ADVERTISEMENT

ಗುರು ಪೂರ್ಣಿಮೆ ವಿಶೇಷ ಲೇಖನ: ಗುರುವಿನಿಂದಲೇ ಅರಿವು..

ರಾಮಸುಬ್ರಾಯ ಶೇಟ್
Published 13 ಜುಲೈ 2022, 12:52 IST
Last Updated 13 ಜುಲೈ 2022, 12:52 IST
ಗುರು ಪೂರ್ಣಿಮೆ
ಗುರು ಪೂರ್ಣಿಮೆ   

ನಗುರೋರಧಿಕಂ. ಗುರುಸಾಕ್ಷಾತ್ ಪರಬ್ರಹ್ಮಃ. ಹರ ಮುನಿದರೆ ಗುರುಕಾಯ್ವ, ಗುರು ಮುನಿದರೆ? ಗುಕಾರಂಧಕಾರಶ್ಚ. ಅಜ್ಞಾನವೆಂಬ ಕತ್ತಲೆ ಕಳೆದು ಸುಜ್ಞಾನವೆಂಬ ಪ್ರಕಾಶವನ್ನು ಬೀರುವವ.

ಹೀಗೆ ಗುರುವಿನ ಗುರುತ್ವದ ಬಣ್ಣನೆಗೆ ಅಂತ್ಯವಿಲ್ಲ. ಆದರೆ ಇಂದು ವಿದ್ಯಾರ್ಥಿಗಳಿಗೆ ಗುರು ಎಂದರೆ ಶಿಕ್ಷಕರು, ಇನ್ನೂ ಸುಲಭವಾಗಿ ಮೇಷ್ಟ್ರು. ಇದು ತನ್ನ ಗುರುತ್ವವನ್ನು ಕಳೆದುಕೊಂಡು ಲಘುವಾಗಿದೆ. ಶುಲ್ಕವನ್ನು ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಹಾಯ ಮಾಡುವವ ಎಂಬುದಕ್ಕೆ ಸೀಮಿತವಾಗಿದೆ. ಏಕೆಂದರೆ ಇಂದು ಗುರುಪರಂಪರೆ ನಶಿಸಿಹೋಗುತ್ತಿದೆ.

ಗುರುಕುಲಗಳು ಚರಿತ್ರೆಯ ಪುಟಗಳನ್ನು ಸೇರುತ್ತಿವೆ. ಪ್ರಾಚೀನ ಸಾಂಸ್ಕೃತಿಕ ಕಲೆಗಳಾದ ಸಂಗೀತ, ನೃತ್ಯ, ಯಕ್ಷಗಾನ, ಗಮಕ ಮುಂತಾದ ಸತ್ಕಲೆಗಳು ಹಾಗೂ ಕೊಳಲು, ಮೃದಂಗ, ವೀಣೆ ಪಕಾವಟ್, ಪಿಟೀಲು ಮುಂತಾದ ಪಕ್ಕವಾದ್ಯಗಳು, ಪೌರೋಹಿತ್ಯ, ಜ್ಯೋತಿಷ್ಯ, ಯೋಗ ಮುಂತಾದ ವಿದ್ಯೆಗಳನ್ನು ಗುರುಮುಖೇನ ಕಲಿತ ಶಿಷ್ಯರು ಗುರುವಂದನೆಯನ್ನು ಸಲ್ಲಿಸುವ ಸಂಪ್ರದಾಯ ಈಗಲೂ ಉಳಿದುಕೊಂಡಿದೆ.

ADVERTISEMENT

ಮಹೋನ್ನತಿಯ ಸಾಂಸ್ಕೃತಿಕ ಪರಂಪರೆಯನ್ನು ಪಾಲಿಸಿಕೊಂಡು ಮುನ್ನಡೆಯುತ್ತಿರುವ ಭಾರತಾಂಬೆಯ ಮೇಲೆ ದುಷ್ಟ ಪರಕೀಯ ದುರಾಕ್ರಮಣವು ಸರ್ವನಾಶಕ್ಕೆ ಮೂಲಕಾರಣವಾಯಿತು. ಗುರುಕುಲ ಮಾದರಿಯ ವಿದ್ಯಾಭ್ಯಾಸವನ್ನು ಬೇರು ಸಮೇತ ಕೀಳಲು ಪರಕೀಯರು ಪ್ರಯತ್ನಿಸಿದರು. ಮೆಕಾಲೆಯ ಶಿಕ್ಷಣ ನೀತಿಯೇ ಉತ್ಕೃಷ್ಟವಾದುದೆಂದು ನಂಬಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯಿತು. ಏಕೆಂದರೆ ಭಾರತದ ಜುಟ್ಟನ್ನು ತಮ್ಮ ಕೈಯಲ್ಲಿಟ್ಟುಕೊಳ್ಳಲು ನಮ್ಮ ಪ್ರಾಚೀನ ಸಂಸ್ಕಾರ, ಸಂಪ್ರದಾಯಗಳನ್ನು ನಾಶಪಡಿಸಬೇಕಿತ್ತು. ಅಂತಹ ಪಿತೂರಿಗೆ ಮ್ಯಾಕ್ಸ್‌ ಮುಲ್ಲರ್‍ನಂತಹವರನ್ನೂ ಬಳಸಿಕೊಂಡಿದ್ದು ಚರಿತ್ರೆಯಲ್ಲಿ ದಾಖಲಾಗಿದೆ.

ವೇದ ಉಪನಿಷತ್ತುಗಳನ್ನು ತೆಗಳುವ, ಸಂಸ್ಕೃತವನ್ನು ಅಳಿಸಿಹಾಕುವ ಸಂಚು ರಾಷ್ಟ್ರವಿರೋಧಿಗಳಿಂದ ಸದ್ದಿಲ್ಲದೇ ಸಾಗಿತು. ಯೂರೋಪಿಯನ್ನರು ಭಾರತೀಯರನ್ನು ಗುಮಾಸ್ತರನ್ನಾಗಿಸಿ ಗುಲಾಮಗಿರಿಯನ್ನು ಒಪ್ಪಿಕೊಳ್ಳುವಂತೆ ಮಾಡಿದರು. ಇತ್ತೀಚೆಗೆ ನಮ್ಮ ವಿದ್ಯಾಭ್ಯಾಸದಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗುತ್ತಿದ್ದರೂ ಸಂಪೂರ್ಣ ನಮ್ಮತನವನ್ನು ಬೆಳೆಸಿಕೊಳ್ಳುವ ಎತ್ತರಕ್ಕೆ ಏರಲಿಲ್ಲ. ವೇದ ಉಪನಿಷತ್ತುಗಳಿಂದ, ಮಂತ್ರಪಠಣದಿಂದ ಸಂಸಾರ ನಿಭಾಯಿಸಲು ಸಾಧ್ಯವೇ? ಸಂಗೀತ ನಾಟ್ಯದಿಂದ ಹೊಟ್ಟೆ ತುಂಬುವುದೇ? ಇದು ಕುತರ್ಕಿಗಳ ತರ್ಕ. ನಿಜ, ಬದಲಾಗುತ್ತಿರುವ ಜೀವನ ಶೈಲಿಯಂತೆ ಶೈಕ್ಷಣಿಕ ಬದಲಾವಣೆಯೂ ಅವಶ್ಯ. ಆದರೆ ಕೇವಲ ಸಂಪತ್ತಿನ ಸಂಚಯದಲ್ಲಿಯೇ ಸಂಪೂರ್ಣ ತೊಡಗಿಸಿಕೊಂಡು ಅತಿಯಾದ ಭೋಗಲಾಲಸೆಗಳಲ್ಲಿಯೇ ಜೀವನ ವ್ಯರ್ಥಮಾಡುವುದು; ಅದಕ್ಕಾಗಿ ಎಂತಹ ಪ್ರಪಾತಕ್ಕೂ ಇಳಿಯುವ ದುಸ್ಸಾಹಸಕ್ಕೆ ಕಡಿವಾಣ ಅತ್ಯವಶ್ಯಕ.

ಆಷಾಢ ಪೂರ್ಣಿಮೆಯನ್ನು ವ್ಯಾಸಪೂರ್ಣಿಮೆಯೆಂದು, ಗುರುಪೂರ್ಣಿಮೆಯೆಂದು ಭಾರತೀಯ ಸಂಪ್ರದಾಯ ಮಾನ್ಯ ಮಾಡಿದೆ. ‘ವ್ಯಾಸ’ ಎಂದರೆ ಬೃಹತ್ ಪರಿಧಿ. ಭಗವಾನ್ ವೇದವ್ಯಾಸರು ಮನುಕುಲಕ್ಕೆ ನೀಡಿದ ಜ್ಞಾನಭಂಡಾರ, ಸಾಹಿತ್ಯಸಾಗರ ಅನಂತ, ಅನುಪಮೇಯ.

ಗುರುಪರಂಪರೆಯ ಮಹತ್ವವೆಂದರೆ ಒಬ್ಬ ಗುರು ತನ್ನ ಜ್ಞಾನದಾನದಿಂದ ಅನೇಕ ಶಿಷ್ಯರನ್ನು ಸಿದ್ಧಪಡಿಸಿ ಮುಂದೆ ಅವರೂ ಗುರುಪರಂಪರೆಯನ್ನು ಮುಂದುವರೆಸಿರುವುದು ತಿಳಿದುಬರುತ್ತದೆ. ಇವರೊಂದಿಗೆ ಬೃಹಸ್ಪತ್ಯಾಚಾರ್ಯರು ದೇವತೆಗಳ ಗುರುಗಳೆಂದೂ, ಶುಕ್ರಾಚಾರ್ಯರು ರಕ್ಕಸರ ಗುರುಗಳೆಂದೂ ಪ್ರಸಿದ್ಧಿ ಪಡೆದಿದ್ದಾರೆ. ವಸಿಷ್ಠ ವಿಶ್ವಾಮಿತ್ರರೂ ಇಕ್ಷಾಕುವಂಶದ ಗುರುಗಳು. ಈ ಮಹಾನ್ ಗುರುಗಳ ಗುರುತರ ಜವಾಬ್ದಾರಿ ಮತ್ತು ಔದಾರ್ಯಗಳೂ ಅನುಪಮೇಯವಾದುವು. ತನ್ನ ವಿರೋಧಿಯಾದ ಬೃಹಸ್ಪತಿಯ ಮಗನಾದ ಕಚನಿಗೆ ರಕ್ಕಸರ ವಿರೋಧದ ನಡುವೆಯೂ ಮೃತಸಂಜೀವಿನೀ ವಿದ್ಯೆಯನ್ನು ಪ್ರದಾನ ಮಾಡಿದವರು ಮತ್ತು ಶಿಷ್ಯನನ್ನು ಬದುಕಿಸಲು ತನ್ನ ಹೊಟ್ಟೆಯನ್ನೇ ಸೀಳಿಕೊಂಡವರು ಶುಕ್ರಾಚಾರ್ಯರು.

ಇನ್ನು ಅವಿವಾಹಿತ ಕನ್ನೆಗೆ ಜನಿಸಿದ ಜಬಾಲನಿಗೆ ತಾನೇ ಉಪಯನಯನ ಮಾಡಿ ವಿದ್ಯೆ ಕಲಿಸಿದ ಗುರು ಹಾರಿದ್ರುಮತರು. ಆತ ಮುಂದೆ ಜಾಬಾಲಿ ಮಹರ್ಷಿ ಎಂದು ಪ್ರಸಿದ್ಧಿಯಾದನು. ಕೇವಲ ಶಸ್ತ್ರ–ಶಾಸ್ತ್ರಗಳಲ್ಲಿ ಮಾತ್ರವಲ್ಲ, ವಿವಿಧ ವೃತ್ತಿಗಳಲ್ಲಿಯೂ ಶಿಷ್ಯರನ್ನು ಪ್ರವೀಣರನ್ನಾಗಿ ಮಾಡುತ್ತಿದ್ದರು. ಅಂಥ ಮಹಾಗುರುಗಳ, ತಪಸ್ವಿಗಳ ಸಂಶೋಧನೆಯಿಂದ, ತ್ಯಾಗದಿಂದ ನಾವಿಂದು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಶ್ರೀ ರಾಮಕೃಷ್ಣಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಗುರು–ಶಿಷ್ಯಸಂಬಂಧ ಲೋಕಕ್ಕೇ ಮಾದರಿ. ಲೋಕಕ್ಕೇ ಗುರುವಾದ ಶ್ರೀಕೃಷ್ಣನೂ ಸಾಂದೀಪನೀ ಆಶ್ರಮದಲ್ಲಿದ್ದು ಶಿಷ್ಯತ್ವ ಸ್ವೀಕಾರ ಮಾಡಿದ್ದು ವಿಶೇಷ. ಇಂದಿನ ಆಧುನಿಕತೆಯ ಸುಳಿಯಲ್ಲಿ ಸಿಲುಕಿರುವ ನಾವು ಗುರುಶಿಷ್ಯ ಪರಂಪರೆಗೆ ತಿಲಾಂಜಲಿ ನೀಡುತ್ತಿದ್ದೇವೆ.

ಗುರುಸ್ಥಾನದಲ್ಲಿ ಇರಬೇಕಾದ ಕೆಲವು ಮಠಾಧೀಶರು ರಾಜಕೀಯದ ರಾಡಿಯನ್ನು ಅಂಟಿಸಿಕೊಳ್ಳುತ್ತಿದ್ದಾರೆ. ಕೆಲವು ಶಿಕ್ಷಕರಿಗೆ ಇದೊಂದು ಸಂಬಳ ತರುವ ಸುಲಭದ ವೃತ್ತಿ. ಎಲ್ಲವೂ ವ್ಯಾವಹಾರಿಕ. ಇದರ ಪರಿಣಾಮ ಮಕ್ಕಳು ಪೋಷಕರನ್ನು ದ್ವೇಷಿಸುವ, ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಹಲ್ಲೆ ಮಾಡುವಂತಹ ಸಮಾಜದ್ರೋಹಿಗಳನ್ನು ಕಾಣುತ್ತಿದ್ದೇವೆ. ಹಾಗಾಗಿ ವಿದ್ಯಾಭ್ಯಾಸ ಕೇವಲ ಉದ್ಯೋಗಕ್ಕಾಗಿ ಸೀಮಿತಗೊಳ್ಳದೇ ನೈತಿಕತೆಯನ್ನು ಸಾರುವ ಮಾನವೀಯತೆಯನ್ನು ಪ್ರತಿಬಿಂಬಿಸುವ ಸತ್ಸಂಪ್ರದಾಯದೊಂದಿಗೆ ಸಮಾಜಸೇವೆಗೈಯ್ಯುವಂತೆ ವಿದ್ಯಾರ್ಥಿಗಳನ್ನು ಬೆಳೆಸಬೇಕು. ಬೋಧಕರೂ ಗುರುಪೂರ್ಣಿಮೆಯ ಮಹತ್ವವನ್ನು ಅರಿತು ತಾವೂ ಶ್ರೇಷ್ಠ ಗುರುಗಳಾಗಲು ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.