ADVERTISEMENT

ಬೀಳಗಿ | ಸಮುದಾಯ ಭವನ ಅಭಿವೃದ್ದಿಗೆ ₹2 ಕೋಟಿ ಅನುದಾನ: ಶಾಸಕ ಜೆ.ಟಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:26 IST
Last Updated 16 ಅಕ್ಟೋಬರ್ 2025, 4:26 IST
ಬೀಳಗಿಯಲ್ಲಿ ನಿರ್ಮಾಣವಾಗುತ್ತಿರುವ ಬಾಬು ಜಗಜೀವನರಾಂ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜೆ.ಟಿ. ಪಾಟೀಲ ಪರಿಶೀಲಿಸಿದರು
ಬೀಳಗಿಯಲ್ಲಿ ನಿರ್ಮಾಣವಾಗುತ್ತಿರುವ ಬಾಬು ಜಗಜೀವನರಾಂ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜೆ.ಟಿ. ಪಾಟೀಲ ಪರಿಶೀಲಿಸಿದರು   

ಬೀಳಗಿ: ‘ಸ್ಥಳೀಯ ಬಾಬೂ ಜಗಜೀವನರಾಂ ಹಾಗೂ ಡಾ.ಬಿ.ಆರ್. ಅಂಬೇಡ್ಕರ್‌ ಸಮುದಾಯ ಭವನಗಳ ಅಭಿವೃದ್ಧಿಗೆ ತಲಾ ₹1 ಕೋಟಿ ಮಂಜೂರು ಮಾಡಲಾಗುವುದು. ಕಾಮಗಾರಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಗದಿಪಡಿಸಿದ ಅವಧಿಯೊಳಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಕೆಲಸ ನಿರ್ವಹಿಸಬೇಕು’ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಇಲ್ಲಿನ ಬಾಬೂ ಜಗಜೀವನರಾಂ ಸಮುದಾಯ ಭವನದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಜಗಜೀವನರಾಂ ಸಮುದಾಯ ಭವನಕ್ಕೆ ₹ 70 ಲಕ್ಷ ಮಂಜೂರು ಆಗಿದ್ದು, ಇನ್ನೂ 1 ಕೋಟಿ ಮಂಜೂರು ಮಾಡಲಾಗುವುದು. ಆಶ್ರಯ ಕಾಲೊನಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಮುದಾಯ ಭವನ ಮುಂಬರುವ ಆರು ತಿಂಗಳಲ್ಲಿ ಸಿದ್ಧವಾಗಲಿದೆ’ ಎಂದರು.

‘ಬೀಳಗಿ ಪಟ್ಟಣದಲ್ಲಿರುವ ಅಂಬೇಡ್ಕರ್‌ ಸಮುದಾಯ ಭವನಕ್ಕಾಗಿ ಈಗಾಗಲೇ ₹10 ಲಕ್ಷ ನೀಡಲಾಗಿದ್ದು, ಇನ್ನೂ ₹1 ಕೋಟಿ ಮಂಜೂರು ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ಬಹಳ ವರ್ಷಗಳಿಂದ ನಿಧಾನ ಗತಿಯಲ್ಲಿ ಸಾಗುತ್ತಿರುವ ಡಾ.ಅಂಬೇಡ್ಕ‌ರ್ ಸಮುದಾಯ ಭವನ ಶೀಘ್ರ ಗತಿಯಲ್ಲಿ ನಿರ್ಮಾಣ ಮಾಡಲು ಭವನಕ್ಕೆ ₹ 2 ಕೋಟಿ ಮಂಜೂರು ಮಾಡಲು ಸಮಾಜದ ಮುಖಂಡರು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಶಾಸಕರು ಸದ್ಯದಲ್ಲೇ ಬರುವ ₹1 ಕೋಟಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಿ, ಮುಂದೆ ಮತ್ತೆ ಸರ್ಕಾರದ ಮನವೊಲಿಸಿ ಅನುದಾನ ಮಂಜೂರು ಮಾಡಿಸುವ ಕೆಲಸ ಮಾಡೋಣ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಪಡಿಯಪ್ಪ ಕರಿಗಾರ, ಸಿದ್ದು ಸಾರಾವರಿ, ಬಸವರಾಜ ಹಳ್ಳದಮನಿ, ಅನೀಲ ಗಚ್ಚಿನಮನಿ, ಶಿವಾನಂದ ಮಾದರ, ಮಹಾದೇವ ಹಾದಿಮನಿ, ಶಿವಾನಂದ ಬಸನಾಳ, ರಮೇಶ ಅನಗವಾಡಿ, ಸಿದ್ದು ದಳವಾಯಿ, ಕಾಶಿಂಅಲಿ ಗೋರೆ, ನಾಗೇಶ ಜಾನಮಟ್ಟಿ, ಶ್ಯಾಮ ಮಾದರ, ಸಮಾಜ ಕಲ್ಯಾಣಾಧಿಕಾರಿ ಜಿ.ಎಸ್. ಗಡ್ಡದೇವರಮಠ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಎಂಜಿನಿಯರ್‌ ಅರುಣ ಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.