ADVERTISEMENT

ಉರಗ ರಕ್ಷಣೆಗೆ ನಿಂತ ನಬೀಸಾಬ್‌

ಅರಣ್ಯ ಇಲಾಖೆ, ಸಾರ್ವಜನಿಕರ ಆತಂಕ ದೂರಮಾಡುವ ಲಾರಿ ಚಾಲಕ

ವಿಶ್ವಜ ಕಾಡದೇವರ
Published 29 ಜೂನ್ 2019, 19:45 IST
Last Updated 29 ಜೂನ್ 2019, 19:45 IST
ಉದ್ದದ ಹಾವನ್ನು ಹಿಡಿದು ಸಾರ್ವಜನಿಕರಿಗೆ ತೋರುಸುತ್ತಿರುವ ನಬೀಸಾಬ್‌ ಶಿಲ್ಲೆದಾರ್
ಉದ್ದದ ಹಾವನ್ನು ಹಿಡಿದು ಸಾರ್ವಜನಿಕರಿಗೆ ತೋರುಸುತ್ತಿರುವ ನಬೀಸಾಬ್‌ ಶಿಲ್ಲೆದಾರ್   

ರಬಕವಿ ಬನಹಟ್ಟಿ: ಸಮೀಪದ ಹನಗಂಡಿ ಗ್ರಾಮದ ನಬೀಸಾಬ್‌ ಶಿಲ್ಲೆದಾರ್ ವೃತ್ತಿಯಲ್ಲಿ ಸರಕು ಸಾಗಣೆ ವಾಹನದ ಚಾಲಕರು. ಆದರೆ, ಪ್ರವೃತ್ತಿಯಲ್ಲಿ ಉರಗಪ್ರೇಮಿ.

ಈ ಭಾಗದ ಜನಕ್ಕೆ ಅವರು ‘ಸ್ನೇಕ್‌ ನಬೀ’ ಎಂದೇ ಪರಿಚಿತರಾಗಿದ್ದಾರೆ. 28 ವಯಸ್ಸಿನ ಅವರು ತಮ್ಮ 15ನೇ ವಯಸ್ಸಿನಿಂದಲೇ ಹಾವುಗಳನ್ನು ಹಿಡಿಯುತ್ತ ಬಂದಿದ್ದಾರೆ.

ಯಾರೇ ದೂರವಾಣಿ ಮೂಲಕ ಹಾವು ಇರುವ ಬಗ್ಗೆ ಮಾಹಿತಿ ನೀಡಿದರೆ ಕೆಲವೇ ಕ್ಷಣಗಳಲ್ಲಿ ಆ ಸ್ಥಳಕ್ಕೆ ಹೋಗಿ ಹಾವನ್ನು ಹಿಡಿದು ನಂತರ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸುವ ಕಾರ್ಯವನ್ನು ನಬೀಸಾಬ್‌ ಮಾಡುತ್ತಾರೆ.

ADVERTISEMENT

ಅಥಣಿ ತಾಲ್ಲೂಕಿನ ಹಳ್ಯಾಳ ಸಕ್ಕರೆ ಕಾರ್ಖಾನೆಯ ಹತ್ತಿರದ ಮನೆಯೊಂದರಲ್ಲಿ ಹಾವು ಇದೆ ಬೇಗ ಬನ್ನಿ ಎಂದು ಅಲ್ಲಿಯ ಜನರು ನಬೀಸಾಬ್‌ ಅವರಿಗೆ ದೂರವಾಣಿಯ ಮೂಲಕ ತಿಳಿಸಿದಾಗ, ಸ್ಥಳಕ್ಕೆ ಹೋದ ನಬೀ ಹಾವು ಹಿಡಿದಾಗ ಪ್ರತಿಯೊಬ್ಬರು ಗಾಬರಿಗೊಂಡರು. ಅದು ಅಂದಾಜು 12 ಅಡಿ ಉದ್ದದ ಹಾವು ಅದಾಗಿತ್ತು.

ಈಚೆಗೆ ತೇರದಾಳ ಮತ್ತು ಶೇಗುಣಶಿ ರಸ್ತೆಯ 2ನೇ ಕಾಲುವೆ ಹತ್ತಿರದ ಚನ್ನಪ್ಪ ಮಾದಿಗೊಂಡ ಅವರ ತೋಟದ ಮನೆಯಲ್ಲಿ ಒಂದೇ ದಿನದಲ್ಲಿ ನಾಲ್ಕು ಹಾವುಗಳನ್ನು ಬಂದಿದ್ದವು. ಅವುಗಳನ್ನು ಹಿಡಿದು ತೋಟದ ಮನೆಯ ಸದಸ್ಯರಿಗೆ ಬಹಳ ಅನುಕೂಲ ಮಾಡಿಕೊಟ್ಟರು.

‘ಹಾವುಗಳಿಂದ ಬಹಳ್ ತ್ರಾಸಾಗಿತ್ರಿ. ಹಾವಿನ ಭಯದಿಂದ ಎಂಟ ಹತ್ತು ದಿವಸ ಆಗಿತ್ರಿ ಮಲಗಿದ್ದೆ ಇಲ್ರಿ. ನಬೀ ಬಂದ ಏಕ ಕಾಲಕ್ಕೆ ನಾಲ್ಕು ಹಾವುಗಳನ್ನು ಹಿಡಿದು ನಮ್ಮಲ್ಲಿರುವ ಭಯವನ್ನು ನಿವಾರಣೆ ಮಾಡಿದರು’ ಎನ್ನುತ್ತಾರೆ ಚನ್ನಪ್ಪ ಮಾದಿಗೊಂಡ. ಈ ನಾಲ್ಕು ಹಾವುಗಳಲ್ಲಿ ಒಂದು ನಾಗರಹಾವು ಮತ್ತು ಮೂರು ವಿವಿಧ ಜಾತಿಯ ಹಾವುಗಳಿದ್ದವು. ಇವುಗಳಲ್ಲಿ ಮೂರು ಹಾವುಗಳು 8.50ರಿಂದ 10.50 ಅಡಿ ಉದ್ದ ಇದ್ದವು ಎನ್ನುತ್ತಾರೆ ನಬೀಸಾಬ್‌.

ರಬಕವಿ ಬನಹಟ್ಟಿ, ಅಥಣಿ, ರಾಯಬಾಗ, ಜಮಖಂಡಿ, ತೇರದಾಳ ತಾಲ್ಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಮತ್ತು ನೆರೆಯ ಮಹಾರಾಷ್ಟ್ರದ ಜತ್ತವರೆಗೂ ಹೋಗಿ ಅವರು ಹಾವುಗಳನ್ನು ಹಿಡಿದುಕೊಂಡು ಬಂದಿದ್ದಾರೆ.

ನಬೀಸಾಬ್‌ ತಾವು ಹಿಡಿದು ಹಾವುಗಳ ಬಗ್ಗೆ ನಮ್ಮ ಇಲಾಖೆಯ ಗಮನಕ್ಕೆ ತಂದು, ನಮ್ಮ ಮಾರ್ಗದರ್ಶನದಂತೆ ಅವುಗಳನ್ನು ಅರಣ್ಯದಲ್ಲಿ ಇಲ್ಲವೆ ಜನವಸತಿ ಇಲ್ಲದ ಪ್ರದೇಶದಲ್ಲಿ ಬಿಡುತ್ತಾರೆ. ಅವರು ಸಾರ್ವಜನಿಕರಿಗೂ ಮತ್ತು ಅರಣ್ಯ ಇಲಾಖೆಗೆ ಬಹಳಷ್ಟ ಸಹಾಯ ಮಾಡುತ್ತಿದ್ದಾರೆ ಎಂದು ಅರಣ್ಯಾಧಿಕಾರಿ ಮಲ್ಲು ನಾವಿ ಮೆಚ್ಚುಗೆ ಸೂಚಿಸಿದರು.

ನಬೀಸಾಬ್‌ಅವರ ಸಂಪರ್ಕ ಸಂಖ್ಯೆ 74110 73313

*
ಹಾವು ಎಂದರೆ ಹೆದರುವ ಜನ ಬಹಳ. ಜನರು ಅವುಗಳನ್ನು ಸಾಯಿಸಲು ಹೆದರುತ್ತಾರೆ. ನನಗೆ ದೂರವಾಣಿ ಕರೆ ಮಾಡಿ ತಿಳಿಸಿದರೆ ಕೂಡಲೇ ಹಾವುಗಳ ನೆರವಿಗೆ ಕೂಡಲೇ ಧಾವಿಸುತ್ತೇನೆ.
-ನಬೀಸಾಬ್‌, ಉರಗ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.