ADVERTISEMENT

ಇಳಕಲ್ | ವಾಡಿಕೆಗಿಂತ ದುಪ್ಪಟ್ಟು ಮಳೆ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 2:28 IST
Last Updated 31 ಜುಲೈ 2025, 2:28 IST
ಇಳಕಲ್ ತಾಲ್ಲೂಕಿನ ಹಿರೇ ಓತಗೇರಿ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ ಹಾಳಾದ ತೊಗರಿ ಬೆಳೆ
ಇಳಕಲ್ ತಾಲ್ಲೂಕಿನ ಹಿರೇ ಓತಗೇರಿ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ ಹಾಳಾದ ತೊಗರಿ ಬೆಳೆ   

ಇಳಕಲ್: ತಾಲ್ಲೂಕಿನ ವಿವಿಧೆಡೆ ಜುಲೈ 22ರಿಂದ 28ರವರೆಗಿನ ವಾರದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ತೊಗರಿ, ಹೆಸರು, ಸೂರ್ಯಕಾಂತಿ ಬೆಳೆಯಲ್ಲಿ ನೀರು ನಿಂತು ಶೀತ ಹೆಚ್ಚಾಗಿ ಬೆಳೆ ಹಾಳಾಗಿದೆ.

ಇಳಕಲ್ ಹೋಬಳಿಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಯಂತೆ 5.8 ಸೆಂ.ಮೀ. ಮಳೆಯಾಗಬೇಕು. ಆದರೆ 13.2 ಸೆಂ.ಮೀ. ಮಳೆಯಾಗಿದೆ.

ತಾಲ್ಲೂಕಿನಲ್ಲಿ 16 ಸಾವಿರ ಹೆಕ್ಟೇರ್ ತೊಗರಿ, 947 ಹೆಕ್ಟೇರ್ ಹೆಸರು, 894 ಹೆಕ್ಟೇರ್ ಸೂರ್ಯಕಾಂತಿ, 2,435 ಹೆಕ್ಟೇರ್ ಗೋವಿನಜೋಳ, 1,244 ಹೆಕ್ಟೇರ್ ಹತ್ತಿ, ಕಬ್ಬು ಬಿತ್ತನೆಯಾಗಿದೆ.

ADVERTISEMENT

‘ಉತ್ತಮ ಬೆಳೆ ನಿರೀಕ್ಷಿಸಿದ್ದ ರೈತರಿಗೆ ನಿರಾಸೆಯಾಗಿದೆ. ಕೃಷಿ ಇಲಾಖೆ ಹಾಗೂ ಬೆಳೆ ವಿಮಾ ಕಂಪನಿಗಳು ರೈತರ ನೆರವಿಗೆ ಬರಬೇಕು’ ಎಂದು ಇಲ್ಲಿಯ ಕಿಲ್ಲಾದ ರೈತ ಬಸನಗೌಡ ಪಾಟೀಲ ಮನವಿ ಮಾಡಿದ್ದಾರೆ.

‘ಕೃಷಿ ಇಲಾಖೆ ಅಧಿಕಾರಿಗಳು ಹೊಲಕ್ಕೆ ತೆರಳಿ ಖುದ್ದಾಗಿ ಬೆಳೆ ಹಾನಿ ವೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಬೆಳೆ ಹಾನಿಗೆ ಒಂದಿಷ್ಟು ಪರಿಹಾರ ಸಿಕ್ಕರೂ ರೈತರಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹಿರೇಓತಗೇರಿ ಗ್ರಾಮದ ಶರಣಗೌಡ ಕಂದಕೂರ ಆಗ್ರಹಿಸಿದರು.

‘ಪ್ರತಿ ಹಂಗಾಮಿನಲ್ಲೂ ಬೆಳೆ ಕೊಯ್ಲು ಆರಂಭವಾದ ತಕ್ಷಣವೇ ಖರೀದಿ ಕೇಂದ್ರ ತೆರೆಯಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಮಾರುಕಟ್ಟೆ ಬೆಲೆ ಕಡಿಮೆ ಇದ್ದರೆ ಸರ್ಕಾರ ಖರೀದಿ ಮಾಡಬೇಕು. ರೈತರು ತಮ್ಮ ಉತ್ಪನ್ನವನ್ನು ಅಗ್ಗದ ದರದಲ್ಲಿ ಮಾರಿದ ನಂತರ ಖರೀದಿ ಕೇಂದ್ರ ತೆರೆದರೆ ಮಧ್ಯವರ್ತಿಗಳಿಗೆ ಲಾಭವಾಗುತ್ತದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು' ಎಂದು ಬಸನಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.