ADVERTISEMENT

ಬಾಗಲಕೋಟೆ: ಕಲ್ಲು ಹೊತ್ತು ನಿಲ್ಲಲು ಬಂದ ರೈತನ ಮನವೊಲಿಸಿ ಕಳಿಸಿದ ಅಧಿಕಾರಿಗಳು!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:57 IST
Last Updated 14 ಫೆಬ್ರುವರಿ 2020, 9:57 IST
ರಾಮಣ್ಣ ಸುನಗದ
ರಾಮಣ್ಣ ಸುನಗದ   

ಬಾಗಲಕೋಟೆ: ಅತಿವೃಷ್ಟಿಯಿಂದ ಬಿದ್ದ ತಮ್ಮ ಮನೆಗೆ ಪರಿಹಾರ ಕಲ್ಪಿಸಿಲ್ಲ ಎಂದು ಆರೋಪಿಸಿ ಜಿಲ್ಲಾಡಳಿತ ಭವನದ ಮುಂದೆ ಕಲ್ಲು ಹೊತ್ತು ನಿಂತು ಪ್ರತಿಭಟನೆ ನಡೆಸಲು ಮುಂದಾದ ವ್ಯಕ್ತಿಯನ್ನು ಶುಕ್ರವಾರ ಅಧಿಕಾರಿಗಳು ಮನವೊಲಿಸಿ ವಾಪಸ್ ಕಳಿಸಿದರು.

ಬಾಗಲಕೋಟೆ ತಾಲ್ಲೂಕಿನ ಹಳ್ಳೂರಿನ ರೈತಸಂಘದ ಮುಖಂಡ ರಾಮಣ್ಣ ಸುನಗದ ಪ್ರತಿಭಟನೆಗೆ ಮುಂದಾದವರು.

ರಾಮಣ್ಣ ತೋಟದಲ್ಲಿ ಸುಸಜ್ಜಿತ ಮನೆ ಕಟ್ಟಿಕೊಂಡು ವಾಸವಿದ್ದು, ಊರಿನಲ್ಲಿದ್ದ ಹಳೆಯ ಮನೆ ಮಳೆಗೆ ಕುಸಿದಿದೆ. ಎರಡೂ ಮನೆಗಳಿಗೂ ಒಬ್ಬರೇ ಮಾಲೀಕರಾಗಿದ್ದು, ವಾಸ ಮಾಡಲು ಅವರಿಗೆ ಈಗ ಮನೆ ಇದೆ. ಹೀಗಾಗಿ ನಿಯಮಾವಳಿಗಳ ಅನ್ವಯ ಪರಿಹಾರ ನೀಡಲು ಬರುವುದಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ಪರಿಹಾರ ಕೋರಿ ರಾಮಣ್ಣ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಇದರಿಂದ ಆಕ್ರೋಶಗೊಂಡ ರಾಮಣ್ಣ, ಊರಿನಲ್ಲಿದ್ದ ಹಳೆಯ ಮನೆಯಲ್ಲಿಯೇ ನಮ್ಮ ಕುಟುಂಬ ವಾಸವಾಗಿತ್ತು. ಜಿಲ್ಲೆಯಲ್ಲಿ ಅತಿವೃಷ್ಟಿ ಉಂಟಾದ ವೇಳೆ ವಾಸ ಯೋಗ್ಯವಿಲ್ಲದ ಮನೆಯಲ್ಲಿ ಯಾರೂ ನೆಲೆಸದಂತೆ ಗ್ರಾಮ ಪಂಚಾಯ್ತಿಯಿಂದ ಡಂಗುರ ಹೊಡೆಸಿದ್ದ ಕಾರಣ ನಾವು ತೋಟದಲ್ಲಿನ ಮನೆಗೆ ಸ್ಥಳಾಂತರಗೊಂಡಿದ್ದೆವು. ಈಗ ಊರಿನಲ್ಲಿ ಯಾರದ್ದೋ ಚಾಡಿ ಮಾತು ಕೇಳಿ ಅಧಿಕಾರಿಗಳು ನನಗೆ ಪರಿಹಾರ ನಿರಾಕರಿಸುತ್ತಿದ್ದಾರೆ ಎಂದು ರಾಮಣ್ಣ ಆರೋಪಿಸಿದರು.

ಕಲ್ಲು ಹೊತ್ತು ನಿಂತು ಪ್ರತಿಭಟನೆ ನಡೆಸುವುದಾಗಿ ರಾಮಣ್ಣ ಮೊದಲೇ ಮಾಧ್ಯಮದವರಿಗೆ ತಿಳಿಸಿದ್ದ ಕಾರಣ ಜಿಲ್ಲಾಡಳಿತ ಭವನದ ಎದುರು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಾಮಣ್ಣ ಬರುತ್ತಿದ್ದಂತೆಯೇ ಪೊಲೀಸರು ಅವರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಬಳಿಗೆ ಕರೆದೊಯ್ದರು. ತಹಶೀಲ್ದಾರ್ ಜಿ.ಎಸ್.ಹಿರೇಮಠ ಅವರನ್ನು ಇನ್ನೊಮ್ಮೆ ಊರಿಗೆ ಕಳುಹಿಸಿ ಸ್ಥಳಪರಿಶೀಲನೆ ನಡೆಸಿ ವರದಿ ತರಿಸಿಕೊಂಡು ಸಮಸ್ಯೆ ಸರಿಪಡಿಸುವುದಾಗಿ ಎಡಿಸಿ ರಾಮಣ್ಣನಿಗೆ ಭರವಸೆ ನೀಡಿದರು. ಅದಕ್ಕೆ ರಾಮಣ್ಣ ಒಪ್ಪಿಕೊಳ್ಳಲಿಲ್ಲ. ಈ ವೇಳರ ಹೆಚ್ಚುವರಿ ಜಿಲ್ಲಾಧಿಕಾರಿ ಜೊತೆಗೂ ವಾಗ್ವಾದ ನಡೆಸಿದರು. ಕೊನೆಗೆ ಪೊಲೀಸರು ರಾಮಣ್ಣನ ಮನವೊಲಿಸಿ ವಾಪಸ್ ಕಳಿಸಿದರು.

ಪ್ರತಿಭಟನೆಗೆ ಪೊಲೀಸರ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಸುಮ್ಮನೆ ಮರಳುತ್ತಿದ್ದೇನೆ. ನನಗೆ ಇನ್ನೊಂದು ವಾರದಲ್ಲಿ ನ್ಯಾಯಯುತ ಪರಿಹಾರ ಕೊಡದಿದ್ದಲ್ಲಿ ಪೊಲೀಸ್ ಇಲಾಖೆಯ ಅನುಮತಿ ಪಡೆದು ಬಂದು ಕಲ್ಲು ಹೊತ್ತುಕೊಂಡು ನಿಂತು ಪ್ರತಿಭಟನೆ ನಡೆಸುವೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ ರಾಮಣ್ಣ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.