ADVERTISEMENT

ಬಾಗಲಕೋಟೆ: ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:54 IST
Last Updated 19 ಫೆಬ್ರುವರಿ 2026, 6:54 IST
ನವನಗರದ ಸೆಕ್ಟರ್ ನಂ.47 ರಲ್ಲಿನ ಕರ್ನಾಟಕ ರಾಜ್ಯ ಬೀಜ ನಿಗಮದ ಸಂಸ್ಕರಣಾ ಘಟಕದ ಯಂತ್ರಗಳಿಂದಾಗುವ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು
ನವನಗರದ ಸೆಕ್ಟರ್ ನಂ.47 ರಲ್ಲಿನ ಕರ್ನಾಟಕ ರಾಜ್ಯ ಬೀಜ ನಿಗಮದ ಸಂಸ್ಕರಣಾ ಘಟಕದ ಯಂತ್ರಗಳಿಂದಾಗುವ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು   

ಬಾಗಲಕೋಟೆ: ನವನಗರದ ಸೆಕ್ಟರ್ ನಂ.47ರಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿನ ಯಂತ್ರಗಳ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಒತ್ತಾಯಿಸಿ ನವನಗರದ ಮುಚಖಂಡಿ ಅತಿಥಿ ಬಡಾವಣೆಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಬೀಜ ನಿಗಮದ ಸಂಸ್ಕರಣಾ ಘಟಕದ ಮುಂದೆ ಪ್ರತಿಭಟನೆ ನಡೆಸಿದ ಬಡಾವಣೆಯ ನಿವಾಸಿಗಳು ಬೀಜ ಸಂಸ್ಕರಣಾ ಘಟಕದಿಂದ ಹೊರ ಬರುವ ಶಬ್ದವನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಡಾವಣೆ ನಿವಾಸಿಗಳಾದ ರೇಣುಕಾ ಹೂವಿನಹಳ್ಳಿ, ಲಚ್ಚವ್ವ ಅಂಬಿಗೇರ ಹಾಗೂ ರೇಣುಕಾ ಹೆರಕಣ್ಣವರ, ಬೀಜ ನಿಗಮದ ಸಂಸ್ಕರಣಾ ಘಟಕದಿಂದ ನಿತ್ಯ ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆಯವರೆಗೆ ಯಂತ್ರದಿಂದ ಬರುವ ಶಬ್ಧದಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಇಳಿವಯಸ್ಸಿನವರು, ಮಕ್ಕಳಿಗೆ ಯಂತ್ರದ ಸಪ್ಪಳದಿಂದ ಸಮಸ್ಯೆಗಳಾಗುತ್ತಿದ್ದು ಭಾರೀ ಸಪ್ಪಳ ನಿಯಂತ್ರಣಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಗಮನಹರಿಸುವಂತೆ ಆಗ್ರಹಿಸಿದರಲ್ಲದೇ, 15 ದಿನದೊಳಗೆ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಬೀಜ ನಿಗಮದ ಕಚೇರಿ ಮುಂದೆ ಬೃಹತ್ ಹೋರಾಟ ನಡೆಸುವುದಾಗಿ ಹೇಳಿದರು.

ADVERTISEMENT

ವಕೀಲ ಎಸ್.ಪಿ.ಹೂವಿನಹಳ್ಳಿ ಮಾತನಾಡಿ, ಈ ಬಗ್ಗೆ ಮೌಖಿಕವಾಗಿ ನಿಗಮದ ವ್ಯವಸ್ಥಾಪಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನವಸತಿ ಪ್ರದೇಶದಲ್ಲಿ ಇಷ್ಟೊಂದು ಯಂತ್ರದ ಶಬ್ದ ಬರುತ್ತಿದ್ದರೂ ಅದಕ್ಕೆ ಪರ್ಯಾಯ ಮಾರ್ಗವನ್ನು ಅಧಿಕಾರಿಗಳು ಕೈಗೊಂಡಿಲ್ಲ ಎಂದು ದೂರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ ಪ್ರತಿಭಟನಾಕಾರರು ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ಆಶೀಪ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಈರವ್ವ ಬಣಕಾರ, ಚಂದ್ರವ್ವ ಅಂತಾಪುರ, ಬಸಪ್ಪ ಶಿಕ್ಕೇರಿ, ಡಿ.ವಿ.ಹೆರಕಣ್ಣವರ, ಲಕ್ಷ್ಮವ್ವ ನೀರಲಕೇರಿ, ಪಿ.ಜಿ.ಹೆರಕಣ್ಣವರ, ಎಸ್.ಎಚ್.ಹೆರಕಣ್ಣವರ, ಬಸಗಂಗವ್ವ ಗಾಣಿಗೇರ, ರೇಣುಕಾ ಗಾಣಿಗೇರ, ಗುರುಸಿದ್ದವ್ವ ಅಂಬಲಿಕೊಪ್ಪ, ಎಸ್.ಎಸ್.ಹಿರೇಮಠ, ಎಂ.ಎಲ್.ಅಂಬಿಗೇರ, ಸುನಂದ ಗಾಣಿಗೇರ, ಮಲ್ಲವ್ವ ಗಾಣಿಗೇರ, ಸಿ.ಎಸ್.ರಾಯಚೂರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.