ADVERTISEMENT

ಬಾಗಲಕೋಟೆ | ರೈತರ ಆದಾಯ ದ್ವಿಗುಣಕ್ಕೆ ಯತ್ನ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:32 IST
Last Updated 13 ಸೆಪ್ಟೆಂಬರ್ 2025, 6:32 IST
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಬೆಳೆದ ಸಿಹಿ ಜೋಳವನ್ನು ಮಾಜಿ ಸಚಿವ ಮುರುಗೇಶ ನಿರಾಣಿ, ಸೀಮಾ ಪರೋಹ, ಎನ್‌.ವಿ. ಪಡಿಯಾರ್, ಪರಮೇಶ್ವರ ‍ಪಾಟೀಲ ವೀಕ್ಷಿಸಿದರು
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಬೆಳೆದ ಸಿಹಿ ಜೋಳವನ್ನು ಮಾಜಿ ಸಚಿವ ಮುರುಗೇಶ ನಿರಾಣಿ, ಸೀಮಾ ಪರೋಹ, ಎನ್‌.ವಿ. ಪಡಿಯಾರ್, ಪರಮೇಶ್ವರ ‍ಪಾಟೀಲ ವೀಕ್ಷಿಸಿದರು   

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ನಿರಾಣಿ ಸಮೂಹ ಸಂಸ್ಥೆ ಕೆಲಸ ಮಾಡುತ್ತಿದ್ದು, ಎಥೆನಾಲ್‌ ಉತ್ಪಾದನೆಗೆ ಬೇಕಾಗುವ ಸಿಹಿ ಜೋಳ (ಸ್ವೀಟ್‌ ಸೋರ್ಗಮ್)ವನ್ನು 500 ಎಕರೆಯಲ್ಲಿ ಬೆಳೆಸಲಾಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಎಥೆನಾಲ್‌ ಉತ್ಪಾದನೆಗೆ ಸಿಹಿ ಜೋಳ ಸೂಕ್ತ ಬೆಳೆಯಾಗಿದ್ದು, ಅದನ್ನು ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಕಡಿಮೆ ನೀರಿನಲ್ಲಿ, 100 ದಿನಗಳಲ್ಲಿ ಬೆಳೆಯಬಹುದಾದ ಬೆಳೆಯಾಗಿದೆ. ಪ್ರತಿ ಎಕರೆಗೆ 25 ರಿಂದ 30 ಟನ್‌ ಉತ್ಪಾದನೆ ನಿರೀಕ್ಷೆಯಿದ್ದು, ಟನ್‌ಗೆ ₹3,350 ನೀಡಲಾಗುತ್ತಿದೆ ಎಂದರು.

ಹಿಂದೆ ಇದನ್ನು ಬೆಳೆಯಲಾಗುತ್ತಿತ್ತು. ಈಗ ಮತ್ತೆ ಅದನ್ನು ಹೊಸ ತಳಿಯೊಂದಿಗೆ ಬೆಳೆಸುವ ಪ್ರಯೋಗ ನಡೆದಿದೆ. ಈಗಾಗಲೇ ಕಟಾವಿಗೆ ಬಂದಿದೆ. ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯಬಹುದಾಗಿದೆ. ಉತ್ಪಾದನಾ ವೆಚ್ಚ ಕಡಿಮೆಯಾಗಲಿದ್ದು, ಆದಾಯ ಹೆಚ್ಚಳವಾಗಲಿದೆ ಎಂದು ಹೇಳಿದರು.

ADVERTISEMENT

ಸಿಹಿ ಜೋಳ ಎಥೆನಾಲ್‌ ಅನ್ನು ಪೆಟ್ರೋಲ್‌ಗೆ ಮಿಶ್ರಣವಾಗಿ ಬಳಸಲಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಬಗ್ಯಾಸ್‌ ಅನ್ನು ವಿದ್ಯುತ್ ಉತ್ಪಾದನೆ, ಉಳಿದ ಸ್ಲರಿಯನ್ನು ಜೈವಿಕ ಗೊಬ್ಬರಕ್ಕೆ ಬಳಸಬಹುದು ಎಂದರು.

ಎಥೆನಾಲ್ ಉತ್ಪಾದನೆಗೆ ಕಬ್ಬಿನೊಂದಿಗೆ ಮೆಕ್ಕೆಜೋಳವನ್ನೂ ಬಳಸಲಾಗುತ್ತಿದೆ. ಹೊಸ ತಳಿ ಕಬ್ಬು ನೀಡಿ, ರೈತರ ಆದಾಯ ಹೆಚ್ಚಿಸುವ ಕಾರ್ಯ ನಡೆದಿದೆ ಎಂದರು.

ಕಾನ್ಪುರ್ ನ್ಯಾಷನಲ್‌ ಶುಗರ್‌ ಇನ್‌ಸ್ಟಿಟ್ಯೂಟ್ ರಾಷ್ಟ್ರೀಯ ನಿರ್ದೇಶಕರಾದ ಸೀಮಾ ಪರೋಹ ಮಾತನಾಡಿ, ಇದೊಂದು ಪರಿಸರ ಸ್ನೇಹಿಯಾಗಿದ್ದು, ಮುಂದಿನ ದಿನಗಳಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡಲಿದೆ. ಬೆಳೆಯುವ ಬಗೆ, ಉತ್ಪಾದನೆ, ಉತ್ಪಾದನಾ ವೆಚ್ಚ, ಅದರಿಂದ ಬರುವ ಆದಾಯ ಮುಂತಾದ ವಿಷಯಗಳ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಮ್ಯಾನೇಜರ್ ಪರಮೇಶ್ವರ ಪಾಟೀಲ ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಈ ಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆಯಲಾಗುತ್ತಿದ್ದು, ಅದಕ್ಕೆ ಅಗತ್ಯ ಧನಸಹಾಯವನ್ನು ಬಿಪಿಸಿಎಲ್‌ ಮಾಡಿದೆ ಎಂದರು.

ನಿರಾಣಿ ಶುಗರ್ಸ್‌ ಲಿಮಿಟೆಡ್‌ನ ಎನ್‌.ವಿ. ಪಡಿಯಾರ್‌ ಮಾತನಾಡಿ, ಬೇರೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರೆ ನಿರಾಣಿ ಅವರು ಸಾಕಷ್ಟು ಆದಾಯ ಗಳಿಸಬಹುದಿತ್ತು. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸದಾ ಚಿಂತನೆ ಮಾಡುತ್ತಿರುತ್ತಾರೆ ಎಂದು ಹೇಳಿದರು.

ಅಡ್ವಂಟ್ ಸೀಡ್ಸ್ ಪ್ರೈವೇಟ್ ಲಿಮಿಟೆಡ್‌ನ ವಿಲಾಸ ಟೋಣಪಿ, ಮಹೇಂದ್ರ ‍ಪಾಟೀಲ, ರಮೇಶ ಪಾಟೀಲ ಇದ್ದರು.

ಎಥೆನಾಲ್‌ ಪೆಟ್ರೋಲ್‌ಗೆ ಮಿಶ್ರಣ ಕೇಂದ್ರಕ್ಕೆ ವರದಿ ಸಲ್ಲಿಕೆ ಪರಿಸರ ಮಾಲಿನ್ಯ ಕಡಿಮೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.