ADVERTISEMENT

ಕೂಡಲಸಂಗಮ | ಮೈದುಂಬಿದ ಕೃಷ್ಣೆ, ಮಲಪ್ರಭೆ: ಪುಣ್ಯ ಸ್ನಾನ ಮಾಡಲು ಜನರ ದಂಡು

ಶ್ರೀಧರ ಗೌಡರ
Published 1 ಆಗಸ್ಟ್ 2023, 6:43 IST
Last Updated 1 ಆಗಸ್ಟ್ 2023, 6:43 IST
ಬಸವಣ್ಣನ ಐಕ್ಯ ಮಂಟಪ ಬಳಿ ಕೃಷ್ಣಾ, ಮಲಪ್ರಭಾ ನದಿ ಮೈದುಂಬಿದೆ
ಬಸವಣ್ಣನ ಐಕ್ಯ ಮಂಟಪ ಬಳಿ ಕೃಷ್ಣಾ, ಮಲಪ್ರಭಾ ನದಿ ಮೈದುಂಬಿದೆ   

ಕೂಡಲಸಂಗಮ: ಮೂರು ತಿಂಗಳ ಹಿಂದೆ ಬರಿದಾಗಿದ್ದ ಕೃಷ್ಣ, ಮಲಪ್ರಭಾ ನದಿ  ಈಗ ಮೈದುಂಬಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನ ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮದ ಬಳಿ ನದಿಗಳ ಒಡಲು ಸಂಪೂರ್ಣ ತುಂಬಿಕೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕೃಷ್ಣಾ, ಮಲಪ್ರಭಾ ನದಿ ಪಾತ್ರದಲ್ಲಿ ಸುರಿದ ಮಳೆ ಹಾಗೂ ನವಿಲುತೀರ್ಥ, ಆಲಮಟ್ಟಿ ಜಲಾಶಯದಿಂದ ನದಿಗೆ ನೀರು ಹರಿಸಿದ ಪರಿಣಾಮ ನಾರಾಯಣಪುರ ಜಲಾಶಯ ಹಿನ್ನೀರಿನ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪ ಸುತ್ತ ಜಲರಾಶಿ ತಂಬಿ ಹರಿಯುತ್ತಿದೆ. ನಾಲ್ಕು ದಿನಗಳಿಂದ ಬೆಳಿಗ್ಗೆಯಿಂದ ಸಂಜೆವರೆಗೆ ಪ್ರವಾಸಿಗರು ಈ ಜಲರಾಶಿಯ ವೈಭವ ನೋಡಿ ಆನಂದಿಸುತ್ತಿದ್ದಾರೆ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ಕೃಷ್ಣೆ, ಮಲಪ್ರಭೆ ಸಂಗಮದಲ್ಲಿ ಮಿಂದು, ಪುಣ್ಯಸ್ನಾನ ಮಾಡಿ, ನದಿಯ ದಡದಲ್ಲಿ ಸಮಯ ಕಳೆಯುತ್ತಿದ್ದಾರೆ..

ADVERTISEMENT

ಪ್ರತಿವರ್ಷ ಏಪ್ರಿಲ್ ಮೊದಲ ವಾರ ನದಿಯ ನೀರು ಸಂಪೂರ್ಣ ಇಳಿಮುಖಗೊಂಡು, ಜೂನ್‌ ಅಂತ್ಯಕ್ಕೆ ತುಂಬಿಕೊಳ್ಳುತ್ತಿತ್ತು. ಈ ವರ್ಷ ಮಾರ್ಚ್‌ನಲ್ಲಿ ಇಳಿಮುಖಗೊಂಡು, ಜುನ್‌ ಕೊನೆಯ ವಾರದವರೆಗೆ ನದಿ ಸಂಪೂರ್ಣ ಬರಿದಾಗಿತ್ತು. ಸದ್ಯ ನದಿ ಮೈದುಂಬಿರುವುದರಿಂದ ತೀರದ ರೈತರು ಸಂಭ್ರಮದಿಂದ ಬಿತ್ತನೆಯ ಕಾರ್ಯದಲ್ಲಿ ತೊಡಗಿದ್ದಾರೆ.

‘ನಾಲ್ಕು ತಿಂಗಳು ನದಿಯಲ್ಲಿ ನೀರು ಇಳಿಮುಖಗೊಂಡಿದ್ದರಿಂದ ಪುಣ್ಯಸ್ನಾನ ಮಾಡಲು ತೊಂದರೆಯಾಗಿತ್ತು. ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಾತ್ಕಾಲಿಕ ಸ್ನಾನಘಟ್ಟ ನಿರ್ಮಿಸಿದ್ದರು. ಆದರೆ, ಅಲ್ಲಿ ಪ್ರವಾಸಿಗರು, ಭಕ್ತರು ಪುಣ್ಯಸ್ನಾನ ಮಾಡಲು ಇಷ್ಟಪಡುತ್ತಿರಲಿಲ್ಲ. ಈಗ ನದಿಯಲ್ಲಿ ನೀರು ಅಧಿಕಗೊಂಡಿದ್ದು, ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ನದಿಯಲ್ಲೇ ಪುಣ್ಯಸ್ನಾನ ಮಾಡುತ್ತಿದ್ದಾರೆ’ ಎಂದು ಅರ್ಚಕ ಕರಸಂಗಯ್ಯ ಗುಡಿ ಹೇಳಿದರು.

ಬರಿದಾದ ಕೃಷ್ಣಾ ಮಲಪ್ರಭಾ ನದಿಯ ಒಡಲು (೧೫ ದಿನದ ಹಿಂದೆ)
ಬಸವಣ್ಣನ ಐಕ್ಯ ಮಂಟಪದಿಂದ ಕೃಷ್ಣಾ ಮಲಪ್ರಭಾ ನದಿಯ ದೃಶ್ಯ ತುಂಬಾ ಸುಂದರವಾಗಿದೆ. ಪ್ರತಿವರ್ಷ ನದಿ ತುಂಬಿದಾಗ ಇಲ್ಲಿಗೆ ಬರುತ್ತೇವೆ
ಉಮೇಶ ಸಿಂಧೂರ ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.