
ಮಹಾಲಿಂಗಪುರ (ಬಾಗಲಕೋಟೆ): ರಬಕವಿ–ಬನಹಟ್ಟಿ ತಾಲ್ಲೂಕಿನ ಸಮೀರವಾಡಿಯ ಗೋದಾವರಿ ಬಯೋರಿಫೈನರಿ ಕಾರ್ಖಾನೆ ಕೇನ್‌ಯಾರ್ಡ್‌ನಲ್ಲಿ ನಿಂತಿದ್ದ 50ಕ್ಕೂ ಹೆಚ್ಚು ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಗುರುವಾರ ಸಂಜೆ ಬೆಂಕಿ ಹಚ್ಚಿದರು. ಇದರ ಪರಿಣಾಮ ರಾತ್ರಿಯವರೆಗೆ ಆತಂಕದ ವಾತಾವರಣ ನಿರ್ಮಾಣವಾಯಿತು.
ಕಬ್ಬು ಸಹಿತ ಕೆಲ ಟ್ರ್ಯಾಕ್ಟರ್‌ಗಳು ಬೆಂಕಿಗೆ ಆಹುತಿಯಾದವು. ಕಾರ್ಖಾನೆ ಬಳಿ ನಡೆದ ಕಲ್ಲು ತೂರಾಟದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ರೈತ ವಿಠ್ಠಲ ಹೊಸಮನಿ ಎಂಬುವರು ಸೇರಿ ಹಲವರಿಗೆ ಗಾಯಗಳಾದವು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ಘಟನೆ ಏನು?: ಕಾರ್ಖಾನೆಯಲ್ಲಿ ಗುರುವಾರ ಬೆಳಿಗ್ಗೆ ಕೇನ್ ಕ್ಯಾರಿಯರ್ ಪೂಜೆ ನಡೆದ ವಿಷಯ
ಗೊತ್ತಾದ ತಕ್ಷಣವೇ ಆಕ್ರೋಶಗೊಂಡ ರೈತರು ಸೇರಿ ಕೆಲವರು ಕಾರ್ಖಾನೆಗೆ ಮುತ್ತಿಗೆ ಹಾಕಲು ಮುಧೋಳದಿಂದ ವಾಹನಗಳಲ್ಲಿ ಹೊರಟರು. ಸಂಗಾನಟ್ಟಿ ಕ್ರಾಸ್ ಬಳಿ ಎದುರಾದ ಎರಡು ಟ್ರ್ಯಾಕ್ಟರ್‌ಗಳಿಗೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದರು.
ಕಾರ್ಖಾನೆಯ ಕೇನ್ ಯಾರ್ಡ್‌ನಲ್ಲಿ ಕಬ್ಬು ಸಹಿತ 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿರುವುದನ್ನು ಕಂಡು ಸಿಟ್ಟಿಗೆದ್ದು, ಅವುಗಳತ್ತ ಕೆಲವರು ನುಗ್ಗಿದರು. ಅವುಗಳಿಗೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದರು.
ಮುಧೋಳ ಸಂಪೂರ್ಣ ಬಂದ್
ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನಡೆಸುತ್ತಿರುವ ಹೋರಾಟಕ್ಕೆ ಗುರುವಾರ ವ್ಯಾಪಾರಸ್ಥರು ಬೆಂಬಲ ವ್ಯಕ್ತಪಡಿಸಿದರು. ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದರಿಂದ ಮುಧೋಳದಲ್ಲಿ ಇಡೀ ದಿನ ವಹಿವಾಟು ಸ್ತಬ್ಧವಾಗಿತ್ತು.
ಟ್ರ್ಯಾಕ್ಟರ್, ಎತ್ತಿನ ಗಾಡಿ, ಆಟೊಗಳೊಂದಿಗೆ ಮುಧೋಳದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ಅಡುಗೆ ಮಾಡಿ, ಊಟ ಮಾಡಿದರು.
‘ಪ್ರತಿ ಟನ್ ಕಬ್ಬಿಗೆ ₹3,300 ನೀಡಬೇಕು ಎಂಬ ಆದೇಶ ರಾಜ್ಯ ಸರ್ಕಾರ ಹೊರಡಿಸಿದೆ. ಇದನ್ನು ನಾವು ಒಪ್ಪಲ್ಲ. ಮುಧೋಳದಲ್ಲಿ ಟನ್ ಕಬ್ಬಿಗೆ ₹3,500 ನೀಡಬೇಕು. ದರ ನಿಗದಿ ಆಗುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ’ ಎಂದು ಕಬ್ಬು ಬೆಳೆಗಾರರು ಎಚ್ಚರಿಕೆ ನೀಡಿದರು.
ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ರೈತರು, ಪೊಲೀಸರ ಮೇಲೆಯೂ ತೂರಲಾಗಿದೆ. ಕಾರ್ಖಾನೆಗೆ ಹೋಗುವ ಮೊದಲೇ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.– ಸುಭಾಷ ಶಿಬರೂರ, ರೈತ ಮುಖಂಡ
ರಿಕವರಿ ಆಧಾರದ ಮೇಲೆ ದರ ನಿರ್ಧರಿಸಬಾರದು ಎಂಬುದು ರೈತರ ಆಗ್ರಹವಾಗಿತ್ತು. ಇದಕ್ಕೆ ಕಾರ್ಖಾನೆಯವರೂ ಒಪ್ಪಿದ್ದರು. ಈಗ ಈ ಘಟನೆ ನಡೆದಿದೆ. ಘಟನೆ ಬಗ್ಗೆ ವರದಿ ತರಿಸಿಕೊಂಡು ಕ್ರಮಕೈಗೊಳ್ಳಲಾಗುವುದು.– ಆರ್.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ
ರೈತರ ಹೆಸರಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು. ಕಬ್ಬು ಸುಡುವ ಕೆಲಸ ರೈತರು ಮಾಡುವುದಿಲ್ಲ. ಹೆಚ್ಚಿನ ಬೆಲೆ ಕೊಡಿಸುವ ಪ್ರಯತ್ನ ಮಾಡಿದ್ದೇವೆ ಹೊರತು ಕಡಿಮೆ ಮಾಡಿಲ್ಲ.– ಶಿವಾನಂದ ಪಾಟೀಲ, ಸಕ್ಕರೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.