
ಬಾಗಲಕೋಟೆ: ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು, ರಾಜ್ಯದ ಜನರ ಕೇಂದ್ರದ ವಿರುದ್ಧ ಎತ್ತಿಕಟ್ಟಲು ಜಿ ರಾಮಜಿ ಯೋಜನೆ ಬಗ್ಗೆ ಚರ್ಚಿಸಲು ಏಕಾಏಕಿ ವಿಧಾನಮಂಡಲ ಅಧಿವೇಶನ ಕರೆದಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ದ್ವೇಷ ಸಾಧಿಸಲು ಹೊರಟಿದ್ದಾರೆ. ಜಿ ರಾಮಜಿ ಯೋಜನೆ ಚರ್ಚೆಗೆ ವಿಶೇಷ ಅಧಿವೇಶನ ಕರೆಯುವ ಅಗತ್ಯ ಇರಲಿಲ್ಲ. ಶಾಸನ ಸಭೆ ಪಾವಿತ್ರ್ಯ ಹಾಳು ಮಾಡಲು ಮುಂದಾಗಿದ್ದಾರೆ. ಒಕ್ಕೂಟದ ವ್ಯವಸ್ಥೆ ಅಣುಕಿಸುವ ನಿರ್ಧಾರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ, ಕಾಂಗ್ರೆಸ್ ಸರ್ಕಾರ ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ನಾಡಿನ ಜನತೆಗೆ ಮಾಡುತ್ತಿರುವ ಅಪಮಾನ ಕೂಡ ಎಂದರು.
ವಿಕಸಿತ ಭಾರತ ಜಿ–ರಾಮಜಿ ಮೂಲಕ ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯ ಜಾರಿಗಾಗಿ ಸಕಾರಾತ್ಮಕ ಬದಲಾವಣೆ ಮಾಡಲಾಗಿದೆ.100 ದಿನಗಳ ಕೂಲಿಯನ್ನು 125 ದಿನಕ್ಕೆ ಹೆಚ್ಚಿಸಲಾಗಿದೆ. ಹಿಂದ ಬಹಳಷ್ಟು ಭ್ರಷ್ಟಾಚಾರ ನಡೆಯುತ್ತಿತ್ತು. ಹತ್ತು ಜನ ಕೆಲಸ ಮಾಡಿದರೆ, 100 ಜನರನ್ನು ತೋರಿಸಲಾಗಿತ್ತಿತ್ತು. ಸತ್ತವರ ಹೆಸರಿನಲ್ಲಿಯೂ ಲೂಟಿ ಮಾಡಲಾಗುತ್ತಿತ್ತು. ಪಾರದರ್ಶಕವಾಗಿರಬೇಕು ಬದಲಾಯಿಸಲಾಗಿದೆ ಎಂದು ಹೇಳಿದರು.
ರೈತರಿಗೆ ಅನುಕೂಲವಾಗಲಿ ಎಂದು ಕೃಷಿ ಚಟುವಟಿಕೆ ಸಂದರ್ಭದಲ್ಲಿ 60 ದಿನ ರಜೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ತೀರ್ಮಾನವಾಗಲಿದೆ. ಈ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಮೋದಿ ಅವರ ಜನಪ್ರಿಯತೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು.
ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.
ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು
ಬಾಗಲಕೋಟೆ: ದಾವಣಗೆರೆ ದಕ್ಷಿಣ ಬಾಗಲಕೋಟೆ ವಿಧಾನಸಭಾ ಚುನಾವಣೆ ಬಿಜೆಪಿಗೆ ಸವಾಲು ಹೌದು ಅವಕಾಶ ಕೂಡ ಹೌದು. ರಾಜ್ಯ ಸರ್ಕಾರ ವಿರುದ್ಧ ಜನರು ಬೇಸತ್ತಿದ್ದು ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಜನರು ಬೇಸತ್ತಿದ್ದಾರೆ. ಭ್ರಷ್ಟಾಚಾರ ಅಭಿವೃದ್ಧಿಯಲ್ಲಿ ಸರ್ಕಾರ ಹಿಂದುಳಿದಿದೆ. ಅಹಿಂದ ಹೆಸರೇಳಿ ರಾಜ್ಯ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.