ADVERTISEMENT

ಬಾಗಲಕೋಟೆ: ಜಿಲ್ಲೆಯಲ್ಲಿ ಅಬಕಾರಿ ಸನ್ನದು ಹರಾಜು ಆರಂಭ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:49 IST
Last Updated 26 ಡಿಸೆಂಬರ್ 2025, 6:49 IST
   

ಬಾಗಲಕೋಟೆ: ಜಿಲ್ಲೆ ವ್ಯಾಪ್ತಿಯಲ್ಲಿ ಹಂಚಿಕೆಯಾಗದ ಮತ್ತು ಸ್ಥಗಿತಗೊಂಡಿರುವ ಎಂಟು ಮದ್ಯದಂಗಡಿ ಸನ್ನದುಗಳ ಹರಾಜು ಪ್ರಕ್ರಿಯೆಗೆ ಅಬಕಾರಿ ಇಲಾಖೆ ಚಾಲನೆ ನೀಡಿದೆ ಎಂದು ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನ್ನದುಗಳನ್ನು ಪಾರದರ್ಶಕ ಇ–ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಬಾದಾಮಿ, ಹುನಗುಂದದಲ್ಲಿ ಎರಡು, ಬಾಗಲಕೋಟೆ, ಬೀಳಗಿ, ಜಮಖಂಡಿ, ಮುಧೋಳದಲ್ಲಿ ತಲಾ ಒಂದು ಸನ್ನದುಗಳಿವೆ. ಏಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಒಂದು ಎಸ್‌ಟಿಗೆ ಮೀಸಲಾಗಿದೆ ಎಂದರು.

ಯಾವುದೇ ವ್ಯಕ್ತಿ, ಏಕವ್ಯಕ್ತಿ ಮಾಲೀಕತ್ವದ ಸಂಸ್ಥೆ, ಟ್ರಸ್ಟ್‌, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಸಂಸ್ಥೆಗಳು ಇ–ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಇ–ಹರಾಜು ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರದ ಎಂಎಸ್‌ಟಿಸಿ ಲಿಮಿಟೆಡ್‌ನ ಇ–ಪೋರ್ಟಲ್‌ನಲ್ಲಿ ನಡೆಸಲಾಗುತ್ತದೆ. ಹರಾಜಿನಲ್ಲಿ ಭಾಗವಹಿಸಲು ಬಯಸುವವರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಪ್ರತಿ ನೋಂದಣಿಗೆ ₹1,000 ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಅರ್ಜಿಗೆ ₹50 ಸಾವಿರ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕು. ಈ ಹಣವನ್ನು ವಾಪಸ್‌ ಮಾಡಲಾಗುವುದಿಲ್ಲ. ಜತೆಗೆ ಪ್ರತಿ ಸನ್ನದಿಗೆ ಸಲ್ಲಿಸುವ ಅರ್ಜಿಯ ಜತೆಗೆ ಮೂಲ ಬೆಲೆಯ ಶೇ 2ರಷ್ಟು ಇಎಂಡಿ ಇರಿಸಬೇಕಾಗುತ್ತದೆ ಎಂದರು.

ಹರಾಜು ಬಿಡ್ಡಿಂಗ್‌ನಲ್ಲಿ ಸರ್ವರ್‌ ಡೌನ್ ಆದರೆ, ಮತ್ತೆ ಬಿಡ್ ಸಲ್ಲಿಸಲು ಅವಕಾಶ ನೀಡಲಾಗುವುದು. ಸರ್ವರ್ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರ್ಚ್ 2025ರಿಂದ ಐದು ವರ್ಷಗಳ ಅವಧಿಗೆ ನೀಡಲಾಗುತ್ತದೆ ಎಂದು ಹೇಳಿದರು.

ಅಬಕಾರಿ ಇಲಾಖೆ ಪ್ರಭಾರಿ ಉಪಆಯುಕ್ತ ತಿಪ್ಪೇಸ್ವಾಮಿ, ಸೂಪರಿಟೆಂಡೆಂಟ್‌ ಹನುಮಂತಪ್ಪ ಭಜಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.