ADVERTISEMENT

ಬಾಗಲಕೋಟೆ | ಜ.17ರಿಂದ ಚಾಲುಕ್ಯ ಉತ್ಸವ ಆಯೋಜನೆ: ಜಿಲ್ಲಾಧಿಕಾರಿ ಸಂಗಪ್ಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:15 IST
Last Updated 12 ಡಿಸೆಂಬರ್ 2025, 5:15 IST
ಸಂಗಪ್ಪ
ಸಂಗಪ್ಪ   

ಬಾಗಲಕೋಟೆ: ಡಿ.19 ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಷ್ಟ್ರೀಯ ಚಾಲುಕ್ಯ ಉತ್ಸವವನ್ನು ವಿವಿಧ ಕಾರಣಗಳ ಹಿನ್ನಲೆಯಲ್ಲಿ 2026 ಜ.17ರಿಂದ ಮೂರು ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಡಿ.19ರವರೆಗೆ ನಡೆಯಲಿದೆ. ಇದಲ್ಲದೇ ಜ.3 ರಿಂದ ಬಾದಾಮಿ ಬನಶಂಕರಿ ದೇವಿಯ ಜಾತ್ರೆ ಕೂಡಾ ತಿಂಗಳವರೆಗೆ ನಡೆಯುತ್ತಿರುವ ಹಿನ್ನಲೆಯಲ್ಲಿ ಉತ್ಸವ ಮುಂದೂಡಲಾಗಿದೆ. ಕಾರ್ಯಕ್ರಮದ ಸಿದ್ದತೆಗಳನ್ನು ಈಗಾಗಲೇ ಪ್ರಾರಂಭಗೊಂಡಿದ್ದು, ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಉತ್ಸವವಾಗಿರುವುದರಿಂದ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು, ಸಂಗೀತಗಾರರು, ನೃತ್ಯ ತಂಡಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಜ.17ರಂದು ಬಾದಾಮಿಯಲ್ಲಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಜ.18ರಂದು ಪಟ್ಟದಕಲ್ಲಿನಲ್ಲಿ, 19ರಂದು ಐಹೊಳೆಯಲ್ಲಿ ಆಯೋಜಿಸಲಾಗುವುದು. ಬಜೆಟ್‌ನಲ್ಲಿ ₹2 ಕೋಟಿ ಘೋಷಿಸಲಾಗಿದ್ದು, ಹೆಚ್ಚಿನ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಅಗಸ್ತ್ಯತೀರ್ಥ ಕೆರೆ ಮೇಲಿರುವ ಮನೆಗಳನ್ನು ಸ್ಥಳಾಂತರಿಸಲು ಈಗಾಗಲೇ ಜಾಗವೊಂದರಲ್ಲಿ ನಿವೇಶನಗಳ ರಚನೆ ಮಾಡಲಾಗಿದೆ. ಎಪಿಎಂಸಿ ಬಳಿಯೂ 9 ಎಕರೆ ಖರೀದಿ ಮಾಡಲಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಬಜೆಟ್‍ನಲ್ಲಿ ಘೋಷಿಸಿದಂತೆ ನೃತ್ಯೋತ್ಸವ ರೂಪದಲ್ಲಿ ಚಾಲುಕ್ಯ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಓಡಿಸ್ಸಾದ ಕೋನಾರ್ಕ್‌ ಮಾದರಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಕಾಲಾವಕಾಶ ಬೇಕಾಗಿರುವುದರಿಂದ ಉತ್ಸವ ಮುಂದೂಡಲಾಗಿದೆ ಎಂದರು.

ಕುಸ್ತಿ, ಸಾಣೆಕಲ್ಲು ಎತ್ತುವುದು, ರಾಕ್ ಕ್ಲೈಂಬಿಂಗ್ ಕ್ರೀಡೆಗಳನ್ನು ಆಯೋಜಿಸಲಾಗುವುದು. ವಿಚಾರಗೋಷ್ಠಿಗಳು ನಡೆಯಲಿವೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.