ADVERTISEMENT

ಮಠಾಧೀಶರು ರಾಜಕಾರಣಿಗಳ ಅಡಿಯಾಳಾಗಬೇಡಿ: ದಿಂಗಾಲೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 14:11 IST
Last Updated 26 ನವೆಂಬರ್ 2023, 14:11 IST
<div class="paragraphs"><p>ಕಲ್ಯಾಣ ಪರ್ವದಲ್ಲಿ&nbsp;ಶಿರಹಟ್ಟಿ-ಬಾಲೆಹೊಸೂರಿನ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು</p></div>

ಕಲ್ಯಾಣ ಪರ್ವದಲ್ಲಿ ಶಿರಹಟ್ಟಿ-ಬಾಲೆಹೊಸೂರಿನ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು

   

ಬಾಗಲಕೋಟೆ: ತಂದೆ-ತಾಯಿ, ಸಂಸಾರ ಹಾಗೂ ಸರ್ವಸ್ವವನ್ನೂ ತ್ಯಜ್ಯಸಿ ಸನ್ಯಾಸಿಯಾಗುವ ಮಠಾಧೀಶರು ಯಾರ ಅಡಿಯಾಳಾಗಿಬಾರದು. ಆದರೆ, ರಾಜ್ಯದಲ್ಲಿ ಕೆಲ ಮಠಾಧೀಶರು ರಾಜಕಾರಣಿಗಳ ಮನೆ ಕೆಲಸದಾಳುಗಳಿಗಿಂತಲೂ ಕಡೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಶಿರಹಟ್ಟಿ-ಬಾಲೆಹೊಸೂರಿನ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಟೀಕಿಸಿದರು.

ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಶಿರೂರಿನ ಸಿದ್ದಲಿಂಗ ಶಿವಯೋಗಿಗಳ ಜನ್ಮ ಶತಮಾನೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಲ್ಯಾಣ ಪರ್ವದಲ್ಲಿ ಮಾತನಾಡಿದ ಅವರು, ಮಠಾಧೀಶರು ಎಲ್ಲವನ್ನು ತ್ಯಜ್ಯಿಸಿರುತ್ತಾರೆ. ಆದರೂ ರಾಜಕಾರಣಿಗಳ ಮುಲಾಜಿಗೆ ಒಳಗಾಗಿ ಅವರು ಹೇಳಿದಂತೆ ಕೇಳುವುದನ್ನು ನೋಡಿದರೆ ಅವಮಾನ ಎನಿಸುತ್ತದೆ ಎಂದು ಹೇಳಿದರು.

ADVERTISEMENT

ಮಠಾಧೀಶರು ಕಾರ್ಯಕ್ರಮಗಳನ್ನು ಮಾಡುವಾಗ ಸ್ಥಳೀಯ ರಾಜಕಾರಣಿಗಳ ಇಚ್ಛೆಯಂತೆ ಆಗಬೇಕು. ಒಬ್ಬರು ಬಂದರೆ, ಮತ್ತೊಬ್ಬರು ಬರುವುದಿಲ್ಲ. ಮಠಾಧೀಶರ ಪಾಡು ಹೇಳಲಾಗದು. ಶ್ರೀಮಂತನ ಮನೆ ಬಾಗಿಲಿಗೆ ಹೋಗಿ ಅವಮಾನಕ್ಕೆ ಒಳಗಾಗುವುದಕ್ಕಿಂತ, ಬಡವನ ಮನೆಯಲ್ಲಿ ಸನ್ಮಾನಕ್ಕೆ ಒಳಗಾಗಬೇಕು. ಬಸವಣ್ಣನವರು ಇದನ್ನೇ ಹೇಳಿದ್ದಾರೆ. ಅದನ್ನು ಪಾಲಿಸುವ ಕೆಲಸ ಆಗಬೇಕು ಎಂದರು.

ಫಕೀರೇಶ್ವರ ಮಠವು ಸೌಹಾರ್ದದ ಪ್ರತೀಕವಾಗಿದೆ. ದೊಡ್ಡ ಮಠ, ದೊಡ್ಡ ಮಠಾಧೀಶರನ್ನು ಬೆನ್ನು ಹತ್ತುವುದನ್ನು ಭಕ್ತರು ಬಿಟ್ಟು, ಕೆಲಸ ಮಾಡುವ ಮಠಾಧೀಶರನ್ನು ಬೆನ್ನು ಹತ್ತಬೇಕು. ಕೆಲ ಸ್ವಾಮೀಜಿಗಳಿಗೆ ಭಕ್ತರಿಂದಲೇ ಬಿಪಿ, ಮಧುಮೇಹದಂತಹ ಕಾಯಿಲೆ ಬರುವಂತಾಗಿದೆ. ಯುವ ಮಠಾಧೀಶರನ್ನು ಉತ್ತೇಜಿಸಿದರೆ, ಸಮಾಜಕ್ಕಾಗಿ ದುಡಿಯುತ್ತಾರೆ ಎಂದು ಹೇಳಿದರು.

ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿನ ಮಠಗಳು ಶಿಕ್ಷಣ-ಸಂಸ್ಕೃತಿ ಬೆಳೆಸುವ ಕೆಲಸ ಮಾಡಿವೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದರು. ಕಾರ್ಯಕ್ರಮದಲ್ಲಿ 63 ಮಠಾಧೀಶರಿಗೆ ದಂಪತಿ ಪಾದಪೂಜೆ ನೆರವೇರಿಸಿದರು.

ಮನ್ನಿಕಟ್ಟಿಯ ಶಿವಕುಮಾರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ, ಶಾಸಕ ಎಚ್.ವೈ.ಮೇಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಲ್ಲಿಕಾರ್ಜುನ ಚರಂತಿಮಠ, ಜಿ.ಎನ್.ಪಾಟೀಲ, ವೀಣಾ ಕಾಶಪ್ಪನವರ, ರಕ್ಷಿತಾ ಈಟಿ, ಅಶೋಕ ಲಿಂಬಾವಳಿ, ಅಶೋಕ ಲಾಗಲೋಟಿ, ರಾಮಕಿಶನ್ ಮುಂದಡಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.