ADVERTISEMENT

ಬಾದಾಮಿ: ಅಕ್ರಮ ಚಟುವಟಿಕೆ ತಾಣವಾದ ಶಿಥಿಲ ಕಟ್ಟಡ

ಎಸ್.ಎಂ ಹಿರೇಮಠ
Published 21 ಡಿಸೆಂಬರ್ 2025, 4:09 IST
Last Updated 21 ಡಿಸೆಂಬರ್ 2025, 4:09 IST
ಬಾದಾಮಿ ರೈಲು ನಿಲ್ದಾಣದ ಸಮೀಪದಲ್ಲಿ ಶಿಥಿಲಗೊಂಡ ಹಳೆಯ ಕಟ್ಟಡ 
ಬಾದಾಮಿ ರೈಲು ನಿಲ್ದಾಣದ ಸಮೀಪದಲ್ಲಿ ಶಿಥಿಲಗೊಂಡ ಹಳೆಯ ಕಟ್ಟಡ    

ಬಾದಾಮಿ: ರೈಲ್ವೆ ನಿಲ್ದಾಣದ ಎದುರು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಕೆಂಪು ಹೆಂಚಿನ ಚಾವಣಿಯ ಕಟ್ಟಡ ಶಿಥಿಲಗೊಂಡಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಈ ಜಾಗ, ಕಟ್ಟಡ ಯಾವ ಇಲಾಖೆಯ ಅಡಿಯಲ್ಲಿ ಬರುತ್ತದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲವಾಗಿದೆ.

‘ಈ ಕಟ್ಟಡವನ್ನು ಮಜಬೂತಾಗಿ ಕಲ್ಲಿನಲ್ಲಿ ಕಟ್ಟಿದ್ದಾರೆ. ಚಾವಣಿಗೆ ಸಾಗವಾನಿ ಕಟ್ಟಿಗೆ ಮತ್ತು ಮಂಗಳೂರಿನ ಕೆಂಪು ಹೆಂಚು ಹೊದಿಸಿ ಸುಂದರವಾಗಿ ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಕಾಲದಲ್ಲಿ ಅಧಿಕಾರಿಗಳಿಗೆ ಮತ್ತು ಪ್ರವಾಸಿಗರ ವಸತಿಗೆ ಅನುಕೂಲ ಕಲ್ಪಿಸಲಾಗಿತ್ತು’ ಎಂದು ಇಲ್ಲಿನ ಆಡಗಲ್ ಗ್ರಾಮದ ಹಿರಿಯ ಮರಿಯಪ್ಪ ಕಿತ್ತೂರ ತಿಳಿಸಿದರು.

ಕೆಲವು ವರ್ಷ ಆಡಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ತರಗತಿಗಳು ಇಲ್ಲಿಯೇ ನಡೆಯುತ್ತಿದ್ದವು. ಈಗ ಹೊಸ ಕಟ್ಟಡ ಆಗಿದ್ದರಿಂದ ಶಾಲೆ ಸ್ಥಳಾಂತರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ADVERTISEMENT

ನೂರಾರು ಬ್ರಿಟಿಷ್ ಅಧಿಕಾರಿಗಳಿಗೆ, ರೈಲ್ವೆ ಅಧಿಕಾರಿಗಳಿಗೆ ಮತ್ತು ಪ್ರವಾಸಿಗರಿಗೆ ವಸತಿ ನೀಡಿದ್ದ ಈ ಕಟ್ಟಡ ಈಗ ಭೂತಬಂಗಲೆಯಂತಾಗಿದೆ. ಆಕ್ರಮ ಚಟುವಟಿಕೆಗಳ ಮತ್ತು ಕುರಿದೊಡ್ಡಿ ತಾಣವಾಗಿದೆ. ಮುಂದೆ ಎರಡು ವಿಶಾಲವಾದ ದೊಡ್ಡ ಕೊಠಡಿಗಳಿವೆ. ಹಿಂದೆ ಅಡುಗೆ ಮಾಡಲು ಸಿಬ್ಬಂದಿಗೆ ಮನೆ ನಿರ್ಮಿಸಲಾಗಿದೆ. ಗಿಡಗಂಟಿಗಳು ಆವರಿಸಿವೆ. 

‘ಪ್ರವಾಸಿ ಮಂದಿರ ಸ್ಥಗಿತಗೊಂಡು ಅಂದಾಜು ಐದು ದಶಕಗಳಾಗಿದೆ. 1977-78 ರಲ್ಲಿ ಮಲಪ್ರಭಾ ಎಡದಂಡೆ ನೀರಾವರಿ ಕಾಲುವೆ ಕಾಮಗಾರಿ ನಡೆದಾಗ ಇಲ್ಲಿ ನೀರಾವರಿ ಇಲಾಖೆಯವರು ಒಂದು ಕೊಠಡಿಯಲ್ಲಿ ಕೂಲಿಕಾರರಿಗೆ ಧಾನ್ಯವನ್ನು ವಿತರಿಸುತ್ತಿದ್ದರು. ನೀರಾವರಿ ಇಲಾಖೆಯ ಫಲಕವನ್ನು ಕಾಣಬಹುದು’ ಎಂದು ಆಡಗಲ್ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ವೈ.ಆರ್. ಪಾಟೀಲ ಹೇಳಿದರು.

‘ಬಾದಾಮಿ ರೈಲು ನಿಲ್ದಾಣದ ಎದುರಿನ ಆಡಗಲ್ ಪ್ರವಾಸಿ ಮಂದಿರ ನಮ್ಮ ಇಲಾಖೆಗೆ ಸಂಬಂಧಿಸಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಫ್. ಆಡಿನ ಪ್ರತಿಕ್ರಿಯಿಸಿದರು.

ಬಾದಾಮಿ ತಾಲ್ಲೂಕಿನ ಆಡಗಲ್ ಗ್ರಾಮದ ಸರ್ವೆ ನಂ. 45 ರ 1.25 ಗುಂಟೆ ಜಾಗದಲ್ಲಿರುವ ಕಟ್ಟಡಕ್ಕೆ ‘ಸರ್ಕಾರಿ ಬಂಗ್ಲೆ’ ಎಂದು ನಮೂದಿಸಲಾಗಿದೆ. ಇದು ಯಾವ ಇಲಾಖೆಯ ಬಂಗ್ಲೆ ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.

‘ಯಾವ ಇಲಾಖೆಯ ಕಟ್ಟಡ ಎಂಬುದನ್ನು ಅಧಿಕಾರಿಗಳು ಗುರುತಿಸಿ ಶಿಥಿಲಗೊಂಡ ಕಟ್ಟಡದ ನಿವೇಶನದಲ್ಲಿ ಕಾಲೇಜು ಮತ್ತು ವಸತಿ ನಿಲಯ ಕಟ್ಟಡಕ್ಕೆ ಜಾಗವನ್ನು ಕೊಡಬೇಕು’ ಎಂದು ರೈತ ಸಂಘದ ಮುಖಂಡ ವಸಂತ ಜಡಿಯನ್ನವರ ಮತ್ತು ಗ್ರಾಮದ ಹಿರಿಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪರಿಶೀಲನೆ ಶೀಘ್ರ
‘ಮಲಪ್ರಭಾ ಎಡದಂಡೆ ಕಾಲುವೆ ಕಾಮಗಾರಿ ನಡೆದಾಗ ಆಡಗಲ್ ಗ್ರಾಮದ ಕೂಲಿಕಾರರಿಗೆ ಆಹಾರ ಧಾನ್ಯವನ್ನು ಒಂದು ಕೊಠಡಿಯಲ್ಲಿ ವಿತರಿಸಲಾಗುತ್ತಿತ್ತು. ನಮ್ಮ ಇಲಾಖೆಯ ಕಟ್ಟಡ ಎನ್ನುವುದನ್ನು ಸರಿಯಾಗಿ ಪರಿಶೀಲಿಸಲಾಗುವುದು ’ ಎಂದು ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.