ADVERTISEMENT

ಬಾಗಲಕೋಟೆ | ರಾಜ್ಯದ ಮೀನಿನ ಮೇಲೆ ಆಂಧ್ರದವರ ಕಣ್ಣು

ಅಕ್ರಮ ಮೀನುಗಾರರ ವಿರುದ್ಧ ಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:28 IST
Last Updated 16 ಡಿಸೆಂಬರ್ 2025, 2:28 IST
   

ಬಾಗಲಕೋಟೆ: ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿರುವ ಮೀನಿನ ಮೇಲೆ ಆಂಧ್ರಪ್ರದೇಶದ ಮೀನುಗಾರರ ಕಣ್ಣು ಬಿದ್ದಿದೆ. ಯಂತ್ರ ಬಳಸಿ ಮೀನು ಹಿಡಿಯುತ್ತಿರುವ ಕಾರಣ ಸ್ಥಳೀಯ ಮೀನುಗಾರರು ಪರದಾಡುವಂತಾಗಿದೆ.

ಜಲಾಶಯದ ದಡದ ವ್ಯಾಪ್ತಿಯ 5 ಕಿ.ಮೀ.ದೊಳಗಿರುವ ಗ್ರಾಮಗಳ ಮೀನುಗಾರರು ಮಾತ್ರ ಮೀನುಗಾರಿಕೆ ಮಾಡಲು ಅವಕಾಶವಿದೆ. ಆದರೆ, ಇದನ್ನು ಉಲ್ಲಂಘಿಸಿ ಆಂಧ್ರಪ್ರದೇಶ ಮತ್ತು ರಾಜ್ಯದ ಹೊಸಪೇಟೆಯವರೂ ಮೀನು ಹಿಡಿಯುತ್ತಿದ್ದಾರೆ.

ಆಂಧ್ರ ಪ್ರದೇಶದವರಿಗೆ ಸೇರಿದ ಯಂತ್ರ ಹೊಂದಿದ ಬೋಟ್, ಮೀನಿನ ಬಲೆಗಳನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಕೆಲ ಬಾರಿ ವಶಪಡಿಸಿಕೊಂಡಿದ್ದಾರೆ. ಆದರೆ, ‘ಜೀವನಾಧಾರ ವಸ್ತುಗಳು ಆಗಿರುವ ಕಾರಣ ಇಟ್ಟುಕೊಳ್ಳುವಂತಿಲ್ಲ’ ಎಂಬ ನ್ಯಾಯಾಲಯದ ಆದೇಶವಿದೆ. ಹೀಗಾಗಿ ಅವುಗಳನ್ನು ಮರಳಿಸಿದ್ದಾರೆ.

ADVERTISEMENT

‘ಸ್ಥಳೀಯರಿಗೆ ಮಾತ್ರ ಮೀನು ಹಿಡಿಯಲು ಅವಕಾಶವಿದ್ದರೂ ಹೊರ ರಾಜ್ಯದಿಂದಲೂ ಬಂದು ಮೀನುಗಾರಿಕೆ ಮಾಡುತ್ತಿದ್ದಾರೆ. ಹಿನ್ನೀರಿನ ವ್ಯಾಪ್ತಿ ದೊಡ್ಡದಾಗಿರುವ ಕಾರಣ ಅವರನ್ನು ಹಿಡಿಯಲು ತೊಂದರೆಯಾಗುತ್ತದೆ. ಮೀನು ಹಿಡಿಯಲು ಕೆಲ ಕಡೆಗಳಲ್ಲಿ ಮಾತ್ರವೇ ಪ್ರವೇಶ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆಯಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ ಹೇಳಿದರು.

ರಾಶಿ ರಾಶಿ ಮೀನು: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಮೀನಿನ ಮರಿಗಳನ್ನು ಬಿಡಲಾಗುತ್ತದೆ. 2024–25ನೇ ಸಾಲಿನಲ್ಲಿ ಅಂದಾಜು 16 ಸಾವಿರ ಟನ್‌ ಮೀನು ಹಿಡಿಯಲಾಗಿದ್ದು, ₹160 ಕೋಟಿ ವೆಚ್ಚದ ವಹಿವಾಟು ನಡೆದಿದೆ. ಇದು ಹೊರ ರಾಜ್ಯದ ಮೀನುಗಾರರ ಕಣ್ಣು ಕುಕ್ಕಿಸುತ್ತಿದೆ.

ಹರಿಗೋಲಿನಲ್ಲಿ ಹಿಡಿಯಲು ನದಿ ದಡದ (ಹರಿಗೋಲಿಗೆ ಇಬ್ಬರಂತೆ) 288 ತಂಡಗಳಿಗೆ ವಾರ್ಷಿಕವಾಗಿ ತಲಾ ₹3 ಸಾವಿರ ಪಾವತಿಸಿ ಅನುಮತಿ ನೀಡಲಾಗುತ್ತದೆ. ಇದರಿಂದ ಕೇವಲ ₹8.64 ಲಕ್ಷ ರಾಯಲ್ಟಿ ಸಂಗ್ರಹವಾಗಿದೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದ್ದರೂ ರಾಯಲ್ಟಿ ಸಂಗ್ರಹ ಕಡಿಮೆ ಆಗುತ್ತಿರುವುದರಿಂದ ಪ್ರತಿ ಕೆಜಿ ಆಧಾರದ ಮೇಲೆ ರಾಯಲ್ಟಿ ಸಂಗ್ರಹ ಮಾಡಬೇಕು ಎನ್ನುವ ಚಿಂತನೆಯೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.