ADVERTISEMENT

ಬಾಗಲಕೋಟೆ| ವಿಮುಕ್ತ ದೇವದಾಸಿಯರ ಸಮೀಕ್ಷೆ ಅಪೂರ್ಣ: ದಾಖಲೆಗಳನ್ನು ಹೊಂದಿಸಲು ಪರದಾಟ

ಬಸವರಾಜ ಹವಾಲ್ದಾರ
Published 31 ಅಕ್ಟೋಬರ್ 2025, 5:35 IST
Last Updated 31 ಅಕ್ಟೋಬರ್ 2025, 5:35 IST
   

ಬಾಗಲಕೋಟೆ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಿಂತಲೂ ಮೊದಲೇ ಆರಂಭವಾಗಿದ್ದ ವಿಮುಕ್ತ ದೇವದಾಸಿಯರ ಪುನರ್‌ ಸಮೀಕ್ಷೆಗೆ ನಿಗದಿಪಡಿಸಲಾಗಿದ್ದ ಅವಧಿಯು ಮುಗಿಯಲು ಸಮೀಪಿಸಿದ್ದರೂ ಇದುವರೆಗೂ ಶೇ 33.84ರಷ್ಟು ಮಾತ್ರವೇ ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಂಡಿದೆ.

2007–08ನೇ ಸಾಲಿನಲ್ಲಿ ಸಮೀಕ್ಷೆ ನಡೆದಾಗ ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಕೊಪ್ಪಳ ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ 46,600 ವಿಮುಕ್ತ ದೇವದಾಸಿಯರನ್ನು ಗುರುತಿಸಲಾಗಿತ್ತು.

ಈಗ ಸೆ.15ರಂದೇ ಸಮೀಕ್ಷೆ ಆರಂಭಿಸಲಾಗಿದ್ದು, 45 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಬೇಕಿದೆ. ಇಲ್ಲಿಯವರೆಗೆ 15,770 ಜನರ ಸಮೀಕ್ಷೆ ಪೂರ್ಣಗೊಂಡಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 7,827 ವಿಮುಕ್ತ ದೇವದಾಸಿಯರಿದ್ದು, ಇಲ್ಲಿಯವರೆಗೆ 1,800 ಜನರ ಸಮೀಕ್ಷೆ ಮಾಡಲಾಗಿದೆ.

ADVERTISEMENT

2007–08ರ ಸಮೀಕ್ಷೆ ಬಳಿಕ ಮತ್ತೆ ನಡೆದಿಲ್ಲ. ಈ ಅವಧಿಯಲ್ಲಿ ಸಾಕಷ್ಟು ಜನರು ಮೃತರಾಗಿದ್ದಾರೆ. ಹೀಗಾಗಿ ಅವರ ಸಂಖ್ಯೆ ಕಡಿಮೆ ಇದೆ. ಕೆಲವರು ಉ‌ದ್ಯೋಗ, ಇತರೆ ಕಾರಣಗಳಿಗಾಗಿ ವಲಸೆ ಹೋಗಿದ್ದಾರೆ. ಜಿಲ್ಲೆಯಲ್ಲಿ 2,935 ಮಂದಿ ಮೃತಪಟ್ಟಿದ್ದು, 236 ಜನ ವಲಸೆ ಹೋಗಿರುವ ಅಂದಾಜು ಇದೆ.  

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷೆದಾರರೇ ಮನೆ ಬಾಗಿಲಿಗೆ ಬಂದರೆ, ವಿಮುಕ್ತ ದೇವದಾಸಿಯರ ಸಮೀಕ್ಷೆಯಲ್ಲಿ ಸಮೀಕ್ಷೆಗೆ ಒಳಪಡಬೇಕಾದವರೆ ದಾಖಲೆಗಳ ಸಮೇತ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ತೆರಳಿ ಮಾಹಿತಿ ನೀಡಬೇಕಿದೆ.

ವಿಮುಕ್ತ ದೇವದಾಸಿಯರ ಗೋಪ್ಯತೆ ರಕ್ಷಿಸಲು ಈ ಕ್ರಮ ಅನುಸರಿಸಲಾಗುತ್ತಿದೆ. ಆದರೆ, ಪುನರ್ ಸಮೀಕ್ಷೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸದ ಕಾರಣ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಒಬ್ಬರಿಂದ ಒಬ್ಬರಿಗೆ ವಿಷಯ ಗೊತ್ತಾಗಿ ಬರಲಾರಂಭಿಸಿದ್ದಾರೆ.

ಆಧಾರ್‌ ಕಾರ್ಡ್, ಆಧಾರ್ ಕಾರ್ಡ್ ಲಿಂಕ್‌ ಇರುವ ಮೊಬೈಲ್‌, ವಂಶಾವಳಿ, ಶಾಲಾ ದಾಖಲಾತಿ, ಜಾತಿ ಪ್ರಮಾಣಪತ್ರ, ಮಕ್ಕಳ ಆಧಾರ್‌ ಕಾರ್ಡ್‌ ಅಂತಹ ದಾಖಲೆಗಳನ್ನು ನೀಡಬೇಕು. ಶಾಲಾ ದಾಖಲೆ, ಆಧಾರ್‌ ಕಾರ್ಡ್‌ನಲ್ಲಿ ಹೆಸರು ಭಿನ್ನವಾಗಿರುವ ಕಾರಣ ಸಮೀಕ್ಷೆಗೆ ಒಳಪಡಿಸುವುದು ಸವಾಲಾಗಿದೆ. 

ವಂಶಾವಳಿ ಪ್ರಮಾಣಪತ್ರ ಪಡೆಯಲು ತಿರುಗಾಡುತ್ತಿದ್ದಾರೆ. ಬಹುತೇಕರು ಅನಕ್ಷರಸ್ಥರಾಗಿದ್ದು, ಅಗತ್ಯ ದಾಖಲೆಗಳನ್ನು ಹೊಂದಿಸುವುದೇ ಹದಿನೈದು ದಿನಗಳಿಂದ ಕೆಲಸವಾಗಿದೆ. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೂ ಸಾಮಾಜಿಕ, ಶೈಕ್ಷಣಿಕ ಗಣತಿಯಲ್ಲಿ ತೊಡಗಿಸಿಕೊಂಡಿರುವುದರಿಂದ ವಿಮುಕ್ತ ದೇವದಾಸಿಯರ ಪುನರ್‌ ಸಮೀಕ್ಷೆಗೆ ಚುರುಕುದೊರೆತಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.