ADVERTISEMENT

‘ಆದರ್ಶ’ ನಿಲ್ದಾಣ; ಹನಿ ನೀರಿಗೂ ತತ್ವಾರ!

ರೈಲ್ವೆ ಪ್ರಯಾಣಿಕರು, ವಸತಿ ಗೃಹ ನಿವಾಸಿಗಳ ಪರದಾಟ

ವೆಂಕಟೇಶ್ ಜಿ.ಎಚ್
Published 18 ಆಗಸ್ಟ್ 2016, 7:12 IST
Last Updated 18 ಆಗಸ್ಟ್ 2016, 7:12 IST
‘ಆದರ್ಶ’ ನಿಲ್ದಾಣ; ಹನಿ ನೀರಿಗೂ ತತ್ವಾರ!
‘ಆದರ್ಶ’ ನಿಲ್ದಾಣ; ಹನಿ ನೀರಿಗೂ ತತ್ವಾರ!   

ಬಾಗಲಕೋಟೆ: ಕೇಂದ್ರ ಸರ್ಕಾರದ ‘ಆದರ್ಶ ನಿಲ್ದಾಣ’ಗಳ ಪಟ್ಟಿಯಲ್ಲಿರುವ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಈಗ ಹನಿ ನೀರಿಗೂ ತತ್ವಾರ ಉಂಟಾಗಿದೆ.
ರೈಲು ನಿಲ್ದಾಣಕ್ಕೆ ಬರುವ ಪ್ರಯಾ ಣಿಕರು, ಅಲ್ಲಿನ ಸಿಬ್ಬಂದಿ ಅವರ ಕುಟುಂಬಗಳು ಹಾಗೂ ರೈಲ್ವೆ ಗೂಡ್ಸ್‌ ಶೆಡ್‌ಗೆ ಬರುವ ಕೆಲಸಗಾರರು, ವಾಹನ ಚಾಲಕರು ಕಳೆದೊಂದು ವಾರದಿಂದ ಕುಡಿಯುವ ನೀರು ಸಿಗದೇ ಬವಣೆ ಅನು ಭವಿಸುತ್ತಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿ ರುವ ಉಪಾಹಾರ ಗೃಹ, ಅಂಗಡಿ ಗಳವರೂ ನೀರಿನ ತೊಂದರೆ ಎದುರಿಸುತ್ತಿದ್ದಾರೆ.

ವಸತಿಗೃಹ, ಶೌಚಾಲಯ ಬಂದ್: ನೀರು ಇಲ್ಲದ ಕಾರಣ ರೈಲು ನಿಲ್ದಾಣದಲ್ಲಿರುವ ಅತ್ಯಾಧುನಿಕ ವಸತಿಗೃಹಕ್ಕೆ ಪ್ರವಾಸಿಗರ ಮುಂಗಡ ಕಾಯ್ದಿರಿಸುವಿಕೆಯನ್ನು (ಬುಕ್ಕಿಂಗ್) ಕಳೆದೊಂದು ವಾರದಿಂದ ಬಂದ್ ಮಾಡಲಾಗಿದೆ. ಜೊತೆಗೆ ಶೌಚಾ ಲಯಕ್ಕೂ ಬೀಗ ಜಡಿಯಲಾಗಿದೆ. ಪ್ರಯಾಣಿಕರ ಬಳಕೆಗೆ ಹಾಕಿರುವ ನಳಗಳು ನೀರಿಲ್ಲದೇ ಭಣಗುಡುತ್ತಿವೆ. ಜೊತೆಗೆ ಮುಂಜಾನೆ ಇದೇ ರೈಲು ನಿಲ್ದಾ ಣದಿಂದ ಹೊರಡುವ ಬಸವ ಎಕ್ಸ್‌ ಪ್ರೆಸ್‌ಗೆ ವಿಜಯಪುರದಲ್ಲಿ ನೀರು ತುಂಬಿಸ ಲಾಗುತ್ತಿದೆ. ಉಪಾಹಾರ ಗೃಹದಲ್ಲಿ ಹೊರಗಿನಿಂದ ನೀರು ತಂದು ಗ್ರಾಹಕರಿಗೆ ಕೊಡಲಾಗುತ್ತಿದೆ.

ಕೊಳವೆ ಬಾವಿ ಇದೆ. ವಿದ್ಯುತ್ ಸಂಪರ್ಕ ಇಲ್ಲ: ‘ಹಳೆಯ ಕೊಳವೆಬಾವಿ ಅಂತರ್ಜಲ ಬರಿದಾಗಿ ಬತ್ತಿ ಹೋದ ಪರಿಣಾಮ ಒಂದೂವರೆ ತಿಂಗಳ ಹಿಂದೆ ಹೊಸ ಕೊಳವೆ ಬಾವಿ ಕೊರೆಸಲಾಗಿದೆ. ಅದರಲ್ಲಿ 4 ಇಂಚು ನೀರು ಬಿದ್ದಿದೆ. ಆದರೆ ಅದಕ್ಕೆ ಇನ್ನೂ ಮೋಟಾರು ಕೂರಿಸಿ ಪೈಪ್‌ಲೈನ್ ಹಾಕದ ಪರಿಣಾಮ ನೀರು ಪೂರೈಕೆ ಇಲ್ಲವಾಗಿದೆ. ಈ ಹಿಂದೆ ಮುಚ್ಚಿಹೋಗಿದ್ದ ಕೊಳವೆಬಾವಿಯನ್ನು ಪುನಶ್ಚೇತನಗೊಳಿಸಿ ಇಷ್ಟು ದಿನ ಅದರಿಂದಲೇ ನೀರು ಕೊಡಲಾಗುತ್ತಿತ್ತು. ಈಗ ಅದೂ ಬತ್ತಿ ಹೋಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಜಟಿಲಗೊಂಡಿದೆ’ ಎಂದು ರೈಲ್ವೆ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.

ಟ್ಯಾಂಕರ್ ಮೂಲಕ ಪೂರೈಕೆ: ಕಳೆದ ಎರಡು ದಿನಗಳಿಂದ ರೈಲ್ವೆ ಸಿಬ್ಬಂದಿ ವಸತಿ ಗೃಹಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 200ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ನೆಲೆಸಿದ್ದು, ಪೂರೈ ಸುವ ಮೂರು ಟ್ಯಾಂಕರ್ ನೀರು ಯಾವು ದಕ್ಕೂ ಸಾಲುವುದಿಲ್ಲ. ರೈಲು ನಿಲ್ದಾಣದ ಹೊರಗಿನ ಲಕ್ಷ್ಮೀ ಗುಡಿ ಪ್ರದೇಶದಿಂದ ನೀರು ತರುತ್ತಿರುವುದಾಗಿ ಅಲ್ಲಿನ ನಿವಾಸಿ ಆನಂದ್ ದೂರುತ್ತಾರೆ. ಜೊತೆಗೆ ವಸತಿ ಗೃಹಗಳ ಮೂರನೇ ಮಹಡಿಯಲ್ಲಿರುವ ನಿವಾಸಿಗಳು ನೀರು ಕೊಂಡೊಯ್ಯಲು ಹರಸಾಹಸಪಡಬೇಕಾಗಿದೆ.

ಬಿ ದರ್ಜೆ ನಿಲ್ದಾಣ: ಬಾಗಲಕೋಟೆ ‘ಬಿ ದರ್ಜೆಯ ನಿಲ್ದಾಣವಾಗಿದ್ದು, ನಾಲ್ಕು ಪ್ರಮುಖ ರೈಲುಗಳು ಸೇರಿದಂತೆ ನಿತ್ಯ 14 ರೈಲುಗಳು ಸಂಚರಿಸುತ್ತವೆ. ಶುಕ್ರವಾರ ಹಾಗೂ ಭಾನುವಾರ 16 ರೈಲುಗಳು ಓಡಾಟ ನಡೆಸುತ್ತವೆ. ಜೊತೆಗೆ  ಗೂಡ್ಸ್ ರೈಲುಗಳ ಓಡಾಟವೂ ಹೆಚ್ಚಿದೆ. ನೀರಿ ಲ್ಲದ ಕಾರಣ ಬುಧವಾರ ಗೂಡ್‌ಶೆಡ್‌ನ ಹಮಾಲರು ಕೆಲಸಕ್ಕೆ ಬಂದಿಲ್ಲ ಎಂದು ಕೂಲಿ ಕಾರ್ಮಿಕರ ಗುತ್ತಿಗೆದಾರ ಹನುಮಂತ ಕೋವನಹಳ್ಳಿ         ಹೇಳುತ್ತಾರೆ.

ನಾಚಿಕೆಗೇಡು: ‘ಐಹೊಳೆ,ಪಟ್ಟದಕಲ್ಲಿಗೆ ತೆರಳಲು ವಿದೇಶಿ ಪ್ರವಾಸಿಗರು ನಿತ್ಯ ಬಾಗಲಕೋಟೆ ರೈಲು ನಿಲ್ದಾಣಕ್ಕೆ ಬರುತ್ತಾರೆ. ಮುಂಜಾನೆ 7.20ಕ್ಕೆ ಬರುವ ಗೋಲಗುಂಬಜ್ ಎಕ್ಸ್‌ಪ್ರೆಸ್‌ಗೆ ಮೈಸೂರು, ಬೆಂಗಳೂರು ಭಾಗ ದಿಂದಲೂ ಹೆಚ್ಚು ಮಂದಿ ಪ್ರವಾಸಿಗರು ಇರುತ್ತಾರೆ. ನಿಲ್ದಾಣದಲ್ಲಿ ನಿತ್ಯಕರ್ಮ ಮುಗಿಸಿಕೊಂಡು ಪ್ರಯಾಣ ಮುಂದು ವರಿಸುತ್ತಾರೆ. ಆದರೆ ಇಲ್ಲಿ ಕುಡಿಯಲು ನೀರಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ’ ಎಂದು ಗದಗ ಜಿಲ್ಲೆ ಹೊಳೆ ಆಲೂರಿನ ಶಿಕ್ಷಕ ಮೃತ್ಯುಂಜಯ ಹಂದಿಗುಂದ ಬೇಸರ ವ್ಯಕ್ತಪಡಿಸುತ್ತಾರೆ.

ನಾಲ್ಕು ದಿನಗಳಲ್ಲಿ ಪರಿಹಾರ: ‘ಮೂರು ದಿನಗಳ ಹಿಂದೆ ಹಳೆಯ ಕೊಳವೆ ಬಾವಿಯ ಮೋಟಾರ್‌ಪಂಪ್‌ ಸುಟ್ಟುಹೋದ ಪರಿಣಾಮ ದಿಢೀರನೆ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಹುಬ್ಬಳ್ಳಿ ಕೇಂದ್ರ ಕಚೇರಿಯ  ನಿರ್ವಹಣೆ ವಿಭಾಗದವರಿಗೆ ಮಾಹಿತಿ ನೀಡಲಾಗಿದೆ. ತಂತ್ರಜ್ಞರು ಗುರುವಾರ ಬಂದು ದುರಸ್ತಿ ಮಾಡಲಿದ್ದಾರೆ. ಜೊತೆಗೆ ಹೊಸದಾಗಿ ಹಾಕಿರುವ ಕೊಳವೆ ಬಾವಿಗೆ 500 ಮೀಟರ್ ಪೈಪ್‌ಲೈನ್ ಹಾಕಬೇಕಿದೆ. ಆ ಕೆಲಸವೂ 3ರಿಂದ 4 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸದ್ಯ ಈಗ ವಸತಿಗೃಹಗಳ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ’ ಎಂದು ವಿಜಯಪುರದ ನೈರುತ್ಯ ರೈಲ್ವೆ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪುಷ್ಪೇಂದ್ರಕುಮಾರ ಹೇಳುತ್ತಾರೆ.

ಮಮತಾ ಆದರ್ಶ ನಿಲ್ದಾಣ !.. ಈ ಭಾಗದ ವಿಶ್ವಪ್ರಸಿದ್ಧ ಪ್ರವಾಸಿ ಸ್ಥಳಗಳಾದ ಬಾದಾಮಿ, ಬನಶಂಕರಿ, ಪಟ್ಟದಕಲ್ಲು, ಐಹೊಳೆಗೆ ಬರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಬಾಗಲಕೋಟೆ ಹಾಗೂ ಬಾದಾಮಿಯನ್ನು 2012ರ ರೈಲ್ವೆ ಬಜೆಟ್‌ನಲ್ಲಿ ‘ಆದರ್ಶ ರೈಲು ನಿಲ್ದಾಣ’ಗಳು ಎಂದು ಆಗಿನ ರೈಲ್ವೆ       ಸಚಿವೆ ಮಮತಾ ಬ್ಯಾನರ್ಜಿ ಘೋಷಿಸಿದ್ದರು. ಎರಡೂ ನಿಲ್ದಾಣಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.