ADVERTISEMENT

ಸೌರಶಕ್ತಿ ಭವಿಷ್ಯದ ಇಂಧನ ಮೂಲ: ಶೋಭಾ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ತುಮಕೂರು: ರಾಜ್ಯದಲ್ಲಿ 2016ರ ವೇಳೆಗೆ ಸೌರಶಕ್ತಿಯಿಂದ 200 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಪ್ರಸ್ತುತ ಸೌರಶಕ್ತಿಯಿಂದ 80 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆಯಲಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಹೇಳಿದರು.

ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸೋಲಾರ್ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸೌರಶಕ್ತಿ ಭವಿಷ್ಯದ ಇಂಧನ ಮೂಲ ಎಂದು ವ್ಯಾಖ್ಯಾನಿಸಿದರು.

 ಬೆಂಗಳೂರಿನಲ್ಲಿ ಹೊಸದಾಗಿ ಮನೆ ಕಟ್ಟಿಸುವವರು ಸೌರಶಕ್ತಿ ಅಳವಡಿಸುವುದು ಕಡ್ಡಾಯ. ಈ ಬಗ್ಗೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಸೌರಶಕ್ತಿ ವಿವಿಧ ಬಳಕೆ ಪರಿಚಯಿಸಲು ಬೆಂಗಳೂರು ಇಂದಿರಾಗಾಂಧಿ ಸಂಗೀತ ಕಾರಂಜಿಯಲ್ಲಿ ಶಾಶ್ವತ ಮಳಿಗೆ ತೆರೆಯಲಾಗಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶೀಘ್ರ ಸೌರಶಕ್ತಿ ಮೇಳ ಆಯೋಜಿಸಲಾಗುವುದೆಂದರು.

ಬೇಸಿಗೆಯಲ್ಲಿ ವಿದ್ಯುತ್ ಕೊರತೆ ನೀಗಿಸಲು ಸಕ್ಕರೆ ಕಾರ್ಖಾನೆಗಳಿಂದ 400 ಮೆಗಾವಾಟ್ ವಿದ್ಯುತ್ ಖರೀದಿಸಲಾಗುವುದು. ಫೆ. 1ರಿಂದಲೇ ವಿದ್ಯುತ್ ಖರೀದಿ ಪ್ರಾರಂಭವಾಗಲಿದೆ. ಪ್ರಸ್ತುತ ಖಾಸಗಿ ಕಂಪೆನಿಗಳಿಂದ ಪ್ರತಿ ಯೂನಿಟ್‌ಗೆ ರೂ. 5.30ರಂತೆ ಖರೀದಿಸಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೂ ಇದೆ ದರ ನೀಡಲಾಗುವುದು ಎಂದು ಹೇಳಿದರು.

 ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕದ 8 ಸ್ಥಾವರಗಳ ಪೈಕಿ ಕೇವಲ 6 ಕಾರ್ಯನಿರ್ವಹಿಸುತ್ತಿವೆ.ಕಲ್ಲಿದ್ದಲು ಸಮಸ್ಯೆಯಿಂದ 2 ಘಟಕಗಳು ಸ್ಥಗಿತಗೊಂಡಿವೆ. ಸ್ಥಾವರಗಳ ಸಾಮರ್ಥ್ಯದ ಶೇ. 60ರಷ್ಟು ಕಲ್ಲಿದ್ದಲನ್ನು ಕೇಂದ್ರ ಪೂರೈಸುತ್ತಿದೆ. ಸಮರ್ಪಕ ಕಲ್ಲಿದ್ದಲು ಪೂರೈಕೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಹೋರಾಟ ಅನಿವಾರ್ಯವಾಗಬಹುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.