ADVERTISEMENT

ಬಾಗಲಕೋಟೆ| ಸರ್ಕಾರದ ದರ ಒಪ್ಪದ ರೈತರು; ಮುಂದುವರೆದ ಹೋರಾಟ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:22 IST
Last Updated 9 ನವೆಂಬರ್ 2025, 4:22 IST
ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಅಧಿಕ ಪ್ರಮಾಣದಲ್ಲಿ ಆಗಮಿಸಿದ ಪೊಲೀಸ್ ಸಿಬ್ಬಂದಿ
ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಅಧಿಕ ಪ್ರಮಾಣದಲ್ಲಿ ಆಗಮಿಸಿದ ಪೊಲೀಸ್ ಸಿಬ್ಬಂದಿ   

ಬಾಗಲಕೋಟೆ: ಹಿಂದಿನ ವರ್ಷಗಳ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಈ ವರ್ಷ ನಿಗದಿಪಡಿಸಿರುವ ಬೆಲೆಯಲ್ಲಿನ ಗೊಂದಲಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಮುಧೋಳದಲ್ಲಿ ರೈತರು ಶನಿವಾರವೂ ಪ್ರತಿಭಟನೆ ಮುಂದುವರೆಸಿದ್ದಾರೆ.

ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಜೆ ನಾಲ್ಕೂವರೆಯಿಂದ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ವಾಹನ ಸಂಚಾರ ತಡೆಯಲಾಗಿದೆ. ಹಿಂದಿನ ಕೆಲ ವರ್ಷಗಳ ಬಿಲ್‌ ಅನ್ನು ಕೆಲವು ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ. ಅವು ಕೂಡಲೇ ಬಿಲ್‌ ಪಾವತಿ ಮಾಡಬೇಕು. 2024–25ನೇ ಸಾಲಿನ ಎರಡನೇ ಕಂತು ನೀಡಬೇಕು ಎಂದು ಆಗ್ರಹಿಸಿದರು.

‘ಇಳುವರಿ ಆಧರಿಸಿ ಈ ವರ್ಷ ರಾಜ್ಯ ಸರ್ಕಾರ ನಿಗದಿಪಡಿಸಿರುವ ಬೆಲೆಗೆ ನಮ್ಮ ಒಪ್ಪಿಗೆಯಿಲ್ಲ. ಪ್ರತಿ ಮೆ.ಟನ್‌ಗೆ ₹3,500 ನೀಡಬೇಕು’ ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ನಡೆಸಿದ ಮಾತುಕತೆ ವಿಫಲವಾಗಿದ್ದು, ಪ್ರತಿಭಟನೆ ಮುಂದುವರೆದಿದೆ.

ADVERTISEMENT

ರೈತ ಮುಖಂಡರಾದ ಬಸವಂತ ಕಾಂಬಳೆ, ಮುತ್ತಪ್ಪ ಕೊಮ್ಮಾರ, ಈರಪ್ಪ ಹಂಚಿನಾಳ ಮಾತನಾಡಿ, ಹಿಂದಿನ ಬಾಕಿ‌ ಮೊದಲು ಪಾವತಿಯಾಗಬೇಕು. ಸರ್ಕಾರ ದರ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ. 3500ರೂ. ದರ ನಿರ್ಧಾರವಾಗದ ಹೊರತು ನಮ್ಮ ಹೋರಾಟ ನಿಲ್ಲುವದಿಲ್ಲ. ಶುಕ್ರವಾರ ನಡೆಸಿದ ಸಭೆಯಲ್ಲಿ ಬಾಗಲಕೋಟೆ, ಬೆಳಗಾವಿ ರೈತರು ಇಲ್ಲದೆ ದರ ನಿಗದಿ ಮಾಡಲಾಗಿದೆ. ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು 3500 ಕೊಟ್ಟರೆ ನಷ್ಟವುಂಟಾಗುತ್ತದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಕಾರ್ಖಾನೆಗಳು ನಷ್ಟದಲ್ಲಿದ್ದರೆ ಕಾರ್ಖಾನೆ ಮಾಲೀಕರು ಒಂದಕ್ಕಿಂತ ಹೆಚ್ಚು ಕಾರ್ಖಾನೆ ಕಟ್ಟಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನೆಯಿಸಿದರು. ರೈತರು ಭಯಪಡಬೇಕಾಗಿಲ್ಲ 3500 ದರ ಸಿಕ್ಕೆ ಸಿಗುತ್ತದೆ. ಅಲ್ಲಿಯವರೆಗೆ ಯಾವ ರೈತನು ಕಬ್ಬು ಕಟಾವು ಮಾಡಬಾರದು ಎಂದು ಹೇಳಿದರು.

ಶುಕ್ರವಾರ ರಾತ್ರಿಯಿಂದ ಸಮಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಅಹೋರಾತ್ರಿ ಧರಣಿ ಧರಣಿ ಆರಂಭಿಸಿದರು. ಕರವೇ ಪದಾಧಿಕಾರಿಗಳಾದ ಗಣಪತಿ ಬೋವಿ, ಶ್ರೀಕಾಂತ ಮ್ಯಾಗ್ಯಾಡಿ ತಂಡ ಭಜನಾ ಗೀತೆ ಹಾಡಿದರು. ತಾಲ್ಲೂಕು ಬುದ್ನಿ ಪಿಎಂ ರೈತರು ರಾತ್ರಿ ಧರಣಿ ನಡೆಸಿದರು.

ರೈತಸಂಘದ ಪುಟ್ಟಣ್ಣಯ್ಯ ಬಣದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪತ್ರಕರ್ತರೊಂದಿಗೆ ಮಾತನಾಡಿ ಮುಧೋಳ ರೈತರು ಸರ್ಕಾರದ ದರ ನಿಗದಿಯನ್ನು ಒಪ್ಪದೆ ಹೋರಾಟ ಮುಂದುವರೆಸಿರುವುದನ್ನು ಬೆಂಬಲಿಸುತ್ತೇನೆ. ಮುಖ್ಯಮಂತ್ರಿ ಶುಕ್ರವಾರ ನಿನ್ನೆ ಘೋಷಿಸಿರುವ ಬೆಲೆ ಗೊಂದಲದಿಂದ‌ ಕೂಡಿದೆ. ಮುಖ್ಯಮಂತ್ರಿಗಳು ಇದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಮುಧೋಳ ರೈತರ ಬೇಡಿಕೆ ಬಗ್ಗೆ ನಾವು ರೈತ ಸಂಘಗಳ ಸಂಯುಕ್ತ ಹೋರಾಟ ‌ಸಮಿತಿಯಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ.‌ ಮುಧೋಳ ರೈತರ ಬೇಡಿಕೆ ಬಗ್ಗೆ ಮನವರಿಕೆ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಭಟನೆಗೆ ಮಾಜಿ ಸೈನಿಕರು ಕರ್ನಾಟಕ ರಕ್ಷಣಾ ವೇದಿಕೆಯವರು ಎಸ್.ಡಿ.ಪಿ.ಐ ಪಕ್ಷದವರು ಬೆಂಬಲ ಸೂಚಿಸಿದರು. ರೈತರು ರಸ್ತೆಯಲ್ಲಿ ಅಡುಗೆ ಮಾಡಿ ಊಟ ಮಾಡಿದರು. ಅಪಾರ ಪ್ರಮಾಣದ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಬಸವಂತಪ್ಪ ಕಾಂಬಳೆ, ದುಂಡಪ್ಪ ಯರಗಟ್ಟಿ, ಸುಭಾಷ ಶಿರಬೂರ, ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ಮಹೇಶಗೌಡ ಪಾಟೀಲ, ಹನಮಂತ ಬಿರಾದಾರ ಪಾಟೀಲ ಸುರೇಶ ಚಿಚಂಲಿ ಸುರೇಶ ಡವಳೇಶ್ವರ ರಾಚಪ್ಪ ಕಲ್ಲೋಳಿ ಮುತ್ತಪ್ಪ ಕೊಮ್ಮಾರ, ಈರಪ್ಪ ಹಂಚಿನಾಳ  ಪಾಲ್ಗೊಂಡಿದ್ದಾರೆ.

ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರು ರಸ್ತೆಯ ಪಕ್ಕ ಅಡುಗೆ ಮಾಡಿ ಊಟ ಮಾಡಿದರು
ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿರುವ ಅಪಾರ ಪ್ರಮಾಣದ ಕಬ್ಬು ಬೆಳೆಗಾರರು
ಮುಧೋಳದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ಬಿಕೋ ಅನ್ನುತ್ತಿರುವ ಹೆದ್ದಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.