
ಬಾಗಲಕೋಟೆ ನಗರದಲ್ಲಿ ಶುಕ್ರವಾರ ನಡೆದ ಗಲಾಟೆಯಿಂದಾಗಿ ಅಂಗಡಿ, ಮುಗ್ಗಟ್ಟುಗಳು ಮುಚ್ಚಿದ್ದವು.
ಬಾಗಲಕೋಟೆ: ನಗರದಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಗುರುವಾರ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿ ಶುಕ್ರವಾರ ಮತ್ತೆ ನಗರದಲ್ಲಿ ಕಲ್ಲು ತೂರಾಟ ನಡೆದು ಪೋಲಿಸರು ಲಾಠಿ ಬೀಸಿದ ಘಟನೆ ನಡೆಯಿತು.
ಘಟನೆಯನ್ನು ಖಂಡಿಸಲು ಬೆಳಿಗ್ಗೆ ಹಿಂದೂ ಸಂಘಟನೆಗಳ ಪ್ರಮುಖರ ಸಭೆ ಸೇರಿದ್ದು, ಈ ಸಮಯದಲ್ಲಿ ಯುವ ಕಾರ್ಯಕರ್ತರು ಆಕ್ರೋಶಿತರಾಗಿ ಬೀದಿಗಿಳಿದು ಪ್ರತಿಭಟನೆಗೆ ಮುಂದಾದರು. ಕಾಯಿಪಲ್ಲೆ ಮಾರುಕಟ್ಟೆಯ ಬಳಿ ಕಲ್ಲು ತೂರಾಟ ನಡೆಸಿ ಗಲಾಟೆ ಆರಂಭಿಸಿದ್ದು, ಗಲಾಟೆ ನಿರತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದೇ ವೇಳೆ ನಗರದ ಎಲ್ಲ ಅಂಗಡಿ ಮುಗ್ಗಟ್ಟುಗಳು ಮುಚ್ಚಿದವು. ಸಂಜೆವರೆಗೂ ವ್ಯಾಪಾರ ವಹಿವಾಟು ನಡೆಯಲಿಲ್ಲ.
ಬೆಳಗಾವಿ ಉತ್ತರ ವಲಯದ ಐಜಿಪಿ ಚೇತನಸಿಂಗ್ ರಾಥೋರ ನಗರಕ್ಕೆ ಆಗಮಿಸಿ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಸೇರಿ ಪೋಲಿಸ್ ಅಧಿಕಾರಿಗಳು ನಗರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಂಡಿದ್ದು, ಸಧ್ಯಕ್ಷೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಗುರುವಾರದ ಘಟನೆ: ಗುರುವಾರ ಶಿವಾಜಿ ಜಯಂತಿ ಆಚರಣೆ ಅಂಗವಾಗಿ ನಡೆದ ಮೆರವಣಿಗೆಯ ಸಂದರ್ಭದಲ್ಲಿ ನಗರದ ಪಂಕಾ ಮಸೀದಿ ಬಳಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಸೇರಿ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿರುವ ಘಟನೆ ನಡೆಯಿತು.
ಮಧ್ಯಾಹ್ನ ಮರಾಠಾ ಹಿತಚಿಂತಕ ಸಮಾಜದ ವತಿಯಿಂದ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಹೊರಟು ಸಂಜೆ ಹೊತ್ತಿಗೆ ಪಂಕಾ ಮಸೀದಿ ಬಳಿ ಬರುತ್ತಿದ್ದಂತೆ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಗಲಾಟೆ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ರಂಜಾನ್ ಆರಂಭದ ಹಿನ್ನೆಲೆಯಲ್ಲಿ ಪಂಕಾ ಮಸೀದಿಯಲ್ಲಿ ಪ್ರಾರ್ಥನೆಗೆ ಅಧಿಕ ಸಂಖ್ಯೆಯ ಜನರಿದ್ದರು.
ಕುಪಿತರಾದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಸೀದಿಯಿಂದಲೇ ಕಲ್ಲು ತೂರಿ ಬಂದಿರುವುದಾಗಿ ಹೇಳಿ ಮಸೀದಿಯತ್ತ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ಮಧ್ಯೆ ತಳ್ಳಾಟ, ನೂಕಾಟ ನಡೆಯಿತಾದರೂ ಪೊಲೀಸರು ಮನವೊಲಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.