ADVERTISEMENT

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ BJP ಒತ್ತಾಯ: ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 4:15 IST
Last Updated 28 ನವೆಂಬರ್ 2025, 4:15 IST
ಬಾಗಲಕೋಟೆಯಲ್ಲಿ ಗುರುವಾರ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮಾಡಲಾಯಿತು
ಬಾಗಲಕೋಟೆಯಲ್ಲಿ ಗುರುವಾರ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮಾಡಲಾಯಿತು   

ಬಾಗಲಕೋಟೆ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನವನಗರದ ಬಿಜೆಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಮೆಕ್ಕೆಜೋಳದ ಬೆಲೆ ಕುಸಿದು ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರವು ಬೆಂಬಲ ಬೆಲೆ ಘೋಷಿಸಿದ್ದರೂ, ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ತೊಡಗಿಸಿಕೊಂಡಿದೆ’ ಎಂದು ಆರೋಪಿಸಿದರು.

ADVERTISEMENT

ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ತೊಗರಿಕಾಳು ಖರೀದಿಗೂ ರಾಜ್ಯ ಸರ್ಕಾರ ವಿಳಂಬ ಮಾಡಿತು. ಇದರಿಂದ ರೈತರು ತೊಂದರೆ ಅನುಭವಿಸುವಂತಾಯಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಿಗುತ್ತಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿದ್ದ ಕೇಂದ್ರದ ಜನೌಷಧಿ ಕೇಂದ್ರಗಳನ್ನೂ ಬಂದ್ ಮಾಡಲು ಮುಂದಾಗಿದೆ’ ಎಂದು ಟೀಕಿಸಿದರು.

‘ಕಬ್ಬಿನ ಬೆಲೆಗಾಗಿ ಹೋರಾಡಿದ ರೈತರನ್ನು ಜಿಲ್ಲೆಯಲ್ಲಿ ಬಂಧಿಸಲಾಗುತ್ತಿದೆ. ಸಚಿವರು ಒಂದೆಡೆ ಕಿಡಿಗೇಡಿಗಳು ಎನ್ನುತ್ತಾರೆ. ಇನ್ನೊಂದೆಡೆ ರೈತರನ್ನು ಬಂಧಿಸಲಾಗುತ್ತಿದೆ. ನಾನು ಸಚಿವನಾಗಿದ್ದಾಗ ಗಲಾಟೆಯಾಗಲು ಬಿಟ್ಟಿರಲಿಲ್ಲ. ತೋಟದ ಮನೆಗಳಲ್ಲಿ ಇಸ್ಪೀಟ್ ಕ್ಲಬ್‌ಗಳನ್ನು ತೆರೆಯಲಾಗಿದೆ. ನದಿಗಳಲ್ಲಿನ ಉಸುಕು ಲೂಟಿ ಮಾಡುತ್ತಿರುವುದರಿಂದ ನದಿಗಳೇ ಇಲ್ಲವಾಗುತ್ತಿವೆ’ ಎಂದು ವಾಗ್ದಾಳಿ ನಡೆಸಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣೊಗಳಿಸುವೆವು ಎಂದು ಹಿಂದೆ ಪಾದಯಾತ್ರೆ ಮಾಡಿದ್ದೀರಿ. ಆದರೆ, ಎರಡೂವರೆ ವರ್ಷಗಳಿಂದ ಅನುದಾನ ನೀಡುತ್ತಿಲ್ಲ’ ಎಂದು ದೂರಿದರು.

ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ಇದು ದಲಿತ ವಿರೋಧಿ ಸರ್ಕಾರವಾಗಿದೆ. ರಾಜ್ಯದಲ್ಲಿ ಸರ್ಕಾರ ಇದೆಯಾ ಎಂದು ಪ್ರಶ್ನಿಸಿದರು.

ಇನ್ನೂ ಎರಡೂವರೆ ವರ್ಷ ನೀವೇ ಆಡಳಿತ ನಡೆಸಿರಿ. ನಿಮ್ಮ ದುರಾಡಳಿತ ಜನರಿಗೆ ಗೊತ್ತಾಗಲಿ. ಸಿಎಂ ಬದಲಾವಣೆಯಿಂದ ದುರಾಡಳಿತ ತಪ್ಪುವುದಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ತರಲು ಮುಂದಾಗಿರುವ ಉದ್ಯಮಗಳಿಗೆ ರಾಜ್ಯ ಸರ್ಕಾರ ಭೂಮಿ ನೀಡುತ್ತಿಲ್ಲ ಎಂದು ಟೀಕಿಸಿದರು.

ಮಾಜಿ ಶಾಸಕ ರಾಜಶೇಖರ ಶೀಲವಂತ, ಮಲ್ಲಿಕಾರ್ಜುನ, ರಾಜು ನಾಯ್ಕರ್, ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ಟವಳಿ, ಸಿದ್ದನಗೌಡ ಪಾಟೀಲ, ಶಶಿಕುಮಾರ, ಸಂಗೀತಾ, ರಾಜು ರೇವಣಕರ ಪಾಲ್ಗೊಂಡಿದ್ದರು.

ಪಡಿತರ ಅಕ್ಕಿ ಜಿಲ್ಲೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದ್ದರೂ ಕಳ್ಳರನ್ನು ಹಿಡಿಯುವ ಕೆಲಸ ಆಗುತ್ತಿಲ್ಲ
ಗೋವಿಂದ ಕಾರಜೋಳ ಸಂಸದ ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.