
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪವಿತ್ರ ಸ್ಥಾನವಿದೆ. ತುಳಸಿ ಗಿಡಕ್ಕೆ ಪ್ರತಿದಿನ ಪೂಜೆ ಸಲ್ಲಿಸುವುದರಿಂದ ಶುಭಫಲ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಈ ನಡುವೆ ನವೆಂಬರ್ 2ರಂದು ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಲು ಸೂಕ್ತವಾದ ಸಮಯ ಯಾವುದು? ಹೇಗೆ ಪೂಜೆ ಸಲ್ಲಿಸಬೇಕು ಎಂಬುದನ್ನು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಅವರು ವಿವರಿಸಿದ್ದಾರೆ.
ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸಿದರೆ ಒಳಿತಾಗುತ್ತದೆ. ತುಳಸಿ ಗಿಡದಲ್ಲಿ ಲಕ್ಷ್ಮೀ ಹಾಗೂ ವಿಷ್ಣು ನೆಲೆಸಿರುತ್ತಾರೆ. ಹಾಗಾಗಿ ತುಳಸಿ ಗಿಡ ಮನೆಯಲ್ಲಿ ಇರುವುದರಿಂದ ಲಕ್ಷ್ಮೀಯ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಪೂಜಾ ಸಮಯ:
ತುಳಸಿ ಹಬ್ಬದ ದಿನ ಬೆಳಗಿನ ಜಾವ 5 ಗಂಟೆಯಿಂದ 5.48ರ ನಡುವೆ ಪೂಜೆ ಸಲ್ಲಿಸಲು ಪ್ರಸಕ್ತ ಸಮಯವಾಗಿದೆ.
ಸಂಜೆ 6.40 ರಿಂದ 8.40ರ ನಡುವಿನ ವೃಷಭ ಲಗ್ನದಲ್ಲಿಯೂ ಪೂಜೆ ಸಲ್ಲಿಸಬಹುದು.
ಪೂಜಾ ವಿಧಾನ :
ತುಳಸಿಯ ಜೊತೆ ಸಾಲಿಗ್ರಾಮ, ಗೋಮುತಿ ಚಕ್ರ, ಶ್ರೀ ಕೃಷ್ಣನ ವಿಗ್ರಹ, ಬೆಟ್ಟದ ನೆಲ್ಲಿಕಾಯಿ ಅಥವಾ ನವಿಲುಗರಿ ಇಟ್ಟು ಪೂಜಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಕೆಂಪು ಅವಲಕ್ಕಿಯನ್ನು ನೈವೇದ್ಯವಾಗಿ ಇಡುವುದು ಶುಭಕರ. ತುಳಸಿ ಪೂಜೆಯಲ್ಲಿ ಅರಿಶಿನ, ಕುಂಕುಮ, ಹಣ್ಣುಗಳು, ಬಳೆ ಹಾಗೂ ಹೂವು ಇಟ್ಟು ಪೂಜಿಸಬೇಕು.
ಬೆಟ್ಟ ನೆಲ್ಲಿಕಾಯಿ ದೀಪ (ನೆಲ್ಲಿ ಕಾಯಿಯನ್ನು ಹಚ್ಚಿ ಅದರ ಒಳಭಾಗವನ್ನು ತೆಗೆದು ಅದರೊಳಗೆ ತುಪ್ಪದ ದೀಪವನ್ನು ಹಚ್ಚುವುದು)
ಪಂಚ ಗೌವ್ಯ ದೀಪ (ಪಂಚಾಮೃತವನ್ನು ಬಳಸಿಕೊಂಡು ಗೋದಿ ಇಟ್ಟಿನಿಂದ ಬಟ್ಟಲು ಆಕಾರದ ದೀಪ ತಯಾರಿಸಿ ಅದರೊಳಗೆ ತುಪ್ಪದ ದೀಪ ಹಚ್ಚುವುದು)
ತುಳಸಿ ಪೂಜೆಗೆ ಮುನ್ನ ಗಣಪತಿಗೆ ಪೂಜೆ ಸಲ್ಲಿಸಬೇಕು. ಬಳಿಕ ಮನೆ ದೇವರನ್ನು ಪೂಜಿಸಿ, ತುಳಸಿ ಹಾಗೂ ಶ್ರೀ ವಿಷ್ಣುಗೆ ಪೂಜೆ ಸಲ್ಲಿಸಬೇಕು.
ಪೂಜೆಯ ಸಂದರ್ಭದಲ್ಲಿ ಐವರು ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಅರಿಶಿನ ಕುಂಕುಮ ಕೊಟ್ಟು ಅವರ ಆಶೀರ್ವಾದವನ್ನು ಪಡೆಯುವುದು ಶುಭಕರ ಎಂದು ಜ್ಯೋತಿಷಿ ಎಲ್.ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.