ADVERTISEMENT

ವೇದವ್ಯಾಸರ ಶಿವಪುರಾಣಸಾರ | ದೇವತೆಗಳಿಗೆ ಶಾಪವಿತ್ತ ದಧೀಚಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 1 ಆಗಸ್ಟ್ 2022, 21:15 IST
Last Updated 1 ಆಗಸ್ಟ್ 2022, 21:15 IST
   

ವಿಷ್ಣುಗಣಗಳು ಭಸ್ಮವಾದುದನ್ನು ನೋಡಿ ಹರಿಯು ದಧೀಚಿಯನ್ನು ತಬ್ಬಿಬ್ಬುಗೊಳಿಸಲು ತನ್ನ ವಿರಾಟ್ ಸ್ವರೂಪವನ್ನು ತೋರಿಸಿದ. ಹರಿಯ ವಿಶ್ವರೂಪ ಶರೀರದಲ್ಲಿ ಸಾವಿರಾರು ದೇವತೆಗಳು, ರಾಕ್ಷಸರು, ಜೀವರುಗಳು ಇರುವುದನ್ನುದಧೀಚಿನೋಡಿದ. ಆ ಶರೀರದಲ್ಲಿ ಭೂತಕೋಟಿಗಳನ್ನು, ಕೋಟಿ ಕೋಟಿ ಗಣಗಳನ್ನು, ಅನೇಕ ಕೋಟಿ ಬ್ರಹ್ಮಾಂಡಗಳನ್ನೂ ನೋಡಿದ. ಮಹಾದ್ಭುತವಾದ ವಿಶ್ವರೂಪವನ್ನು ನೋಡಿದ ದಧೀಚಿಯು ಹೇಳಿದ: ‘ಎಲೈ ಹರಿಯೇ, ನಿನ್ನ ಮಾಯೆಯನ್ನು ತ್ಯಜಿಸು. ವಿಚಾರಮಾಡಿದರೆ ಇವೆಲ್ಲವೂ ಸುಳ್ಳು. ಇಂತಹ ಸಹಸ್ರಾರು ಮಾಯೆಗಳು ನನಗೆ ತಿಳಿದಿರುವುದು. ನನ್ನಲ್ಲಿಯೂ ಜಗತ್ತೆಲ್ಲವೂ ಇರುವುದು ನೋಡು. ನೀನೂ ರುದ್ರನೂ ಬ್ರಹ್ಮನೂ ಎಲ್ಲರೂ ನನ್ನಲ್ಲಿ ಇರುವಿರಿ. ನಿನಗೆ ದಿವ್ಯದೃಷ್ಠಿಯನ್ನು ಕೊಡುವೆನು ನೋಡು’ ಎಂದು ಶಿವನ ತೇಜಸ್ಸಿನಿಂದ ತನ್ನ ಶರೀರದಲ್ಲಿ ಬ್ರಹ್ಮಾಂಡವೆಲ್ಲ ಇರುವುದನ್ನು ಹರಿಗೆ ತೋರಿಸಿದ.

ನಂತರ ಹೇಳಿದ: ‘ಎಲೈ ಹರಿ, ಈ ಮಾಯೆಯಿಂದಲಾಗಲೀ ಮಂತ್ರಶಕ್ತಿಯಿಂದಾಗಲೀ ಏನೂ ಪ್ರಯೋಜನವಿಲ್ಲ. ಇದೆಲ್ಲವೂ ಸುಳ್ಳು. ಸತ್ಕಾಮನೆಯಿಂದ ನನ್ನೊಡನೆ ಯುದ್ಧ ಮಾಡು’ ಎಂದು ಪ್ರಚೋದಿಸಿದ. ದಧೀಚಿಯ ಮಾತನ್ನು ಕೇಳಿ ಹರಿಯು ತುಂಬಾ ಕೋಪಗೊಂಡು ಯುದ್ಧಸನ್ನದ್ಧನಾದ. ಆಗ ಓಡಿಹೋಗಿದ್ದ ದೇವತೆಗಳೆಲ್ಲರೂ ಮತ್ತೆ ಹರಿಗೆ ಸಹಾಯಕರಾಗಿ ಬಂದರು. ವಿಷ್ಣು-ದಧೀಚಿನಡುವೆ ಯುದ್ಧವಾದರೆ ವಿಶ್ವಕ್ಕೆ ಹಾನಿಯಾಗುತ್ತದೆ ಎಂದು ಬ್ರಹ್ಮ ಆತಂಕಿತನಾದ. ಹೇಗಾದರೂ ಯುದ್ಧವನ್ನು ತಪ್ಪಿಸಬೇಕೆಂದು ಕ್ಷುವರಾಜನಿಗೆ ಸೂಚಿಸಿದ. ಕ್ಷುವರಾಜ ವಿಷ್ಣುವನ್ನು ಮುನಿಯೊಡನೆ ಯುದ್ಧ ಮಾಡಬೇಡವೆಂದು ತಡೆದ. ಹಾಗೇ, ಯುದ್ಧಸನ್ನದ್ದನಾದ ದಧೀಚಿಯನ್ನು ಹೀಗೆ ಪ್ರಾರ್ಥಿಸಿದ: ‘ಓ ಮುನಿಶ್ರೇಷ್ಠನೇ, ಪ್ರಸನ್ನನಾಗು. ನೀನು ಶಿವಭಕ್ತಶಿಖಾಮಣಿಯು, ಪರಮೇಶ್ವರಸ್ವರೂಪನು. ದುರ್ಜನರಿಗೆ ನಿನ್ನ ಸ್ವರೂಪವು ತಿಳಿಯದು. ಕೋಪವನ್ನು ಬಿಡು’.

ದಧೀಚಿಯು ಕರುಣೆಯಿಂದ ಕ್ಷುವರಾಜನನ್ನು ಅನುಗ್ರಹಿಸಿದ. ಬಳಿಕ ತನ್ನೊಡನೆ ಯುದ್ಧಮಾಡಿದಂತಹ ವಿಷ್ಣು ಮೊದಲಾದ ದೇವತೆಗಳನ್ನು ನೋಡಿ ಕೋಪಗೊಂಡು ‘ಎಲೈ ವಿಷ್ಣು, ಮತ್ತು ದೇವತೆಗಳಿರಾ, ಮೂರ್ಖರಂತೆ ನನ್ನಂಥ ಶಿವಭಕ್ತನೊಂದಿಗೆ ಕಾದಾಡಲು ಬಂದಿದ್ದೀರ. ಈ ಪಾಪಕ್ಕಾಗಿ ಮುಂದೊಮ್ಮೆ ನೀವು ಮೂಢರಂತೆ ಶಿವದ್ರೋಹಿಯ ಪರವಾಗಿ ನಿಂತು ರುದ್ರನ ಕೋಪಕ್ಕೆ ಪಾತ್ರರಾಗಿ ನಾಶವನ್ನು ಹೊಂದಿರಿ’ ಎಂದು ಶಪಿಸಿದ.

ADVERTISEMENT

ಕ್ಷುವರಾಜನಿಗೆ ‘ಎಲೈ ರಾಜೇಂದ್ರನೆ, ಬ್ರಾಹ್ಮಣನು ದೇವತೆಗಳಿಂದಲೂ ರಾಜರುಗಳಿಂದಲೂ ಪೂಜಿಸಲರ್ಹನು. ಇದನ್ನು ಚೆನ್ನಾಗಿ ನೆನಪಿಟ್ಟುಕೋ’ ಎಂದು ಹೇಳಿ ದಧೀಚಿಮುನಿಯು ತನ್ನಾಶ್ರಮಕ್ಕೆ ತೆರಳಿದ. ಹಾಗೆಯೇ, ಕ್ಷುವರಾಜನೂ ದಧೀಚಿಮುನಿಯನ್ನು ನಮಸ್ಕರಿಸಿ ತನ್ನ ಅರಮನೆಗೆ ಹೋದ. ವಿಷ್ಣು, ಇಂದ್ರಾದಿ ದೇವತೆಗಳೂ ತಮ್ಮತಮ್ಮ ಸ್ಥಾನಗಳಿಗೆ ಹೊರಟು ಹೋದರು.

ದಧೀಚಿಯ ಶಾಪದಿಂದ ವಿಷ್ಣು ಮತ್ತು ದೇವತೆಗಳು ಮೂಢರಂತೆ ಶಿವದ್ರೋಹಿ ದಕ್ಷಬ್ರಹ್ಮನ ಬೆಂಬಲಿಸಿ, ಶಿವನ ಕೋಪಕ್ಕೆ ತುತ್ತಾದರು ಎಂದು ಬ್ರಹ್ಮ ತನ್ನ ಮಗ ನಾರದನಿಗೆ ಸಂಕ್ಷೇಪವಾಗಿ ಹಿಂದಿನ ಶಾಪದ ಕಥೆಯನ್ನ ತಿಳಿಸುತ್ತಾನೆ. ಹಾಗೇ,ದಧೀಚಿಮತ್ತು ವಿಷ್ಣು ಯುದ್ಧಮಾಡಿದ ಸ್ಥಾನವು ‘ಸ್ಥಾನೇಶ್ವರ’ ಎಂಬ ಪ್ರಸಿದ್ಧ ತೀರ್ಥಕ್ಷೇತ್ರವಾಯಿತು. ಸ್ಥಾನೇಶ್ವರ ತೀರ್ಥಕ್ಷೇತ್ರದ ದರ್ಶನದಿಂದ ಶಿವಸಾಯುಜ್ಯವು ಲಭಿಸುವುದು. ಹಾಗೆಯೇ, ಕ್ಷುವರಾಜ ಮತ್ತು ದಧೀಚಿಮುನಿಗಳ ಕಥೆಯನ್ನು ಯಾರು ಶ್ರದ್ಧೆಯಿಂದ ಕೇಳುವರೋ, ಅವರು ಅಪಮೃತ್ಯುವನ್ನು ಜಯಿಸಿ, ಬ್ರಹ್ಮಲೋಕವನ್ನು ಸೇರುವರು. ಈ ಕಥೆ ಕೇಳಿದ ಯೋಧನಿಗೆ ರಣರಂಗದಲ್ಲಿ ಮರಣಭಯವೇ ಇರವುದಿಲ್ಲ. ಅವನಿಗೆ ಯುದ್ಧದಲ್ಲಿ ವಿಜಯವೂ ಲಭಿಸುವುದು ಖಚಿತ ಎಂದು ಬ್ರಹ್ಮ ಹೇಳುವಲ್ಲಿಗೆ ಮೂವತ್ತೊಂಬತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.