ಬಾಗಲಕೋಟೆ: ದೇಹ ನಶ್ವರ ಸೇವೆ ಅಮರ. ಕಾಯ ಅಳಿವುದು ಕಾರ್ಯ ಉಳಿವುದು. ಆದಾಯಕ್ಕಾಗಿ ಬದುಕಬೇಡಿ, ಆದರ್ಶಕ್ಕಾಗಿ ಬದುಕಿ ಎಂದು ಶಿವಮೊಗ್ಗ ನಾರಾಯಣ ಗುರು ಮಹಾಸಂಸ್ಥಾನ ಈಡಿಗರ ಗುರುಪೀಠದ ರೇಣುಕಾನಂದ ಸ್ವಾಮೀಜಿ ಹೇಳಿದರು.
ನಗರದ ಸಿದ್ಧರಾಮೇಶ್ವರ ಮಹಾಸಂಸ್ಥಾನ ಶರಣಬಸವ ಆಶ್ರಮದಲ್ಲಿ ಶನಿವಾರ ನಡೆದ ಶ್ರಾವಣ ಪ್ರವಚನದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ವಚನಗಳಲ್ಲಿ ಶರಣ ಜೀವನ ದರ್ಶನವಾಗುತ್ತದೆ. ಗುರುಬೋಧೆಯಿಂದ ಜೀವನಪಥ ಸನ್ಮಾರ್ಗದ ಕಡೆ ಹೋಗುತ್ತದೆ. ಜೀವನ ಬಂಧ ಕಳಚಲು ಭಗವಂತನ ಅನುಬಂಧ ಬೇಕಾಗುತ್ತದೆ. ಶಿವ ಪಥವನ್ನರಿಯಲು ಗುರು ಪಥವೇ ಮೊದಲಾಗಿದೆ ಎಂದರು.
ಧರ್ಮ ಪಥ ತಪ್ಪಿದಾಗ ಜೀವನದ ಶಾಂತಿ, ನೆಮ್ಮದಿ ಕದಡುತ್ತದೆ. ಹಣದ ಹಿಂದೆ ಸಾಗಿ ಸತ್ಯ, ಶುದ್ಧ ಕಾಯಕ ಧರ್ಮ ಮರೆತಿದ್ದೇವೆ. ಶಿವಶರಣ ಜೀವನ ಸ್ಮರಣೆ ಮಾಡುವ ಮೂಲಕ ನಾವೂ ಶರಣರಾಗಬೇಕು. ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು. ತನ್ಮೂಲಕ ನೈಜವಾದ ಶ್ರೇಷ್ಠ ವಿಕಾಸ ಕಾಣಬಹುದು ಎಂದು ತಿಳಿಸಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ವಿಭೂತಿ ಧಾರಣೆಯಿಂದ ದುಷ್ಟಶಕ್ತಿಯ ಕಾಟದಿಂದ ತಪ್ಪಿಸಿಕೊಳ್ಳಬಹುದು. ಪಾಪ ಕಳೆದು ಹೋಗುತ್ತದೆ. ವಿಭೂತಿ ಧಾರಣ ಮಾಡಿದವರನ್ನು ನೋಡಿದರೆ ಒಳ್ಳೆಯದಾಗುತ್ತದೆ. ವಿಭೂತಿಗೆ ರೋಗ ನಿವಾರಣ ಶಕ್ತಿ ಇದೆ.
ವಿಭೂತಿ ಧಾರಣದಿಂದ ಶರೀರ ಮತ್ತು ಮನಸ್ಸಿನ ಮೇಲೆ ಪ್ರಭಾವ ಆಗುತ್ತದೆ ಎಂದರು.
ವಿಭೂತಿ ಪೂಜಾ ಸಾಧನೆಯಾಗದೇ, ಭಕ್ತಿಗೆ, ಮುಕ್ತಿಗೆ ಸಾಧನವಾಗುತ್ತದೆ. ದುರ್ಗುಣ ಸುಟ್ಟು ಜ್ಞಾನ ನೇತ್ರ ಸಾಧಿಸುವುದು ಗೌರವ ಭಾವನೆ ತ೦ದುಕೊಡುತ್ತದೆ. ಅರಿಷಡ್ವರ್ಗಗಳನ್ನು ಸುಟ್ಟು ದೈವತ್ವವನ್ನು ತಂದುಕೊಡುತ್ತದೆ ಎಂದು ಹೇಳಿದರು.
ಕೊರಟಗೆರೆ ಮಹಾಲಿಂಗ ಶ್ರೀಗಳು ಉಪಸ್ಥಿತರಿದ್ದರು. ರಾಚಯ್ಯ ಶಾಸ್ತ್ರಿಗಳು ಪ್ರವಚನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.