ADVERTISEMENT

'ಮನೆಯ ಮಗನಾಗಿ ಮಣ್ಣು ಮಾಡುತ್ತೇನೆ' ಆ್ಯಂಬುಲೆನ್ಸ್ ಚಾಲಕ ವೆಂಕಟೇಶ್

ಕೊರೊನಾ ಸೋಂಕಿನಿಂದ ಸತ್ತವರ ಅಂತ್ಯಕ್ರಿಯೆ ನೆರವೇರಿಸುವ ಕೃಷ್ಣಪ್ಪ

ವೆಂಕಟೇಶ್ ಜಿ.ಎಚ್
Published 12 ಜುಲೈ 2020, 13:11 IST
Last Updated 12 ಜುಲೈ 2020, 13:11 IST
ಕೃಷ್ಣಪ್ಪ ಮರಡಿಮನೆ
ಕೃಷ್ಣಪ್ಪ ಮರಡಿಮನೆ   

ಬಾಗಲಕೋಟೆ: ಪ್ರತಿ ಮೃತ ದೇಹ ಗುಣಿಯಲ್ಲಿ (ತೆಗ್ಗು) ಹಾಕುವ ಮುನ್ನ ಊದುಕಡ್ಡಿ ಬೆಳಗಿ, ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಕಿರಿಯರಿಗೆ ಹಿರಿಯನಾಗಿ, ಹಿರಿಯ ಜೀವಗಳಿಗೆ ಮನೆಯ ಮಗನಾಗಿ ಮಣ್ಣು ಹಾಕುತ್ತೇನೆ..

ಇದು ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ ಅಂತ್ಯಕ್ರಿಯೆ ನೆರವೇರಿಸುವ ತಂಡದ ಪ್ರಮುಖ ಕೃಷ್ಣಪ್ಪ ಮರಡಿಮನೆ ಅವರ ಮಾತು.

ಸ್ವತಃ ಆಂಬುಲೆನ್ಸ್ ಚಾಲಕರೂ ಆಗಿರುವ ಕೃಷ್ಣಪ್ಪ, ಜಿಲ್ಲೆಯಲ್ಲಿ ಕೋವಿಡ್‌ಗೆ ಮೊದಲು ಬಲಿಯಾದ 78 ವರ್ಷದ ವೃದ್ಧರಿಂದ ಮೊದಲುಗೊಂಡ ಕಲಾದಗಿಯ 43 ವರ್ಷದ ವ್ಯಕ್ತಿಯವರೆಗೆ ಎಲ್ಲರ ಅಂತ್ಯಕ್ರಿಯೆ ತಾವೇ ಮುಂದೆ ನಿಂತು ಮಾಡಿದ್ದಾರೆ.

ADVERTISEMENT

’ಮೊದಲಿಗೆ ಭಯ ಅನ್ನಿಸುತ್ತಿತ್ತು. ಮನಸ್ಸಿಗೆ ಬೇಸರವಾಗುತ್ತಿತ್ತು. ಈಗ ಇಲ್ಲ. ಸಾವಿಗೆ ಮಾತ್ರ ಬಡವ–ಶ್ರೀಮಂತ, ಜಾತಿಯ ಬೇಧವಿಲ್ಲ. ದೇವರು ದೊಡ್ಡವನು. ಯಾವ ಜನ್ಮದ ಋಣವೋ ಎಲ್ಲ ಜಾತಿಯವರಿಗೂ ಮಣ್ಣು ಮಾಡುವ ಪುಣ್ಯದ ಕೆಲಸ ನನಗೆ ವಹಿಸಿದ್ದಾನೆ ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ‘ ಎನ್ನುತ್ತಾರೆ.

ವೈದ್ಯರು ಆಸ್ಪತ್ರೆಯಲ್ಲಿ ಸಾವಿನ ಘೋಷಣೆ ಮಾಡುತ್ತಿದ್ದಂತೆಯೇ ಮೃತರ ಮುಖವನ್ನು ಒಮ್ಮೆ ದೂರದಲ್ಲಿಯೇ ನಿಂತುಕೊಂಡ ಕುಟುಂಬದವರಿಗೆ ತೋರಿಸುತ್ತೇವೆ. ನಂತರ ವೈಜ್ಞಾನಿಕವಾಗಿ ಪ್ಯಾಕ್ ಮಾಡಿ ಆಂಬುಲೆ‌ನ್ಸ್‌ನಲ್ಲಿ ಸ್ಮಶಾನಕ್ಕೆ ಕೊಂಡೊಯ್ಯುತ್ತೇವೆ. ಈ ವೇಳೆ ನಾವು ಪಿಪಿಇ ಕಿಟ್ ಸೇರಿದಂತೆ ಸುರಕ್ಷತಾ ಸಾಧನಗಳ ಧರಿಸಿರುತ್ತೇವೆ. ಉಪವಿಭಾಗಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಂತ್ಯಕ್ರಿಯೆ ವಿಧಿ–ವಿಧಾನ ನೆರವೇರುತ್ತದೆ ಎಂದು ಕೃಷ್ಣಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.