ಬಾಗಲಕೋಟೆ: ಸಾಂಸ್ಕೃತಿಕ ನಾಯಕ ಬಸವ ಜಯಂತಿ ಪ್ರಯುಕ್ತ ಕೂಡಲಸಂಗಮದಲ್ಲಿ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ‘ಅನುಭವ ಮಂಟಪ–ಬಸವಾದಿ ಶರಣರ ವೈಭವ’ದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 54 ತಂಡಗಳ 600ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು. ಆದರೆ, ಈವರೆಗೆ ಅವರಿಗೆ ಗೌರವ ಧನ ಪಾವತಿಯಾಗಿಲ್ಲ.
ಮೆರವಣಿಗೆಯಲ್ಲಿ ಭಾಗವಹಿಸಿದ ತಂಡಗಳ ಜೊತೆಗೆ ಎರಡು ದಿನ ಕಾರ್ಯಕ್ರಮ ನೀಡಿದ ಸ್ಥಳೀಯ ತಂಡಗಳಿಗೂ ಸೇರಿ ₹ 40 ಲಕ್ಷ ಕೊಡುವುದು ಬಾಕಿ ಇದೆ. ಕಾರ್ಯಕ್ರಮದ ವೇದಿಕೆ, ಪೆಂಡಾಲ್ ಸೇರಿ ವಿವಿಧ ಕಾರ್ಯಗಳನ್ನು ಗುತ್ತಿಗೆ ಪಡೆದಿದ್ದ ರಾಜ್ ಇವೆಂಟ್ ಕಂಪನಿ ಸಲ್ಲಿಸಿದ ಬಿಲ್ ಪಾವತಿಯೂ ಇನ್ನೂ ಬಾಕಿ ಇದೆ.
ಬಸವಾದಿ ಶರಣರ ವೈಭವವನ್ನು ಮೊದಲು ಒಂದು ದಿನ ಆಯೋಜಿಸಲು ಉದ್ದೇಶಿಸಿದಾಗ, ಜಿಲ್ಲಾಡಳಿತವು ₹ 1.12 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಿತ್ತು. ಕಾರ್ಯಕ್ರಮವನ್ನು ಎರಡು ದಿನ ಮಾಡಲು ಉದ್ದೇಶಿಸಿದಾಗ, ವೆಚ್ಚವು ₹3.05 ಕೋಟಿಗೆ ಏರಿಕೆಯಾಯಿತು. ನಂತರದಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮತ್ತೆ ವೆಚ್ಚ ಪರಿಷ್ಕರಿಸಿ, ₹4.59 ಕೋಟಿ ವೆಚ್ಚದ ಹೊಸ ಪ್ರಸ್ತಾವ ಸಲ್ಲಿಕೆಯಾಯಿತು.
ರಾಜ್ಯ ಸರ್ಕಾರ ₹3.05 ಕೋಟಿ ವೆಚ್ಚಕ್ಕೆ 4ಜಿ ವಿನಾಯಿತಿ ನೀಡಿ, ಅವಶ್ಯಕ ಸರಕು, ಸೇವೆಗಳನ್ನು ಪಡೆಯಲು ಜಿಲ್ಲಾಧಿಕಾರಿಗೆ ಏಪ್ರಿಲ್ 29 ರಂದು ಆದೇಶ ಹೊರಡಿಸಿದೆ. ಅಂದಿನಿಂದಲೇ ಎರಡು ದಿನಗಳ ವೈಭವ ಕಾರ್ಯ ನಿಗದಿಯಾಗಿತ್ತು. ಹಾಗಾದರೆ, ಸರಕು, ಸೇವೆಗಳನ್ನು ಪಡೆದದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ.
ಹಗ್ಗ ಜಗ್ಗಾಟ: ಕಾರ್ಯಕ್ರಮ ಆಯೋಜನೆ ಹೊಣೆಯನ್ನು ಜಿಲ್ಲೆಗೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಪೂರ್ವಭಾವಿ ಸಭೆಯಲ್ಲಿ ಕೇಳಿದ್ದರು. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಬೆಂಗಳೂರು ಕೇಂದ್ರ ಕಚೇರಿಯಿಂದಲೇ ನಿರ್ವಹಿಸಲಾಗುವುದು ಎಂದಿದ್ದರು.
ಯಾರನ್ನು ಆಹ್ವಾನಿಸಬೇಕು, ಕಾರ್ಯಕ್ರಮ ಆಯೋಜನೆ ಹೊಣೆಯನ್ನು ರಾಜ್ ಇವೆಂಟ್ಸ್‌ಗೆ ನೀಡುವ ಕಾರ್ಯ ಬೆಂಗಳೂರಿನಿಂದಲೇ ಆಗಿತ್ತು. ಮೆರವಣಿಗೆ ತಂಡಗಳನ್ನು ಮಾತ್ರ ಬಾಗಲಕೋಟೆಯಿಂದ ಆಹ್ವಾನಿಸಲಾಗಿತ್ತು. ಇದರಿಂದ ಬಿಲ್ ಯಾರು ಮಾಡಬೇಕು ಎಂಬ ಗೊಂದಲ ಉಂಟಾಗಿದೆ.
ರಾಜ್ಯ ಸರ್ಕಾರ ₹3.05 ಕೋಟಿ ವೆಚ್ಚಕ್ಕೆ ಮಾತ್ರ 4ಜಿ ವಿನಾಯಿತಿ ನೀಡಿದೆ. ಆದರೆ, ಕಾರ್ಯಕ್ರಮದ ಗುತ್ತಿಗೆ ಪಡೆದಿದ್ದ ರಾಜ್ ಇವೆಂಟ್ಸ್ ₹4.84 ಕೋಟಿ ಮೊತ್ತದ ಬಿಲ್ ನೀಡಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆಯವರ ಮೊತ್ತ ₹40 ಲಕ್ಷ ಬಾಕಿ ಇದೆ. ಇದರೊಂದಿಗೆ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ವಿಷಯ ಮಂಡಿಸಿದವರಿಗೆ ₹1 ಲಕ್ಷ ಗೌರವ ಧನ ನೀಡಬೇಕಿದೆ.
‘ರಾಜ್ ಇವೆಂಟ್ಸ್ ಸಲ್ಲಿಸಿರುವ ಬಿಲ್‌ಗೆ ಆಕ್ಷೇಪ ವ್ಯಕ್ತವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಂದ್ರ ಕಚೇರಿ ಬಿಲ್ ಪಾವತಿಸಬೇಕೇ? ಬಾಗಲಕೋಟೆ ಜಿಲ್ಲಾಡಳಿತ ಪಾವತಿಸಬೇಕೇ ಎಂಬ ಗೊಂದಲವಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು ಮೆರವಣಿಗೆಗೆ ತಂಡ ಒಯ್ಯುವಂತೆ ತಿಳಿಸಿದ್ದರು. ಬೆಂಗಳೂರು ಕಚೇರಿಯಿಂದ ಗೌರವ ಧನ ನೀಡಲಾಗುವುದು ಎಂದಿದ್ದಾರೆ. ಇನ್ನೂ ಬಿಡುಗಡೆಯಾಗಿಲ್ಲರಮೇಶ ಪೂಜಾ ಕುಣಿತ ಮಂಡ್ಯ
ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಗೆ ಕಾರ್ಯಕ್ರಮ ಆಯೋಜನೆಗೆ ಕನಿಷ್ಠ ಮೂರು ವಾರ ಇದ್ದರೆ 4ಜಿ ವಿನಾಯಿತಿ ಕೋರುವಂತಿಲ್ಲ ಎಂಬ ಆರ್ಥಿಕ ಇಲಾಖೆಯ ಅಧಿಸೂಚನೆ ಇದೆ. ಈ ಕಾರ್ಯಕ್ರಮ ಆಯೋಜನೆಯಲ್ಲಿ ಉಲ್ಲಂಘನೆಯಾಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಅನುಭವ ಮಂಟಪ– ಬಸವಾದಿ ಶರಣರ ವಚನ ವೈಭವ ಕಾರ್ಯಕ್ರಮ ಮಾಡಬೇಕು ಎಂಬುದು ಬಜೆಟ್‌ನಲ್ಲೇ ಘೋಷಣೆಯಾಗಿದ್ದ ಕಾರ್ಯಕ್ರಮ. ಜೊತೆಗೆ ಕಾರ್ಯಕ್ರಮದ ಸಿದ್ಧತೆಯ ಪೂರ್ವಭಾವಿ ಸಭೆ ತಿಂಗಳ ಮೊದಲೇ ಆರಂಭವಾಗಿದೆ. ಜೊತೆಗೆ ಅದಕ್ಕಾಗಿಯೇ ಸಮಿತಿ ರಚನೆ ಮಾಡಲಾಗಿತ್ತು. ಆದರೂ 4ಜಿ ವಿನಾಯಿತಿ ಸಿಕ್ಕಿದೆ.
ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ. ಆದರೆ ಕೂಡಲಸಂಗಮ ಅಭಿವೃದ್ಧಿ ಮಂದಗತಿಯಲ್ಲಿ ನಡೆದಿದೆ. ಕೂಡಲಸಂಗಮದಲ್ಲಿ 2006ರಲ್ಲಿ ₹15 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಸವ ಅಂತರರಾಷ್ಟ್ರೀಯ ಕೇಂದ್ರವನ್ನು ಬಳಸಿಕೊಂಡಿಲ್ಲ. 1998ರಲ್ಲಿ ಆರಂಭವಾಗಿದ್ದ ಕೇಂದ್ರ ನಿರ್ಮಾಣ ಕಾಮಗಾರಿ 2006ರಲ್ಲಿ ಪೂರ್ಣಗೊಂಡಿದೆ. ಅದರೊಳಗೆ ಏನು ಮಾಡಬೇಕು ಎಂಬ ನಿರ್ಧಾರವಾಗದ್ದರಿಂದ ಬೀಗ ಜಡಿಯಲಾಗಿದೆ. ಅದು ಸಣ್ಣದಾಯಿತು ಎಂದು ಅದರ ಪಕ್ಕದಲ್ಲಿಯೇ ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ 2018ರಿಂದ ₹75 ಕೋಟಿ ವೆಚ್ಚ ಮಾಡಿ ಮತ್ತೊಂದು ಕಟ್ಟಡ ನಿರ್ಮಿಸಲಾಗುತ್ತಿದೆ. ಅದು ಸಹ ಪೂರ್ಣಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.