ADVERTISEMENT

ಬಾದಾಮಿ | ಬೆಳೆ ಹಾನಿ: ಪಂಜಾಬ ಮಾದರಿಯಂತೆ ಪರಿಹಾರಕ್ಕೆ ಎಎಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:31 IST
Last Updated 16 ಅಕ್ಟೋಬರ್ 2025, 4:31 IST
ಆಮ್ ಆದ್ಮಿ ಪಕ್ಷ
ಆಮ್ ಆದ್ಮಿ ಪಕ್ಷ   

ಬಾದಾಮಿ: ‘ಪಂಜಾಬ ರಾಜ್ಯದ ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರವು ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಎಕರೆಗೆ ₹ 20 ಸಾವಿರ ಪರಿಹಾರ ಘೋಷಿಸಿದಂತೆ ರಾಜ್ಯ ಸರ್ಕಾರವೂ ಪ್ರತಿ ಎಕರೆಗೆ ₹ 20 ಸಾವಿರ ಪರಿಹಾರ ಧನವನ್ನು ಘೋಷಣೆ ಮಾಡಬೇಕು’ ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

‘ರಾಜ್ಯ ಸರ್ಕಾರವು ಹೆಕ್ಟೇರ್ ಪ್ರದೇಶಕ್ಕೆ ಮಳೆಯಾಶ್ರಿತ ಬೆಳೆಗೆ ₹ 17 ಸಾವಿರ ಮತ್ತು ನೀರಾವರಿಗೆ ₹ 25 ಸಾವಿರ ಪರಿಹಾರವನ್ನು ಘೋಷಿಸಿದೆ. ಇದು ರೈತರಿಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ’ ಎಂದು ಆಮ್ ಆದ್ಮಿ ಪಕ್ಷದ ಬಾಗಲಕೋಟೆ ಜಿಲ್ಲಾ ಘಟಕದ  ಅಧ್ಯಕ್ಷ ಆನಂದ ದೇವಾಡಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರೈತರು ಸಾಲ ಮಾಡಿ ಬೆಳೆ ಬೆಳೆಯಲು ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕಾರ್ಮಿಕರ ಕೂಲಿಗೆಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಅತಿವೃಷ್ಟಿಯಿಂದ ಹೆಚ್ಚಿನ ಆದಾಯ ಬರುವುದನ್ನುಕಳೆದುಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಹೆಸರು ಬೆಳೆಯುವ ರೈತರು ಎಕರೆಗೆ ಅಂದಾಜು ₹ 20 ಸಾವಿರ ವೆಚ್ಚ ಮಾಡಿ ಸರಿಯಾಗಿ ಬೆಳೆ ಬಂದರೆ ₹ 50 ಸಾವಿರಕ್ಕೂ ಅಧಿಕ ಆದಾಯ ಪಡೆಯುತ್ತಿದ್ದರು. ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದೆ. ಹೆಕ್ಟೇರ್‌ಗೆ ₹ 17 ಸಾವಿರ ಪರಿಹಾರ ಘೋಷಿಸಿದರೆ ರೈತರು ಹೇಗೆ ಬದುಕಬೇಕು’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯದಲ್ಲಿ ಇನ್ನೂ ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಕೃಷಿ ಅಧಿಕಾರಿಗಳ ನಿಧಾನ ಗತಿಯ ಸಮೀಕ್ಷೆ ಕಾರ್ಯ ನೋಡಿದರೆ ಇನ್ನೂ ಮೂರು ನಾಲ್ಕು ತಿಂಗಳು ಹೋಗಬಹುದು. ಕೃಷಿ ಸಚಿವರು ಈಗಾಗಲೇ ಪರಿಹಾರ ಘೋಷಿಸಿದ್ದಾರೆ. ಪರಿಹಾರ ರೈತರಿಗೆ ಯಾವಾಗ ತಲುಪಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘ಪಂಜಾಬ ಸರ್ಕಾರ ಕ್ಷಿಪ್ರಗತಿಯಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ ದೇಶದಲ್ಲಿಯೇ ಅತಿ ಹೆಚ್ಚಿನ ಪರಿಹಾರವನ್ನು ಘೋಷಿಸಿದಂತೆ ರಾಜ್ಯ ಸರ್ಕಾರವೂ ಶೀಘ್ರವಾಗಿ ಜಂಟಿ ಸರ್ವೆ ಕಾರ್ಯ ಕೈಗೊಂಡು ಪರಿಹಾರ ಧನವನ್ನು ಮರು ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.