ADVERTISEMENT

ವಚನ ವಾಣಿ | ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ-2

ಡಾ.ಬಸವರಾಜ ಸಾದರ
Published 27 ಜುಲೈ 2020, 4:45 IST
Last Updated 27 ಜುಲೈ 2020, 4:45 IST
ಅಕ್ಕಮಹಾದೇವಿ ವಚನಗಳು
ಅಕ್ಕಮಹಾದೇವಿ ವಚನಗಳು   

ಕಲ್ಯಾಣವೆಂಬುದಿನ್ನಾರಿಗೆ ಹೊಗಬಬಹುದು? ಹೊಗಬಾರದು, ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತ್ತಿದ್ದೆನು.
- ಅಕ್ಕಮಹಾದೇವಿ

'ಕಲ್ಯಾಣ' ಎಂದರೆ ಎಲ್ಲರ ಹಿತ ಎಂಬ ಅರ್ಥದ ಶಬ್ದ. ಸುಖ, ಸಮೃದ್ಧಿ ಮತ್ತು ನೆಮ್ಮದಿಗಳನ್ನೆಲ್ಲ ಒಳಗೊಂಡಿರುವ ಅದು “ವೆಲ್ಫೇರ್”‌ ಎಂಬ ವಿಶಿಷ್ಟ ಶಬ್ದಕ್ಕೆ ಸಂವಾದಿಯಾಗಿದೆ. ಶರಣಕ್ರಾಂತಿಯ ಸಂದರ್ಭದಲ್ಲಿ ಕಲ್ಯಾಣ ಎಂಬುದು ಸ್ಥಳಸೂಚಿಯಾಗಿರುವಂತೆಯೇ, ಅದು ಒಟ್ಟು ಸಮುದಾಯದ ಒಳಿತನ್ನು ಹಾಗೂ ಆನುಭಾವಿಕವಾಗಿ ಮನುಷ್ಯನ ಅಂತರಂಗ ಮತ್ತು ಬಹಿರಂಗವೆರಡರ ಸಾಧನೆಯ ಆಶಯದ ಮೌಲ್ಯ ಕೂಡ. ಇಂಥ ಕಲ್ಯಾಣದಲ್ಲಿ ಯಾರು ಬೇಕಾದರೂ ಪ್ರವೇಶಿಸಬಹುದೆ? ಮತ್ತು ಕಲ್ಯಾಣದ ಈ ಆಶಯವನ್ನು ಯಾರು ಬೇಕಾದರೂ ಸಾಧಿಸಲು ಸಾಧ್ಯವೆ? ಎಂಬ ಪ್ರಶ್ನೆಯನ್ನು ಕೇಳುವವರಿಗೆ ಅಕ್ಕಮಹಾದೇವಿ ಹೇಳುತ್ತಾಳೆ, ʼಈ ಕಲ್ಯಾಣದಲ್ಲಿ ಹೊಗುವುದು ಸುಲಭವಲ್ಲ, ಅದನ್ನು ಸಾಧಿಸುವುದೂ ಸರಳವಲ್ಲ, ಅದಕ್ಕೆ ಕೆಲವು ಮಹತ್ವದ ಅರ್ಹತೆಗಳಿವೆ ʼ ಎಂದು. ಅಕ್ಕನ ಈ ವಚನ ಆ ಅರ್ಹತೆಗಳನ್ನೇ ಅನುಕ್ರಮದಲ್ಲಿ ದಾಖಲಿಸುತ್ತದೆ.

ಪಾಡ್‌ಕಾಸ್ಟ್‌ ಕೇಳಲು ಇಲ್ಲಿ ಕ್ಲಿಕ್‌ ಮಾಡಿ: ವಚನ ವಾಣಿ –2

ADVERTISEMENT

ಕಲ್ಯಾಣದತ್ತ ಅಡಿಯಿಡಬೇಕು ಎನ್ನುವವರು ಮೊದಲು ಆಸೆ-ಆಮಿಷಗಳನ್ನು ಅಳಿದಿರಬೇಕು. ಇದು ಅಕ್ಕ ನಿಗದಿ ಮಾಡಿದ ಮೊದಲ ಅರ್ಹತೆ. ಒಳಗು ಮತ್ತು ಹೊರಗು, ಅಂದರೆ ಅಂತರಂಗ ಮತ್ತು ಬಹಿರಂಗ ಎರಡನ್ನೂ ಶುದ್ಧ ಮಾಡಿಕೊಂಡವರು ಮಾತ್ರ ಅಲ್ಲಿ ಪ್ರವೇಶಿಸಲು ಯೋಗ್ಯರು ಎಂಬುದು ಎರಡನೆಯ ಅರ್ಹತೆ. ನಾನು-ನೀನು ಎಂಬ ದ್ವೈತಭಾವವನ್ನು ಅಳಿದು, ನಾವು ಎಂಬ ಅದ್ವೈತದ ನೆಲೆಯನ್ನು ತಿಳಿದುಕೊಂಡವರಿಗೆ ಮಾತ್ರ ಅಲ್ಲಿ ಪ್ರವೇಶ ಎಂಬುದು ಮೂರನೆಯ ಅರ್ಹತೆ. ಇವುಗಳನ್ನು ಸಾಧಿಸದವರಿಗೆ ಕಲ್ಯಾಣವನ್ನು ಪ್ರವೇಶಿಸುವ ಮತ್ತು ಕಲ್ಯಾಣ ಸಾಧಿಸುವ ಅರ್ಹತೆ “ಬಾರದು” ಎಂದು ಸ್ಪಷ್ಟವಾಗಿ ಹೇಳುವ ಅಕ್ಕ ಆ ಮೂಲಕ ಕಲ್ಯಾಣ ಎಂಬುದಕ್ಕೆ ಒಂದು ಅನನ್ಯ ಆವರಣವನ್ನು ಕಲ್ಪಿಸುತ್ತಾಳೆ.

ಮನುಷ್ಯನ ಆತ್ಮಕಲ್ಯಾಣ, ಮನುಷ್ಯ ಸಮುದಾಯದ ಕಲ್ಯಾಣ ಮತ್ತು ಒಟ್ಟಾರೆ ಮನುಕುಲದ ಕಲ್ಯಾಣ ಇವೆಲ್ಲವನ್ನೂ ಅಪೇಕ್ಷಿಸುವವರು ಮೊದಲು ತಾವು ಒಳಗೆ ಮತ್ತು ಹೊರಗೆ ಶುದ್ಧರಾಗಿರಬೇಕೆಂಬದು ಅಕ್ಕನ ಆಶಯ. ಅದು ಇಡೀ ಶರಣ ಸಂಕುಲದ ಗಾಢ ಅಪೇಕ್ಷೆ ಕೂಡ. ಇದು ಸಾಧ್ಯವಾದರೆ ಮನುಷ್ಯನ ವೈಯಕ್ತಿಕ ಕಲ್ಯಾಣವೂ ಸಾಧ್ಯ, ಸಮಾಜ ಮತ್ತು ಜಗದ ಕಲ್ಯಾಣವೂ ಸಾಧ್ಯ.

ಇಂಥ ಆಶಯ ವ್ಯಕ್ತಪಡಿಸುವ ಅಕ್ಕ, ಚೆನ್ನಮಲ್ಲಿಕಾರ್ಜುನನ ಒಲುಮೆಗೆ ಪಾತ್ರಳಾಗಿರುವ ನಾನು ಆ ಮೂಲಕ ಅಂತರಂಗ-ಬಹಿರಂಗ ಎರಡರ ಹಂಗನ್ನೂ ಕಳೆದೊಗೆದು, ಕಲ್ಯಾಣವನ್ನು ಪ್ರವೇಶಿಸುವ ಮತ್ತು ಸಾಧಿಸುವ ಮಾರ್ಗ ಕಂಡುಕೊಂಡಿದ್ದೇನೆ ಎಂದು ಧೈರ್ಯದಿಂದ ಸಾರುತ್ತಾಳೆ ಇಲ್ಲಿ. ಇದು ಅಹಂಕಾರದ ಮಾತಲ್ಲ, ಅಕ್ಕನ ಆತ್ಮಸಾಕ್ಷಿಯ ಭಾಷೆ. ಇಂಥ ಆತ್ಮಸಾಕ್ಷಿಪ್ರಜ್ಞೆ ಎಲ್ಲರದೂ ಆದರೆ ಕಲ್ಯಾಣವೆಂಬುದು ದೂರವಿರಲು ಸಾಧ್ಯವೆ? ಖಂಡಿತ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.