ADVERTISEMENT

ಮಡಿಕೇರಿ: ಕಾಡುಪಾಪ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST

ಮಡಿಕೇರಿ:  ನಗರದ ‘ಸ್ಟೋನ್ ಹಿಲ್’ ಬಳಿ ಗುರುವಾರ ಅಪರೂಪದ ‘ಸ್ಲೆಂಡರ್ ಲಾರಿಸ್’ ಕಾಡುಪಾಪ ಕಾಣಿಸಿಕೊಂಡಿದ್ದು ಅದನ್ನು ರಕ್ಷಿಸಲಾಗಿದೆ. ‘ಸ್ಟೋನ್ ಹಿಲ್’ ಬಳಿ ಕಾಡಿಗೆ ಈಚೆಗೆ ಬೆಂಕಿ ಬಿದ್ದಿದ್ದರಿಂದ ಪ್ರಾಣ ರಕ್ಷಣೆಗಾಗಿ ಇದು ಈಚೆಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಸ್ಥಳಕ್ಕೆ ತೆರಳಿದ್ದಾಗ ಸ್ಥಳೀಯರೊಬ್ಬರು ಅದನ್ನು  ಒಪ್ಪಿಸಿದರು. ಅಗ್ನಿಶಾಮಕ ಸಿಬ್ಬಂದಿ ಈ ಕಾಡುಪಾಪವನ್ನು ಅರಣ್ಯ ಇಲಾಖೆಗೆ ನೀಡಿದರು. ಕಾಲುಗಳು ಸ್ವಲ್ಪ ಸುಟ್ಟಿದ್ದು ಅಪರೂಪದ ‘ಅತಿಥಿ’ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಪಶುಪಾಲನಾ ಇಲಾಖೆಯ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದರು. ಅದು ಚೇತರಿಸಿಕೊಂಡ ನಂತರ ಅರಣ್ಯ ಭವನದ ಬಳಿಯ ಕಾಡಿಗೆ ಬಿಡಲಾಯಿತು.

ರಾತ್ರಿ ವೇಳೆ ಮಾತ್ರ ಚುರುಕಾಗಿರುವ ಈ ಕಾಡುಪಾಪಗೆ ಹಗಲಿನ ವೇಳೆ ಕಣ್ಣು ಕಾಣುವುದಿಲ್ಲ. ಕೊಡಗಿನ ಪುಷ್ಪಗಿರಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಲ್ಲಿ ಇಂತಹ ಅಪರೂಪದ ‘ಸ್ಲೆಂಡರ್ ಲಾರಿಸ್’ ಕಾಡುಪಾಪಗಳು ಕಾಣ ಸಿಗುತ್ತವೆ. ಈ ಕಾಡುಪಾಪವನ್ನೇ ಪುಷ್ಪಗಿರಿ ವನ್ಯಜೀವಿ ವಿಭಾಗದ ‘ಲೋಗೋ’ವನ್ನಾಗಿ ಬಳಸಿಕೊಂಡಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.