ADVERTISEMENT

ರಾಂಪುರ | ಸೌಕರ್ಯಗಳಿಲ್ಲದ ಚಿಟಗಿನಕೊಪ್ಪ ಗ್ರಾಮ

ಪ್ರಕಾಶ ಬಾಳಕ್ಕನವರ
Published 22 ನವೆಂಬರ್ 2023, 5:31 IST
Last Updated 22 ನವೆಂಬರ್ 2023, 5:31 IST
ಚಿಟಗಿನಕೊಪ್ಪ ಗ್ರಾಮದ ರಸ್ತೆ ಮಧ್ಯದಲ್ಲೇ ಕೊಳಚೆ ನೀರು ಸಂಗ್ರಹವಾಗಿರುವುದು
ಚಿಟಗಿನಕೊಪ್ಪ ಗ್ರಾಮದ ರಸ್ತೆ ಮಧ್ಯದಲ್ಲೇ ಕೊಳಚೆ ನೀರು ಸಂಗ್ರಹವಾಗಿರುವುದು   

ರಾಂಪುರ: ಬಾಗಲಕೋಟೆ ತಾಲ್ಲೂಕಿನ ಪುಟ್ಟ ಗ್ರಾಮ ಚಿಟಗಿನಕೊಪ್ಪ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆಯಿಲ್ಲದೆ, ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಿಲ್ಲದೆ ಪರದಾಡುವಂತಾಗಿದೆ.

ನಾಯನೇಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮ ಬಹುತೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ ಸಿಸಿ ರಸ್ತೆಗಳಿಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ಹರಿದು ಹೋಗುತ್ತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಮಕ್ಕಳು ಶಾಲೆಗೆ ತೆರಳುವ ರಸ್ತೆಯೇ ಮಣ್ಣಿನಿಂದ ಕೂಡಿದ್ದು, ಮಳೆಯಾದರೆ ಎಲ್ಲವೂ ಕೆಸರುಮಯವಾಗುತ್ತದೆ.

ಸಾವಿರದಷ್ಟು ಜನಸಂಖ್ಯೆಯಿರುವ ಚಿಟಗಿನಕೊಪ್ಪ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ಸಿಕ್ಕಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕೆ.ಆರ್.ಐ.ಡಿ.ಎಲ್‌ದಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿತ್ತು. ಆದರೆ ಅದರಿಂದ ಜನರಿಗೆ ಈತನಕ ಕುಡಿಯುವ ನೀರೇ ಸಿಕ್ಕಿಲ್ಲ. ಈಗ ಘಟಕದ ಸ್ಥಿತಿ ಅಯೋಮಯವಾಗಿದೆ.

ADVERTISEMENT

ಶೌಚಾಲಯ ಕೊರತೆ: ಮಹಿಳೆಯರಿಗೆ ಶೌಚಾಲಯಗಳಿಲ್ಲದೇ ಬಯಲು ಶೌಚ ಅನಿವಾರ್ಯವಾಗಿದೆ. ಈ ಸಮಸ್ಯೆ ಪರಿಹಾರಿಸುವ ನಿಟ್ಟಿನಲ್ಲಿ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಗ್ರಾಮದ ಮಹಿಳೆಯರು ದೂರುತ್ತಾರೆ.

ಶಾಲೆಯತ್ತ ಕೊಳಚೆ ನೀರು: ಓಣಿಗಳಲ್ಲಿ ಹರಿಯುವ ನೀರು ಶಾಲಾ ಆವರಣ ಪ್ರವೇಶಿಸುತ್ತಿದೆ. ಮಳೆಯಾದರಂತೂ ಎಲ್ಲ ನೀರು ಆವರಣದಲ್ಲಿ ನಿಲ್ಲುತ್ತದೆ. ಶಾಲೆಗೆ ಸರಿಯಾದ ನೀರಿನ ಸೌಲಭ್ಯವಿಲ್ಲ. ಕೊಠಡಿಗಳು ಶಿಥಿಲಗೊಂಡಿದ್ದು, ಸಂಬಂಧಿತ ಅಧಿಕಾರಿಗಳು ಕಣ್ಣು ಹಾಯಿಸಬೇಕಿದೆ.

ನೀರೇ ಬಾರದ ಜೆಜೆಎಂ: ಮಹತ್ವಾಕಾಂಕ್ಷೆಯ ಜೆಜೆಎಂ ಯೋಜನೆ ಎಲ್ಲ ಗ್ರಾಮಗಳಲ್ಲಿ ವಿಫಲವಾಗಿರುವಂತೆ ಇಲ್ಲಿಯೂ ಪುನರಾವರ್ತನೆಯಾಗಿದೆ. ನಳ ಜೋಡಿಸಿದ್ದು ಅದರಲ್ಲಿ ನೀರೂ ಬಂದಿಲ್ಲ. ಸರಿಯಾದ ಜೋಡಣೆೆಯೂ ಆಗಿಲ್ಲ.

ಒಟ್ಟಾರೆ ಚಿಟಗಿನಕೊಪ್ಪ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಅಭಿವೃದ್ಧಿಯನ್ನು ಕಾಣದಾಗಿದೆ. ಜಿಲ್ಲೆಯ ಆಡಳಿತ ಈ ಪುಟ್ಟ ಗ್ರಾಮದ ಸ್ಥಿತಿಗತಿ ಅರಿತು ಕನಿಷ್ಟ ಸೌಕರ್ಯಗಳನ್ನಾದರೂ ಒದಗಿಸಿದರೆ ಅನುಕೂಲವಾದೀತು ಎಂಬುದು ಜನರ ಆಗ್ರಹ.

ಕಿತ್ತು ಹೋಗಿರುವ ಶುದ್ಧ ಕುಡಿಯುವ ನೀರಿನ ಘಟಕ
ಕುಡಿಯುವ ನೀರಿನ ಘಟಕ ಮರುಸ್ಥಾಪನೆಗೆ ಅಧಿಕಾರಿಗಳು ಹೇಳಿದಂತೆ ಎತ್ತರದ ಕಟ್ಟೆ ನಿರ್ಮಿಸಲಾಗಿದೆ. ಆದರೆ ಸಂಬಂಧಿಸಿದವರು ಮುಂದಿನ ಕ್ರಮ ಕೈಗೊಂಡಿಲ್ಲ
–ಮುತ್ತಪ್ಪ ಡೋಣಿ ಗ್ರಾಪಂ ಪಿಡಿಒ ನಾಯನೇಗಲಿ
ದೊಡ್ಡ ದೊಡ್ಡ ಸಿಟಿಗೆ ಕುಡಿಯಾಕ ಚಲೋ ನೀರು ಕೊಡತಾರ. ಹಳ್ಳಿ ಜನರ ಬಗ್ಗೆ ಯಾರೂ ಕಣ್ಣು ತೆರೆಯೂದಿಲ್ಲ. ನೀರಿನ ಘಟಕ ಮಾಡಿ ನಾಲ್ಕ ವರ್ಷ ಆತು. ನೀರು ಮಾತ್ರ ಬರಲಿಲ್ಲ
–ಯಲ್ಲವ್ವ, ಗ್ರಾಮದ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.