
ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಷಷ್ಠಿಯನ್ನು ಸುಬ್ರಹ್ಮಣ್ಯ ಷಷ್ಠಿ ಎಂದು ಕರೆಯಲಾಗುತ್ತದೆ. ಇದು ತುಳುನಾಡು ಭಾಗದ ಜನರಿಗೆ ವಿಶೇಷ ಹಬ್ಬವಾಗಿದೆ. ಈ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಕಥೆ ಇದೆ. ಇದರ ಆಚರಣೆಯ ಮಹತ್ವವೇನು? ಎಂಬುದನ್ನು ತಿಳಿಯೋಣ.
ಶುಕ್ಲಪಕ್ಷದ 6ನೇ ದಿನ ಅಂದರೆ ಡಿಸೆಂಬರ್ 10ರಂದು ಆಚರಿಸಲಾಗುತ್ತದೆ. ಈ ಷಷ್ಠಿ ತಿಥಿಯು ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಸುಬ್ರಹ್ಮಣ್ಯನನ್ನು ಕಾರ್ತಿಕೇಯ, ಮುರುಗ, ಸ್ಕಂದ, ವೇಲಾಯುಧ ಹಾಗೂ ಕುಮಾರಸ್ವಾಮಿ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.
ಪುರಾಣ ಕಥೆ:
ಮಹರ್ಷಿ ಕಶ್ಯಪ ಮಹಾಮುನಿಗೆ 13 ಜನ ಪತ್ನಿಯರಿದ್ದರು. ಇವರೆಲ್ಲರೂ ದಕ್ಷ ಪ್ರಜಾಪತಿಯ ಮಕ್ಕಳಾಗಿದ್ದರು. ಒಂದು ದಿನ ಕದ್ರುತ ತನ್ನ ಸಹೋದರಿ ವಿನುತಾಳೊಂದಿಗೆ ಮೋಸದ ಪಂಥ ಕಟ್ಟಿ ತನ್ನ ದಾಸಿಯನ್ನಾಗಿ ವಿನುತಾಳನ್ನು ಮಾಡಿಕೊಳ್ಳುತ್ತಾಳೆ. ಇದಕ್ಕೆ ತನ್ನ ಮಕ್ಕಳಾದ ಸರ್ಪಗಳ ಸಹಾಯವನ್ನು ಪಡೆಯುತ್ತಾಳೆ.
ಇದು ವಿನುತಾಳ ಮಗನಾದ ಗರುಡನಿಗೆ ತಿಳಿಯುತ್ತದೆ. ಆದರೆ ಕದ್ರು ತನ್ನ ತಾಯಿಗೆ ಸಮಾನಳಾಗಿದ್ದರಿಂದ ಅವಳಿಗೆ ಏನು ಮಾಡದೇ ತನ್ನ ದ್ವೇಷವನ್ನು ಸರ್ಪಗಳ ಮೇಲೆ ತಿರುಗಿಸುತ್ತಾನೆ. ಸಹಸ್ರಾರು ಹಾವುಗಳನ್ನು ಕುಕ್ಕಿ ತಿನ್ನಲು ಮುಂದಾಗುತ್ತಾನೆ.
ಗರುಡನಿಂದ ಪ್ರಾಣ ಉಳಿಸಿಕೊಳ್ಳಲು ಶೇಷನಾಗನು ಪಾತಾಳವನ್ನು ಸೇರಿಕೊಳ್ಳುತ್ತಾನೆ. ಹಲವಾರು ನಾಗಗಳು ಶಿವನ ಕೊರಳು ಕೈಕಾಲುಗಳನ್ನು ಸುತ್ತಿಕೊಳ್ಳುತ್ತವೆ. ಕಾಳಿಯ ಎನ್ನುವ ಸರ್ಪವು ನಂದ ಗೋಕುಲದ ಯಮುನಾ ನದಿಯಲ್ಲಿ ಅಡಗಿಕೊಳ್ಳುತ್ತದೆ. ಶಂಕಪಾಲ, ಭೂಧರ, ಅನಘಾದಿ ಸರ್ಪಗಳು ಹಲವು ಕಡೆಯಲ್ಲಿ ಅಡಗಿಕೊಳ್ಳುತ್ತವೆ. ವಾಸುಕಿ ಎನ್ನುವ ಮಹಾ ಸರ್ಪವೊಂದು ಗರುಡನ ಭಯದಿಂದ ತುಳುನಾಡಿಗೆ ಓಡಿ ಬರುತ್ತದೆ.
ತುಳುನಾಡಿನ ಸಹ್ಯಾದ್ರಿ ಮಡಿಲಿನ ಧಾರಾ ನದಿಯ ಪಕ್ಕದಲ್ಲಿ ಇರುವ ಬಿಲದ್ವಾರ ಅನ್ನುವ ಗುಹೆಯಲ್ಲಿ ವಾಸುಕಿ ಅಡಗಿ ಕೊಳ್ಳುತ್ತಾನೆ. ಇದು ಗರುಡನಿಗೆ ತಿಳಿದು ವಾಸುಕಿ ಹಾಗೂ ಗರುಡನಿಗೆ ಯುದ್ಧವಾಗುತ್ತದೆ. ವಿಷಯ ತಿಳಿದು ಇವರ ತಂದೆಯಾದ ಕಶ್ಯಪ ಮಹರ್ಷಿಯು ಯುದ್ಧವನ್ನು ತಡೆಯುತ್ತಾನೆ.
ನಾಗರಾಜ ವಾಸುಕಿ ತನ್ನ ಪ್ರಾಣ ರಕ್ಷಣೆಗಾಗಿ ಶಿವನನ್ನು ಒಲಿಸಿಕೊಳ್ಳಲಾಯಿತು. ಅದಕ್ಕೆ ಶಿವನು ‘ವಾಸುಕಿ’ ಚಿಂತಿಸಬೇಡ. ಸರ್ಪ ಕುಲದ ರಕ್ಷಣೆಗಾಗಿ ಸುಬ್ರಹ್ಮಣ್ಯಸ್ವಾಮಿ ನನ್ನ ಮಗನಾಗಿ ಜನಿಸುತ್ತಾನೆ. ಆ ದಿನವು ಬೇಗ ಸನ್ನಿಹಿತವಾಗುವಂತೆ ತಪಸ್ಸು ಆಚರಿಸು ಎಂದು ಹೇಳುತ್ತಾನೆ.
ಸುಬ್ರಹ್ಮಣ್ಯಸ್ವಾಮಿಯು ತಾರಕಾಸುರನನ್ನು ಕೊಂದು ತನ್ನ ರಕ್ತಸಿಕ್ತ ಆಯುಧವನ್ನು ಧಾರಾ ನದಿಯಲ್ಲಿ ತೊಳೆಯುತ್ತಾನೆ. ಅಂದಿನಿಂದ ಆ ನದಿಯು ಕುಮಾರಧಾರ ಅನ್ನುವ ಹೊಸ ನಾಮಧೇಯದಿಂದ ಕರೆಯಲ್ಪಡುತ್ತದೆ.
ಸುಬ್ರಹ್ಮಣ್ಯಸ್ವಾಮಿಯನ್ನು ಧರೆಗೆ ಇಳಿಸಿದ ವಾಸುಕಿಯನ್ನು ತುಳುನಾಡಿನ ಮನೆ ಮನೆಗಳಲ್ಲಿ ನಾಗಬ್ರಹ್ಮ ಅನ್ನುವ ನಾಮಧೇಯದಿಂದ ಪೂಜಿಸಲಿ ಎಂದು ಸಕಲ ದೇವರುಗಳು ವಾಸುಕಿಯನ್ನು ಹರಸುತ್ತಾರೆ. ಹಾಗಾಗಿ ಸುಬ್ರಹ್ಮಣ್ಯ ನೆಲೆಸಲು ಕಾರಣನಾದ ಗರುಡನ ಆಹ್ವಾನವಿಲ್ಲದೆ, ಕೆಲವು ಕಡೆ ಚಂಪಾ ಷಷ್ಟಿಯ ರಥವನ್ನು ಎಳೆಯುವ ಕ್ರಮ ಇಲ್ಲ. ಇದೊಂದು ಸಂಪ್ರದಾಯವಾಗಿ, ಹಬ್ಬವಾಗಿ ಇಂದಿಗೂ ವೈಭವದಿಂದ ತುಳುನಾಡು ನಾ ಹಲವು ಭಾಗಗಳಲ್ಲಿ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.