ಬಾಗಲಕೋಟೆ: ಪೂರ್ವ ಮುಂಗಾರು ಹಾಗೂ ಮುಂಗಾರಿನ ಉತ್ತಮ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಈಗಾಗಲೇ ಜಿಲ್ಲೆಯಲ್ಲಿ ಶೇ 75ರಷ್ಟು ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ 3.10 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದ್ದು, ಆ ಪೈಕಿ 2.32 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಅದರಲ್ಲಿ 1.15 ಲಕ್ಷ ಹೆಕ್ಟೇರ್‌ನಷ್ಟು ಕಬ್ಬು ಬೆಳೆಯಿದೆ.
ಮೇ ತಿಂಗಳಿನಲ್ಲಿಯೇ ಪೂರ್ವ ಮುಂಗಾರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಆಗಿದೆ. ಮುಂಗಾರು ಸಹ ಒಂದೆರಡು ತಾಲ್ಲೂಕುಗಳನ್ನು ಹೊರತುಪಡಿಸಿದರೆ ಉಳಿದ ತಾಲ್ಲೂಕುಗಳಲ್ಲಿ ಉತ್ತಮವಾಗಿಯೇ ಆಗಿದೆ.
ಜಿಲ್ಲೆಯ ಪ್ರಮುಖ ಬೆಳೆಯಾದ ಗೋವಿನಜೋಳ ಬಿತ್ತನೆಯ ಗುರಿ 59,904 ಹೆಕ್ಟೇರ್ ಇತ್ತು. ಇಲ್ಲಿಯವರೆಗೆ 41,115 ಹೆಕ್ಟೇರ್ ಬಿತ್ತನೆಯಾಗಿದೆ. 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 10,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
51 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿಯಲ್ಲಿ 40 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. 22 ಸಾವಿರ ಹೆಕ್ಟೇರ್ ಹೆಸರುಕಾಳಿನ ಬಿತ್ತನೆ ಗುರಿಯಲ್ಲಿ 15 ಸಾವಿರ ಹೆಕ್ಟೇರ್ ಈಗಾಗಲೇ ಬಿತ್ತನೆಯಾಗಿದೆ.
24 ಸಾವಿರ ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಗುರಿಯಲ್ಲಿ 5 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಕಾರ್ಯ ಭರದಿಂದ ನಡೆದಿದೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ಮೊಳಕೆಯೊಡೆದು ಹಸಿರಿನಿಂದ ಕಂಗೊಳಿಸುತ್ತಿವೆ.
ಉತ್ತಮ ಮಳೆಯಾಗಿರುವುದರಿಂದ ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದೇವೆ.ಉತ್ತಮ ಫಸಲು ಬರುವ ನಿರೀಕ್ಷೆಯಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.