
ಮಹಾಲಿಂಗಪುರ: ಮಣ್ಣಿನಲ್ಲಿ ಆಲೂಗಡ್ಡೆ ಬೆಳೆಯುವುದನ್ನು ನೋಡಿದ್ದೇವೆ. ಆದರೆ, ಬಳ್ಳಿಯಲ್ಲಿ ಬಿಡುವ ಆಲೂಗಡ್ಡೆಯನ್ನು ನೋಡಿದ್ದೀರಾ?. ಪಟ್ಟಣದ ಹಣಮಂತ ರಾವಳ ಅವರು ಗಣೇಶ ನಗರದ ಗೋರಖನಾಥ ತಪೋವನದಲ್ಲಿ ಬಳ್ಳಿ ಆಲೂಗಡ್ಡೆ ಬೆಳೆದು ಗಮನಸೆಳೆದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಹಂಪಿ ಉತ್ಸವದಲ್ಲಿದ್ದ ಕೃಷಿ ಇಲಾಖೆ ಪ್ರದರ್ಶನ ಮಳಿಗೆಯಲ್ಲಿ ಬಳ್ಳಿ ಆಲೂಗಡ್ಡೆಯ ಒಂದು ಗಡ್ಡೆಯನ್ನು ತಂದಿದ್ದ ಹಣಮಂತ ಅವರು, ಮೇ ತಿಂಗಳಲ್ಲಿ ನಾಟಿ ಮಾಡಿದ್ದರು. ಈಗ ಬಳ್ಳಿಯಲ್ಲಿ ಅಂದಾಜು 25 ಕಾಯಿಗಳಾಗಿವೆ.
‘ಸಿಡಿಲು ಬಡಿದ ನಂತರವೇ ಮೊಳಕೆ ಬರುತ್ತದೆ ಎನ್ನುವ ಕಾರಣಕ್ಕೆ ಗಡ್ಡೆ ತಂದು ಹಾಗೆ ತೆಗೆದಿರಿಸಿ ಮೂರ್ನಾಲ್ಕು ತಿಂಗಳು ಕಾದು ಮೊಳಕೆ ಬಂದ ನಂತರ ನಾಟಿ ಮಾಡಿದ್ದೇನೆ. ಯಾವುದೇ ಔಷಧ ಸಿಂಪಡಿಸದೆ, ಸ್ವಲ್ಪ ನೀರಿನಲ್ಲಿಯೇ ಬಳ್ಳಿ ಆಲೂಗಡ್ಡೆ ಬೆಳೆದಿದ್ದೇನೆ. ಮೊಳಕೆಯೊಡೆದಿರುವ ಗಡ್ಡೆಯನ್ನು ನೆಟ್ಟು 15 ದಿನದ ನಂತರ ಬಳ್ಳಿ ಬೆಳೆಯಲು ಆರಂಭವಾಯಿತು. ಬಳ್ಳಿ ಹಬ್ಬಲು ಚಪ್ಪರ ಸೌಲಭ್ಯ ಕಲ್ಪಿಸಿದ್ದೇನೆ. ಒಂದೇ ಬಳ್ಳಿಯಿಂದ ಅಂದಾಜು 6 ಕೆ.ಜಿ. ವರೆಗೂ 25 ಕಾಯಿಗಳು ಬಂದಿವೆ’ ಎನ್ನುತ್ತಾರೆ ಹಣಮಂತ.
‘ಬೆಳೆಯ ಕುರಿತು ಕೃಷಿ ತಜ್ಞರಿಂದ ಹಾಗೂ ಅಂತರ್ಜಾಲ ತಾಣದಲ್ಲಿ ಮಾಹಿತಿ ಪಡೆದಿದ್ದೇನೆ. ಸದ್ಯ ಮನೆ ಬಳಕೆಗೆ ಕಾಯಿಗಳನ್ನು ತೆಗೆದಿರಿಸುತ್ತಿದ್ದೇನೆ. ಬಳ್ಳಿ ಆಲೂಗಡ್ಡೆಯಲ್ಲಿ ಉತ್ತಮ ಔಷಧ ಗುಣಗಳಿರುವ ಹಿನ್ನೆಲೆ ಆರೋಗ್ಯಕ್ಕೂ ಹೆಚ್ಚು ಉಪಕಾರಿಯಾಗಿದೆ. ರೈತರು ತಮ್ಮ ಹೊಲದಲ್ಲಿ ಇದನ್ನು ಬೆಳೆದು ಉತ್ತಮ ಲಾಭ ಗಳಿಸಬಹುದು’ ಎಂದು ಅವರು ಸಲಹೆ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.