ADVERTISEMENT

ಹುನಗುಂದ ಸಮೀಪ ಡಿಸಿಎಂ ಸವದಿ ಪುತ್ರನ ಕಾರು ಡಿಕ್ಕಿ: ರೈತ ಸಾವು

ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಕಾರಿನಲ್ಲಿದ್ದವರು ಅಲ್ಲಿಂದ ತೆರಳಿರುವುದು ಹಲವು ಅನುಮಾನಗಳಿಗೆ ಕಾರಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 20:25 IST
Last Updated 6 ಜುಲೈ 2021, 20:25 IST
ಬೈಕ್‌ಗೆ ಡಿಕ್ಕಿ ಹೊಡೆದ ಕಾರು
ಬೈಕ್‌ಗೆ ಡಿಕ್ಕಿ ಹೊಡೆದ ಕಾರು   

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕಳಸದ ಮಾರ್ಗ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ರಾತ್ರಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಇದ್ದ ಕಾರು ಡಿಕ್ಕಿ ಹೊಡೆದು ರೈತರೊಬ್ಬರು ಸಾವಿಗೀಡಾಗಿದ್ದಾರೆ.

ಅಪಘಾತದಲ್ಲಿ ಬಾಗಲಕೋಟೆ ತಾಲ್ಲೂಕು ಹಂಡರಗಲ್‌ ನಿವಾಸಿ ಕೂಡ್ಲೆಪ್ಪ ಬೋಳಿ (55) ಸಾವಿಗೀಡಾಗಿದ್ದಾರೆ. ಹೊಲಕ್ಕೆ ತೆರಳಿದ್ದ ಅವರು ವಾಪಸ್‌ ಬೈಕ್‌ನಲ್ಲಿ ಮನೆಗೆ ಮರಳುವಾಗ ಅಪಘಾತ ಸಂಭವಿಸಿದೆ. ಈ ವೇಳೆ ತೀವ್ರ ಗಾಯಗೊಂಡ ಅವರನ್ನು ಆಂಬುಲೆನ್ಸ್‌ನಲ್ಲಿ ಬಾಗಲಕೋಟೆಯ ಗುಳೇದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ರಾತ್ರಿಯೇ ಕೂಡ್ಲೆಪ್ಪ ಬೋಳಿ ಸಾವಿಗೀಡಾಗಿದ್ದಾರೆ ತಿಳಿದುಬಂದಿದೆ.

ಕಾರು ಬೆಂಗಳೂರಿನಿಂದ ವಿಜಯಪುರ ಮಾರ್ಗವಾಗಿ ಅಥಣಿಗೆ ಹೊರಟಿತ್ತು. ಕಾರಿನಲ್ಲಿ ಚಿದಾನಂದ ಸೇರಿದಂತೆ ನಾಲ್ವರು ಇದ್ದರು. ಅವರ ಹಿಂದೆಯೇ ಮತ್ತೊಂದು ವಾಹನ ಕೂಡ ಇತ್ತು.

ADVERTISEMENT

ಮುಚ್ಚಿ ಹಾಕುವ ಪ್ರಯತ್ನ?: ’ಅಪಘಾತ ನಡೆದ ನಂತರ ಜನರು ಸೇರಿದ್ದರಿಂದ ಕಾರಿನಲ್ಲಿ ಇದ್ದವರು ವಾಹನ ಅಲ್ಲಿಯೇ ಬಿಟ್ಟು ತೆರಳಿದ್ದರು. ಕಾರು ಡಿಸಿಎಂ ಲಕ್ಷ್ಮಣ ಸವದಿ ಅವರ ಕುಟುಂಬಕ್ಕೆ ಸೇರಿದೆ. ಆದರೆ ಅಪಘಾತ ನಡೆದ ವೇಳೆ ಕಾರಿನಲ್ಲಿ ಸವದಿ ಪುತ್ರ ಚಿದಾನಂದ ಇದ್ದರೋ, ಬೇರೆ ಯಾರು ಇದ್ದರೋ ಎಂಬುದು ಗೊತ್ತಿಲ್ಲ. ಆದರೆ ಕಾರು ಚಾಲಕ ಹನುಮಂತ ಸಿಂಗ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ‘ ಎಂದು ಹುನಗುಂದ ವೃತ್ತ ನಿರೀಕ್ಷಕ ಹೊಸಕೇರಪ್ಪ ತಿಳಿಸಿದರು.

’ಅಪಘಾತದ ವೇಳೆ ಸವದಿ ಪುತ್ರ ಚಿದಾನಂದ ಅವರೇ ಕಾರು ಚಲಾಯಿಸುತ್ತಿದ್ದರು. ಕಾರಿನಲ್ಲಿದ್ದವರ ವಿಡಿಯೋ ಮಾಡಿದಾಗ ಫೋನ್ ಕಸಿದುಕೊಂಡು ಅದರಲ್ಲಿನ ದೃಶ್ಯಾವಳಿ ಡಿಲೀಟ್ ಮಾಡಿಸಿದರು‘ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಮೃತ ವ್ಯಕ್ತಿಯ ಕುಟುಂಬದವರ ಜೊತೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಆಸ್ಪತ್ರೆಯಲ್ಲಿಯೇ ಬೆಳಗಿನ ಜಾವ 3 ಗಂಟೆಯವರೆಗೆ ಸಂಧಾನ ನಡೆಸಲಾಯಿತು ಎಂದು ಗೊತ್ತಾಗಿದೆ.

ಚಿದಾನಂದ ಸವದಿ

ಕಾರು ನನ್ನದೇ, ಅದರಲ್ಲಿ ನಾನಿರಲಿಲ್ಲ: ಚಿದಾನಂದ ಸವದಿ
ಅಥಣಿ (ಬೆಳಗಾವಿ ಜಿಲ್ಲೆ): ‘ಅಪಘಾತವಾಗಿರುವುದು ನನ್ನದೇ ಕಾರು. ಆದರೆ, ಅದರಲ್ಲಿ ನಾನಿರಲಿಲ್ಲ’ –ಅಪಘಾತ ಕುರಿತು ಚಿದಾನಂದ ಸವದಿ ಅವರ ಪ್ರತಿಕ್ರಿಯೆ ಇದು.

‘ನಾನು ಸ್ನೇಹಿತರ ಕಾರಲ್ಲಿದ್ದೆ. ನನ್ನ ಕಾರಿನಲ್ಲಿ ಚಾಲಕನಲ್ಲದೆ ಮೂವರು ಸ್ನೇಹಿತರಿದ್ದರು. ದ್ವಿಚಕ್ರವಾಹನ ಸವಾರ ಏಕಾಏಕಿ ಅಡ್ಡ ಬಂದಿದ್ದರಿಂದ ಅಪಘಾತವಾಗಿದೆ ಎಂದು ಚಾಲಕ ತಿಳಿಸಿದ. ಆಗ ನಾನಿದ್ದ ಕಾರು 30 ಕಿ.ಮೀ. ದೂರದಲ್ಲಿತ್ತು. ಮಾಹಿತಿ ತಿಳಿದಂತೆ ಆಂಬುಲೆನ್ಸ್‌ಗೆ ವ್ಯವಸ್ಥೆ ಮಾಡಿಸಿದೆ. ಪೊಲೀಸರಿಗೂ ಮಾಹಿತಿ ನೀಡಿದ್ದೆ. ವೈದ್ಯರ ಜೊತೆಗೂ ಮಾತನಾಡಿದ್ದೆ. ಬೇರೆ ಆಸ್ಪತ್ರೆಯಲ್ಲಿ ಆಮ್ಲಜನಕ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು. ರಾತ್ರಿ 8ಕ್ಕೆ ಕರೆ ಮಾಡಿದಾಗ ವ್ಯಕ್ತಿ ಸಾವಿಗೀಡಾದ ಸುದ್ದಿಯನ್ನು ವೈದ್ಯರು ತಿಳಿಸಿದರು’ ಎಂದು ಹೇಳಿದರು.

‘ಕಾರಿನ‌ ನಂಬರ್ ಪ್ಲೇಟ್ ಬದಲಿಸಿದ ವಿಷಯ ನನಗೆ ಗೊತ್ತಿಲ್ಲ. ‘ಯಾರಿಗೂ ಧಮಕಿ ಹಾಕುವ ಪ್ರಶ್ನೆಯೇ ಇಲ್ಲ. ಯಾರೊಂದಿಗೂ
ವಾಗ್ವಾದ ನಡೆಸಿಲ್ಲ. ಆರೋಪಿಸಿದವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಮೃತನಕುಟುಂಬದವರ ಮನೆಗೆ ಹೋಗಿ ಸಾಂತ್ವನ ಹೇಳುತ್ತೇನೆ’ ಎಂದರು.

ಕಾರು ಚಿದಾನಂದ ಸವದಿ ಅವರ ಹೆಸರಿಗೆ ಮೇ 21ರಂದು ಬೆಳಗಾವಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಆಗಿದೆ ಎಂದು ತಿಳಿದುಬಂದಿದೆ.

ಕಷ್ಟದಲ್ಲಿದ್ದರೆ ಸಹಾಯ: ಲಕ್ಷ್ಮಣ ಸವದಿ
ಮೈಸೂರು: ‘ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಳಸದ ಮಾರ್ಗ ಬಳಿ ಸೋಮವಾರ ಸಂಜೆ ಅಪಘಾತ ಸಂಭವಿಸಿದ ಕಾರಿನಲ್ಲಿ ನನ್ನ ಪುತ್ರ ಇರಲಿಲ್ಲ. ಆತ ಮುಂದಿನ ಕಾರಿನಲ್ಲಿದ್ದ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಂಗಳವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾರು ಯಾರು ಚಾಲನೆ ಮಾಡುತ್ತಿದ್ದರು ಎನ್ನುವುದು ಮುಖ್ಯ. ಕಾರಿನಲ್ಲಿ ಯಾರಿದ್ದರು ಎಂಬುದಲ್ಲ. ಮುಂದಿನ ಕಾರಿನಲ್ಲಿದ್ದ ನನ್ನ ಪುತ್ರ, ಅಪಘಾತ ನಡೆದ ತಕ್ಷಣವೇ ವಾಪಸ್ ಬಂದು ಗಾಯಾಳುವನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾನೆ‌’ ಎಂದರು.

‘ಮೃತಪಟ್ಟ ವ್ಯಕ್ತಿಯ ಕುಟುಂಬದವರನ್ನು ಎರಡು ದಿನಗಳ ನಂತರ ಭೇಟಿಯಾಗಿ ಸಾಂತ್ವನ ಹೇಳಲಾಗುವುದು. ಅವರು ಕಷ್ಟದಲ್ಲಿದ್ದರೆ ಸಹಾಯ ಮಾಡಲಾಗುವುದು’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.