ADVERTISEMENT

ವೇದವ್ಯಾಸರ ಶಿವಪುರಾಣಸಾರ: ಸತಿಯಾಗಲು ಒಪ್ಪಿದ ಜಗನ್ಮಾತೆ

ಭಾಗ –141

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 7 ಜೂನ್ 2022, 19:30 IST
Last Updated 7 ಜೂನ್ 2022, 19:30 IST
   

ಶಿವಶಕ್ತಿಯ ಸಾಕ್ಷಾತ್ಕಾರಕ್ಕೆ ತಪಸ್ಸಿಗೆ ಕುಳಿತ ಬ್ರಹ್ಮ ಪರಿಪರಿಯಾಗಿ ದೇವಿಯನ್ನು ಸ್ತುತಿಸಿದ. ಬ್ರಹ್ಮನ ಧ್ಯಾನಕ್ಕೆ ಮೆಚ್ಚಿದ ಜಗತ್ಕಾರಣಳಾದ ಕಾಳಿದೇವಿಯು ಪ್ರಸನ್ನಳಾಗಿ ಮೇಘಧ್ವನಿಯಂತೆ ಗಂಭೀರವಾದ ಧ್ವನಿಯಿಂದ ಹೇಳಿದಳು: ‘ಎಲೈ ಬ್ರಹ್ಮನೇ! ಏತಕ್ಕಾಗಿ ನೀನು ನನ್ನನ್ನು ಸ್ತುತಿಸುತ್ತಿರುವೆ? ಅಸಾಧ್ಯವಾದಂತಹ ಅದಾವ ಕಾರ್ಯವು ಬಂದೊದಗಿರುವುದು?’

ಆಗ ಬ್ರಹ್ಮ ‘ಓ ದೇವಿ, ನಿನ್ನ ಪ್ರಿಯನಾದ ಶಿವನು ನನ್ನ ಲಲಾಟದಿಂದ ರುದ್ರರೂಪನಾಗಿ ಅವತರಿಸಿದ್ದಾನೆ. ಆ ರುದ್ರನು ಮಹಾಯೋಗಿಯಾಗಿದ್ದು ಕೈಲಾಸಪರ್ವತದಲ್ಲಿ ವಾಸಿಸುತ್ತಿದ್ದಾನೆ. ಆದರೆ ರುದ್ರನು ಪತ್ನಿಯನ್ನು ಪರಿಗ್ರಹಿಸದೇ ಸಂಸಾರವಿಮುಖನಾಗಿ ಓರ್ವನೇ ತಪಸ್ಸನ್ನಾಚರಿಸುತ್ತಿದ್ದಾನೆ. ಅವನು ಪತ್ನಿಯನ್ನು ಅಪೇಕ್ಷಿಸಲು ನಾನು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಆದ್ದರಿಂದ ನೀನು ರುದ್ರದೇವನು ಪತ್ನಿಯನ್ನು ಪರಿಗ್ರಹಿಸಲಿಚ್ಛಿಸುವಂತೆ ಅವನನ್ನು ಮೋಹಗೊಳಿಸಬೇಕು. ನಿನ್ನ ಹೊರತು ಶಿವನ ಮನಸ್ಸನ್ನು ಇನ್ನಾವ ಸ್ತ್ರೀಯೂ ಅಪಹರಿಸಲಾರಳು. ನೀನೇ ಅವತರಿಸಿ ಆ ರುದ್ರನನ್ನು ಮೋಹಗೊಳಿಸು. ಇದಕ್ಕಾಗಿ ದಕ್ಷಬ್ರಹ್ಮನ ಸುತೆಯಾಗಿ ಜನಿಸಿ ರುದ್ರನನ್ನು ಪತಿಯಾಗಿ ವರಿಸು. ನೀನು ಲಕ್ಷ್ಮೀರೂಪದಿಂದ ಅವತರಿಸಿ ಹರಿಯನ್ನು ಮೋಹಗೊಳಿಸಿರುವಂತೆಯೆ, ರುದ್ರನನ್ನೂ ಲೋಕಹಿತಕ್ಕಾಗಿ ಮೋಹಗೊಳಿಸು. ಈ ಹಿಂದೆ ನಾನು ಸ್ತ್ರೀಯಲ್ಲಿ ಅಭಿಲಾಷೆಗೊಂಡಿರುವುದನ್ನು ನೋಡಿ ಆ ರುದ್ರನು ನನ್ನನ್ನು ನಿಂದಿಸಿದ್ದ. ಇಂತಹವನು ತನ್ನ ಇಚ್ಛೆಯಿಂದ ಹೇಗೆ ತಾನೇ ಕಾಮಿನಿಯನ್ನು ಪರಿಗ್ರಹಿಸುತ್ತಾನೆ ಅನ್ನೋ ಅನುಮಾನವೂ ಇದೆ. ರುದ್ರನು ಪತ್ನಿಯನ್ನು ಪರಿಗ್ರಹಿಸದಿದ್ದರೆ ಸೃಷ್ಟಿಯು ಸುಖವಾಗಿ ಹೇಗೆ ಸಾಗುವುದು? ಸೃಷ್ಟಿಯ ಆದಿಮಧ್ಯಾಂತರಗಳಿಗೆ ಕಾರಣನಾದ ರುದ್ರನು ವಿರಕ್ತನಾದರೆ ಸೃಷ್ಟಿಕ್ರಿಯೆ ನಡೆಯುವುದಾದರೂ ಹೇಗೆ ಎಂಬ ಆತಂಕವೂ ನನಗಿದೆ. ಆದುದರಿಂದ ನೀನು ರುದ್ರನ ಪತ್ನಿಯಾಗಲು ಮಹಾಯೋಗಿಯಾದ ಅವನನ್ನು ಮೋಹಗೊಳಿಸು. ಈಗಾಗಲೇ ದಕ್ಷನು ಮನಸ್ಸನ್ನು ಸ್ಥಿರೀಕರಿಸಿ ಜಿತೇಂದ್ರಿಯನಾಗಿ ನಿಯಮಬದ್ಧನಾಗಿ ಕ್ಷೀರಸಾಗರದ ಉತ್ತರತೀರದಲ್ಲಿ ನಿನ್ನನ್ನುದ್ದೇಶಿಸಿ ತಪಸ್ಸು ಮಾಡುತ್ತಿದ್ದಾನೆ. ನೀನು ಅವನ ಮಗಳಾಗಿ ಜನಿಸಬೇಕೆಂದು ಬಯಸಿದ್ದಾನೆ. ನಮ್ಮಿಬ್ಬರ ಬಯಕೆಯಂತೆ ನೀನು ದಿವ್ಯವಾದ ರೂಪವುಳ್ಳವಳಾಗಿ ದಕ್ಷನ ಪುತ್ರಿಯಾಗಿ ಜನಿಸಬೇಕು’ ಎಂದು ಕೋರುತ್ತಾನೆ.

‘ಪರಬ್ರಹ್ಮಸ್ವರೂಪನಾದ ಶಂಕರನು ಪ್ರಕೃತಿ ಸಂಬಂಧವಾದ ಯಾವ ಗುಣಗಳು ಇಲ್ಲದ ಪರಬ್ರಹ್ಮಸ್ವರೂಪ; ಯಾವ ವಿಕಾರಗಳೂ ಇಲ್ಲದವನು. ಆ ಶಂಕನಿಗೆ ನಾನು ಪರಿಚಾರಕಳು. ಅವನ ಅಪ್ಪಣೆಯಂತೆ ಸದಾ ನಡೆಯತಕ್ಕವಳು. ಹೀಗಾಗಿ ನಿನ್ನ ಕೋರಿಕೆಯನ್ನು ಈಡೇರಿಸುವುದು ಬಹಳ ಕಷ್ಟ. ನಾನು ನಿನಗೆ ವರವನ್ನು ಕೊಡದಿದ್ದರೆ, ದೇವಿಯನ್ನು ಧ್ಯಾನಿಸಿದರೆ ಬೇಕಾದುದನ್ನು ಪಡೆಯಬಹುದು ಎಂಬ ವೇದನೀತಿಯು ಸುಳ್ಳಾಗುವುದು. ವರವನ್ನು ಕೊಟ್ಟರೆ ನನ್ನ ಸ್ವಾಮಿಯಾದ ಆ ಶಿವನು ಕೋಪಗೊಳ್ಳುವನೋ ಏನೋ? ಆದ ಕಾರಣ ಈಗೇನು ಮಾಡಲಿ?’ ಎಂದು ಆಲೋಚಿಸಿದ ದೇವಿಯು, ಪರಮೇಶ್ವರನನ್ನು ಸ್ಮರಿಸಿ ಅವನ ಅನುಜ್ಞೆಯನ್ನು ಪಡೆದು ಬಳಿಕ ಬ್ರಹ್ಮನಿಗೆ ಹೀಗೆ ಹೇಳಿದಳು.

ADVERTISEMENT

‘ಬ್ರಹ್ಮ, ನೀನು ಹೇಳಿದುದೆಲ್ಲವೂ ನಿಜವಾದುದು. ನನ್ನ ಹೊರತು ಇನ್ನಾರೂ ಶಂಕರನನ್ನು ಮೋಹಗೊಳಿಸಲಾರರು. ಹರನು ಪತ್ನಿಯನ್ನು ಪರಿಗ್ರಹಿಸದಿದ್ದರೆ ಅನಾದಿಯಾದ ಈ ಸೃಷ್ಟಿಯು ನಡೆಯಲಾರದೆಂಬುದು ನಿಜವಾದ ಮಾತು. ಅದಕ್ಕಾಗಿ ಹರನು ಮೋಹಗೊಂಡು ತಾನಾಗಿಯೇ ಪತ್ನಿಯನ್ನು ಪರಿಗ್ರಹಿಸುವಂತೆ ಮಾಡುವೆ. ನಾನು ದಕ್ಷನ ಪತ್ನಿಯ ಗರ್ಭದಲ್ಲಿ ಸತೀದೇವಿಯ ರೂಪದಿಂದ ಅವತರಿಸಿ, ಹರನನ್ನು ಮದುವೆಯಾಗುವೆ. ವಿಷ್ಣುವಿಗೆ ಲಕ್ಷ್ಮಿಯು ಹೇಗೋ ಹಾಗೆ ಅವನಿಗೆ ಪ್ರಿಯಳಾಗಿರುವೆ. ಲೋಕದಲ್ಲಿ ಸಾಮಾನ್ಯ ಪ್ರಾಣಿಯು ಸ್ತ್ರೀಯ ವಶದಲ್ಲಿರುವಂತೆ ಶಿವನನ್ನೂ ಭಕ್ತಿಯಿಂದ ನನ್ನ ವಶದಲ್ಲಿಟ್ಟುಕೊಳ್ಳುವೆ’ ಎಂದು ಬ್ರಹ್ಮನಿಗೆ ಭರವಸೆ ನೀಡಿದ ಜಗನ್ಮಾತೆಯಾದ ದೇವಿಯು ಬ್ರಹ್ಮ ನೋಡುತ್ತಿರುವಂತೆ ಅಲ್ಲಿಯೇ ಅಂತರ್ಧಾನಳಾದಳು.

ಮಹಾದೇವಿಯು ಅಂತರ್ಧಾನಳಾದ ನಂತರ ಜಗತ್ತಿಗೆ ತಾತನೆನಿಸಿದ ಬ್ರಹ್ಮ ತನ್ನ ಕೋರಿಕೆ ಈಡೇರಿದ ಸಂತೃಪ್ತಿಯಿಂದ ತನ್ನ ಮಾನಸಪುತ್ರರಾದ ದಕ್ಷನೇ ಮೊದಲಾದವರು ಇರುವಲ್ಲಿಗೆ ತೆರಳಿದನು ಎಂಬಲ್ಲಿಗೆ ಶಿವಪುರಾಣದ ಎರಡನೇ ಸಂಹಿತೆಯಾದ ರುದ್ರಸಂಹಿತೆಯಲ್ಲಿನ ಸತೀಖಂಡದ ಹನ್ನೊಂದನೆಯ ಅಧ್ಯಾಯವು ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.