ADVERTISEMENT

ಬಾಗಲಕೋಟೆ: ಮನರೇಗಾ ಹೆಸರು ಬದಲಾವಣೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 8:15 IST
Last Updated 23 ಡಿಸೆಂಬರ್ 2025, 8:15 IST
ಮನರೇಗಾ ಹೆಸರು ಬದಲಾಯಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಮುಖಂಡರು ಸೋಮವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದರು
ಮನರೇಗಾ ಹೆಸರು ಬದಲಾಯಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಮುಖಂಡರು ಸೋಮವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಮಹಾತ್ಮ ಗಾಂಧಿ ಹೆಸರಿನ ನರೇಗಾ ಯೋಜನೆ ಹೆಸರು ಬದಲಾವಣೆ ಹಾಗೂ ನ್ಯಾಷನಲ್‌ ಹೆರಾಲ್ಡ್ ವಿಚಾರದಲ್ಲಿ ಸುಳ್ಳು ಆರೋಪ ಹೊರಿಸದ್ದನ್ನು ಖಂಡಿಸಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಿದರು.

ದ್ವೇಷ ಸಾಧನೆ ಮಾಡುತ್ತಿರುವ ಕೇಂದ್ರದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಅವರ ಆಶಯಗಳಿಗೆ ಅನುಗುಣವಾಗಿ ರೂಪಿತಗೊಂಡಿದ್ದ ಯೋಜನೆಯಿಂದ ಗಾಂಧೀಜಿ ಅವರ ಹೆಸರು ಕೈಬಿಡುತ್ತಿರುವುದು ಖಂಡನೀಯ. ಕೂಡಲೇ ಮೊದಲಿನ ಹೆಸರಿನೊಂದಿಗೆ ಯೋಜನೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಯೋಜನೆ ಹೆಸರು ಬದಲಿಸಿರುವುದು ದೇಶದ‌ ದುರ್ದೈವ. ಗಾಂಧೀಜಿ ಅವರನ್ನು ನಾತುರಾಮ ಗೋಡ್ಸೆ ಗುಂಡು ಹೊಡೆದು ಕೊಂದಿದ್ದರು. ಗಾಂಧೀಜಿ ಅವರ ಹೆಸರನ್ನು ಬಿಡುವ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ಕೊಲೆ ಮಾಡಿದೆ ಎಂದು ಟೀಕಿಸಿದರು. 

ದೇಶದ ಬಡ ಜನರಿಗೆ ಉದ್ಯೋಗ ನೀಡುವುದಕ್ಕಾಗಿ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಯೋಜನೆ ಆರಂಭಿಸಿದ್ದರು. ಈಗ ಅದರಲ್ಲಿದ್ದ ಗಾಂಧೀಜಿ ಅವರ ಹೆಸರನ್ನು ತೆಗೆಯುವ ಮೂಲಕ ಬಿಜೆಪಿಯು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಷಯದಲ್ಲೂ ರಾಜಕೀಯ ಮಾಡುತ್ತಿದೆ. ಈ ವಿಷಯದಲ್ಲಿ ಕೋರ್ಟ್ ಛೀಮಾರಿ ಹಾಕಿದೆ. ಚುನಾವಣಾ ಆಯೋಗ, ಇಡಿ ಮೂಲಕ ಅಧಿಕಾರ ಹಿಡಿಯುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಲೇಬೇಕಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಬಿ. ಸೌದಾಗಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಹೆಸರು ಅಳಿಸಲು ಬಿಜೆಪಿ ಮುಂದಾಗಿದೆ. ಹಿಂದೂ–ಮುಸ್ಲಿಂ ನಡುವೆ ಜಗಳ ಹಚ್ಚಿ ಅಧಿಕಾರಕ್ಕೆ ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಎದುರಿಸಬೇಕಿದೆ ಎಂದು ಹೇಳಿದರು.

ಶಾಸಕ ಬಿ.ಬಿ. ಚಿಮ್ಮನಕಟ್ಟಿ ಮಾತನಾಡಿ, ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ಬಿಜೆಪಿ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ. ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದೆ. ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ವಿಷಯಗಳನ್ನು ಮುಂದೆ ಮಾಡುತ್ತಿದೆ ಎಂದು ಟೀಕಿಸಿದರು.

ಎಐಸಿಸಿ ಕಾರ್ಯದರ್ಶಿ ಪಳಿಯಪ್ಪನ್ ಮಾತನಾಡಿ, ಮನರೇಗಾ ಯೋಜನೆಗೆ ಪೂರ್ಣವಾಗಿ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತಿತ್ತು. ಈಗ ರಾಜ್ಯ ಸರ್ಕಾರ ಶೇ40ರಷ್ಟು ಹಣ ನೀಡುವಂತೆ ಬದಲಾಯಿಸಲಾಗಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸಂವಿಧಾನ ಬದಲಾವಣೆಗೆ ಯತ್ನಿಸುತ್ತಿದ್ದಾರೆ. ಮತ ಕಳವು ಮಾಡಿ ಅಧಿಕಾರಕ್ಕೆ ಬರುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಅಜಯಕುಮಾರ ಸರನಾಯಕ, ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಸಿದ್ದು ಕೊಣ್ಣೂರ, ನಾಗರಾಜ ಹದ್ಲಿ, ರಾಜು ಮನ್ನಿಕೇರಿ, ಚಂದ್ರಶೇಖರ ರಾಠೋಡ, ಶ್ರೀನಿವಾಸ ಬಳ್ಳಾರಿ, ದಯಾನಂದ ಪಾಟೀಲ, ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.