಾಗಿ ಯಾವೊಂದು ವಿಷಯದಲ್ಲೂ ಏಕಾಗ್ರವಾಗಿ ಸ್ಥಿರಗೊಳ್ಳಲಾಗದ ಮನೋಬುದ್ಧಿಗಳನ್ನು ಏಕಾಗ್ರಗೊಳಿಸುವಲ್ಲಿ ಇಂತಹ ಸ್ತೋತ್ರಪಾರಾಯಣಗಳು ಬಹಳ ಉಪಯುಕ್ತ. ಸಂಸ್ಕೃತಭಾಷೆಯ ಸ್ಫುಟವರ್ಣಗಳನ್ನು ಉಚ್ಚರಿಸುತ್ತ ಒಕ್ಕೊರಳಲ್ಲಿ ರಾಗವಾಗಿ ಹಾಡುವಾಗ ಸರ್ವರಿಗೂ ಆಗುವ ದಿವ್ಯಾನಂದ ಅನುಭವೈಕವೇದ್ಯ. ಹಾಗಾಗಿಯೇ ನೂರಾರು ಶಾಲಾಕಾಲೇಜು ಮಕ್ಕಳೂ ಸೇರಿದಂತೆ ಲಕ್ಷೋಪಲಕ್ಷ ಸ್ತ್ರೀಪುರುಷರು ಈ ಪಾರಾಯಣಗಳಲ್ಲಿ ಸೇರುತ್ತಿದ್ದಾರೆ, ಧನ್ಯತೆಯನ್ನನುಭವಿಸಿದ್ದಾರೆ. ಲಕ್ಷೋಪ ಭಕ್ತಿಭರಿತ ಹೃತ್ಕಂಠಗಳಿಂದ ಇಂತು ಭಗವನ್ನಾಮಸ್ತೋತ್ರಪಠನ ತರಂಗಗಳು ಹೊಮ್ಮಿ ದೇಶಕಾಲಗಳನ್ನು ಪಾವನಗೊಳಿಸುವುದನ್ನು ನೋಡಿ ಕೇಳಿ ಧನ್ಯರಾಗೋಣ. ದುಷ್ಟಶಕ್ತಿಗಳ ವಿನಾಶ, ಶಿಷ್ಟಶಕ್ತಿಗಳ ಜಾಗೃತಿಗಾಗಿ ಸಂಕಲ್ಪಿಸಿ ಸರ್ವರೂ ಈ ದಿವ್ಯ ಭವ್ಯ ಸ್ತೋತ್ರಯಜ್ಞದಲ್ಲಿ ಒಗ್ಗೂಡೋಣ ಬನ್ನಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.