ADVERTISEMENT

ಬಾಗಲಕೋಟೆ: ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹ

ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 7:31 IST
Last Updated 27 ನವೆಂಬರ್ 2025, 7:31 IST
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಮಾಡಿದರು
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಬುಧವಾರ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರ ಹಕ್ಕುಗಳನ್ನು ಕೆಡಿಸುತ್ತಿದ್ದು, ಶೋಷಣೆಯನ್ನು ಹೆಚ್ಚಿಸುವಂತಿವೆ. ಕಾರ್ಮಿಕರ ಹಿತದಾಯಕ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಈ ಕಾನೂನುಗಳು ನೇರವಾಗಿ ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆ ತರಬಲ್ಲ ಅಪಾಯಕಾರಿಗಳಾಗಿವೆ ಎಂದು ಆರೋಪಿಸಿದರು.

ಕೈಗಾರಿಕೆ ಸಂಬಂಧಗಳ ಸಂಹಿತೆಯು ಉದ್ಯೋಗದಾತರಿಗೆ ಕಾರ್ಮಿಕರನ್ನು ಸುಲಭವಾಗಿ ವಜಾಗೊಳಿಸಲು ಅವಕಾಶ ನೀಡುತ್ತದೆ ಎಂದು ದೂರಿದರು.

ADVERTISEMENT

‘ಹೊಸ ಸಂಹಿತೆಗಳು ಗಿಗ್‌ ಮತ್ತು ಫ್ಲಾಟ್‌ಫಾರ್ಮ್ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಬಹುಪಾಲು ಕಾರ್ಮಿಕರಿಗೆ ಸಮಗ್ರ ಮತ್ತು ಕಡ್ಡಾಯ ಸಾಮಾಜಿಕ ಭದ್ರತೆ ಖಾತರಿ ಪಡಿಸುವುದಿಲ್ಲ’ ಎಂದು ಟೀಕಿಸಿದರು.

ಕಡ್ಡಾಯವಾಗಿ 60 ದಿನಗಳ ಮುಂಚೆ ಮುಷ್ಕರ ನೋಟಿಸ್ ನೀಡಬೇಕು ಎಂದು ಹೇಳುವ ಮೂಲಕ ಟ್ರೇಡ್ ಯೂನಿಯನ್ ಹಕ್ಕಿನ ಮೇಲೆ ನಿರ್ಬಂಧ ಹಾಕಲಾಗುತ್ತಿದೆ ಎಂದು ದೂರಿದರು.

ಕನಿಷ್ಠ ವೇತನ ಮತ್ತು ಸಮಾನ ಸಂಬಳದ ಖಾತರಿ ಇಲ್ಲದಾಗಿದೆ. ಗುತ್ತಿಗೆ ಕಾರ್ಮಿಕ ಶೋಷಣೆಗೆ ಅವಕಾಶಗಳು ಹೆಚ್ಚಿವೆ. ಯಜಮಾನ ಪರ ನೀತಿಗಳಾಗಿವೆ ಎಂದು ಟೀಕಿಸಿದರು.‌

‌ಕಾರ್ಮಿಕರ ಹಕ್ಕು ಉಳಿಸಿ, ಬದುಕು ಉಳಿಸಿ, ಕಾರ್ಮಿಕರು ಬಲವಾಗಿದ್ರೆ ಮಾತ್ರ ದೇಶ ಬಲವಾಗುತ್ತದೆ ಎಂಬ ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಇಂಟಕ್ ಜಿಲ್ಲಾ ಅಧ್ಯಕ್ಷ ತೌಫೀಕ್ ಪಾರ್ಥಹಳ್ಳಿ,  ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ, ನಿಂಗಪ್ಪ ಗಸ್ತಿ, ಕುತ್ಬುಬುದ್ದೀನ್ ಖಾಜಿ, ರಾಜು ಮನ್ನಿಕೇರಿ, ಶ್ರೀಧರ್ ನೀಲನಾಯಕ, ವೈ.ವೈ. ತಿಮ್ಮಾಪುರ, ರೇಣುಕಾ ನ್ಯಾಮಗೌಡ, ರೇಣುಕಾ ನಾರಾಯಣಕರ, ಪ್ರಭು ರುದ್ರಾಕ್ಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.