ADVERTISEMENT

ರಾಯಚೂರು: ಕೃಷಿ ಮೇಳ ಆರಂಭ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ರಾಯಚೂರು: ತೋಟಗಾರಿಕೆ ಬೆಳೆ ಬೀಜ, ಅಪರೂಪದ ಜಾನುವಾರು,   ಭೂಮಿ ಸಂರಕ್ಷಣೆ, ಹತ್ತಾರು ಬಗೆಯ ಕೃಷಿ ಯಂತ್ರೋಪಕರಣ, ವಿವಿಧ ತಳಿಯ ಬೆಳೆ, ಕೃಷಿ ಸಂಶೋಧನೆಗಳು, ಲಾಭದಾಯಕ ಕೃಷಿ ವಿಧಾನ, ಎಲ್ಲಕ್ಕಿಂತ ಹೆಚ್ಚಾಗಿ ದಶಕಗಳ ಕಾಲ ಕೃಷಿ ಮಾಡಿ ಯಶಸ್ವಿಯಾದ ರೈತರ ಯಶೋಗಾಥೆ ನುಡಿಗಳು... 

 ಹೀಗೆ ಹತ್ತು ಹಲವು ಉಪಯುಕ್ತ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನವನ್ನು ಶುಕ್ರವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭಗೊಂಡ `ಕೃಷಿ ಮೇಳ~ದಲ್ಲಿ ಏರ್ಪಡಿಸಲಾಗಿತ್ತು. ಕೃಷಿ ಮೇಳದ ಮೊದಲ ದಿನವಾಗಿದ್ದರಿಂದ ಶುಕ್ರವಾರ ಮಧ್ಯಾಹ್ನದವರೆಗೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿರಲಿಲ್ಲ. ಕೃಷಿ ವಿವಿ ಸಿಬ್ಬಂದಿ, ವಿದ್ಯಾರ್ಥಿಗಳ ಓಡಾಟವೇ ಹೆಚ್ಚಾಗಿತ್ತು. ಮಧ್ಯಾಹ್ನದ ಬಳಿಕ ಜಿಲ್ಲೆಯ ವಿವಿಧ ಭಾಗ, ಹೊರ ಜಿಲ್ಲೆಗಳಿಂದ ಕೆಲ ರೈತರು ಬಂದರು.

ಪ್ರತಿ ವರ್ಷ ಮೊದಲ ದಿನ ಕೃಷಿ ಮೇಳ ಉದ್ಘಾಟನೆಯನ್ನು ಕೃಷಿ ಸಚಿವರು ನೆರವೇರಿಸುತ್ತಿದ್ದರು. ಕೃಷಿ ಇಲಾಖೆ ಹಾಗೂ ವಿವಿ ಹೆಚ್ಚಿನ ರೈತರನ್ನು ಕರೆತರಲು ಮುತುವರ್ಜಿ ವಹಿಸುತ್ತಿದ್ದವು. ಸಾರ್ವಜನಿಕರು ಆಗಮಿಸುತ್ತಿದ್ದರಿಂದ ಹೆಚ್ಚಿನ ಜನ ಕಾಣಿಸುತ್ತಿದ್ದರು. ಈ ಬಾರಿ ಎರಡನೇ ದಿನ (ಶನಿವಾರ) ಉದ್ಘಾಟನೆ ಸಮಾರಂಭವಿದ್ದು, ಜನರ ಗೈರು ಎದ್ದು ತೋರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.