ADVERTISEMENT

ಬಾದಾಮಿ ಮೇಣಬಸದಿ ಬಳಿಯ ಮುಖ್ಯರಸ್ತೆ ಸೇತುವೆ ಶಿಥಿಲಾವಸ್ಥೆ!

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:54 IST
Last Updated 19 ಫೆಬ್ರುವರಿ 2026, 6:54 IST
ಬಾದಾಮಿ-ಗದಗ ರಸ್ತೆಯಲ್ಲಿ ಮೇಣಬಸದಿ ಸಮೀಪದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಪಾಯದ ಅಂಚಿನಲ್ಲಿರುವ ರಸ್ತೆ ಸೇತುವೆ
ಬಾದಾಮಿ-ಗದಗ ರಸ್ತೆಯಲ್ಲಿ ಮೇಣಬಸದಿ ಸಮೀಪದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಪಾಯದ ಅಂಚಿನಲ್ಲಿರುವ ರಸ್ತೆ ಸೇತುವೆ   

ಬಾದಾಮಿ: ಪಟ್ಟಣದ ಮೇಣಬಸದಿ ಸಮೀಪ ಬಿ.ಆರ್. ಅಂಬೇಡ್ಕರ್ ವೃತ್ತದ ರಾಜ್ಯ ಹೆದ್ದಾರಿ 57 (ಗದಗ- ಬಾಗಲಕೋಟೆ) ಮುಖ್ಯ ರಸ್ತೆ  ಸೇತುವೆಯಿಂದ ವಾಹನಗಳು ಸಂಚರಿಸಲು ತೊಂದರೆಯಾಗಿದೆ. ರಸ್ತೆ ಸೇತುವೆಯನ್ನು ವಿಸ್ತರಣೆ ಮಾಡಿ ವಾಹನಗಳ ಸಂಚಾರಕ್ಕೆ ಸುಗಮ  ಗೊಳಿಸಬೇಕು ಎಂದು ಸಾರ್ವಜನಿಕರು ಲೋಕೋಪಯೋಗಿ ಇಲಾಖೆಗೆ ಒತ್ತಾಯಿಸಿದ್ದಾರೆ.

2019-20ರಲ್ಲಿ ರಾಜ್ಯ ಹೆದ್ದಾರಿ ಬಾದಾಮಿ- ಗದಗ ರಸ್ತೆಯ ಬಾದಾಮಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬನಶಂಕರಿ ದೇವಾಲಯದವರೆಗೆ ರಸ್ತೆ ಎರಡೂ ಕಡೆಗೆ ಪಾದಚಾರಿ ರಸ್ತೆ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಮುಖ್ಯ ರಸ್ತೆ ಸೇತುವೆ ವಿಸ್ತರಣೆಗೆ ₹5 ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಯಾಗಿದ್ದನ್ನು ಸ್ಮರಿಸಬಹುದು.

ಬನಶಂಕರಿ ರಸ್ತೆಯಲ್ಲಿ ಪಾದಚಾರಿ ರಸ್ತೆ ಕಾಮಗಾರಿ 2000-21 ರಲ್ಲಿ ಪ್ರಾರಂಭವಾಯಿತು. ಗುತ್ತಿಗೆದಾರ ಕೆಲವೆಡೆ ಕಾಮಗಾರಿ ಕೈಗೊಂಡರು ನಂತರ ಅರ್ಧಕ್ಕೆ ಬಿಟ್ಟು ತೆರಳಿದರು. ಅಂಬೇಡ್ಕರ್ ವೃತ್ತದ ರಸ್ತೆ ಸೇತುವೆ ವಿಸ್ತರಣೆ ಕಾಮಗಾರಿ ಹಾಗೆಯೇ ಉಳಿದಿದೆ. ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ADVERTISEMENT

ವೃತ್ತದ ರಸ್ತೆ ಸೇತುವೆ ಪಕ್ಕದಲ್ಲಿ ಅಪಾಯ ತಪ್ಪಿಸಲು ತಾತ್ಕಾಲಿಕವಾಗಿ ದೊಡ್ಡ ಕಲ್ಲುಗಳನ್ನು ಮತ್ತು ರಸ್ತೆ ವಿಭಜಕಗಳನ್ನು ಇಟ್ಟಿರುವುದನ್ನು ಇಲ್ಲಿ ಕಾಣಬಹುದು.

ಅಂಬೇಡ್ಕರ್ ವೃತ್ತದಲ್ಲಿ ಕಿರಿದಾದ ರಸ್ತೆ ಇರುವುದರಿಂದ ಬಾಗಲಕೋಟೆ-ಗದಗ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನಗಳು, ನವೆಂಬರ ದಿಂದ ಜನವರಿ ವರೆಗೆ ಪ್ರವಾಸಿ ವಾಹನಗಳು, ಬನಶಂಕರಿದೇವಿ ಜಾತ್ರೆ ಮತ್ತು ಚಾಲುಕ್ಯ ಉತ್ಸವದಲ್ಲಿ ವಾಹನಗಳ ದಟ್ಟಣೆಯಿಂದ ಎಪಿಎಂಸಿ ಯಿಂದ ಬಸ್ ನಿಲ್ದಾಣದ ವರೆಗೆ ಅಂದಾಜು 1. ಕಿ.ಮೀ ರಸ್ತೆ ಸಂಚಾರ ಸ್ಥಗಿತವಾಗಿ ವಾಹನಗಳ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು.

‘ರಸ್ತೆ ಸೇತುವೆ ವಿಸ್ತರಣೆಯಾಗದಿರುವುದರಿಂದ ಸಾಕಷ್ಟು ಜನ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ಕೂಡಲೇ ವಿಸ್ತರಣೆ ಕಾಮಗಾರಿ ಕೈಗೊಳ್ಳಬೇಕು’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಒತ್ತಾಯಿಸಿದರು.

‘ಬಾದಾಮಿ-ಬನಶಂಕರಿ ಸಂಪರ್ಕಿಸುವ ರಸ್ತೆಗೆ ಪಾದಚಾರಿ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ವಿಸ್ತರಣೆ ಸೇತುವೆ ನಿರ್ಮಿಸಲು ಹೊಸದಾಗಿ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲಾಗುವುದು ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಫ್. ಆಡಿನ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.