
ಹುನಗುಂದ: ಮೂರು ಕೊಠಡಿಗಳಲ್ಲಿ ನೂರು ಬಾಲಕಿಯರ ವಾಸ, ಒಂದು ಕೊಠಡಿಯಲ್ಲಿ ಮಾತ್ರ ಸ್ನಾನ ಗೃಹ, ಮೂರು ಶೌಚಾಲಯಗಳು ಇವುಗಳಲ್ಲಿಯೇ ನಿತ್ಯ ಕರ್ಮಗಳನ್ನು ಮುಗಿಸಬೇಕಾದ ಶೋಚನೀಯ ಸ್ಥಿತಿ.
ತಾಲ್ಲೂಕಿನ ನಾಗೂರ ಗ್ರಾಮದಲ್ಲಿ 6 ರಿಂದ 10ನೇ ತರಗತಿ 100 ವಿದ್ಯಾರ್ಥಿನಿಯರ ಕರ್ನಾಟಕ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಯ ಸ್ಥಿತಿ ಇದು. ಕಳೆದ 14 ವರ್ಷಗಳಿಂದಲೂ ಈ ದುಸ್ಥಿತಿ ಮುಂದುವರೆದಿದೆ.
2011 ರಲ್ಲಿ ಗ್ರಾಮದ ಎಂಪಿಎಸ್ ಶಾಲೆಯಲ್ಲಿ ವಸತಿ ನಿಲಯ ಆರಂಭವಾಯಿತು. ನಂತರ 2017 ರಿಂದ ಗ್ರಾಮದಲ್ಲಿ ಖಾಲಿಯಿದ್ದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ವಸತಿ ನಿಲಯ ಮುಂದುವರೆದಿದೆ. ಆದರೆ ಈವರೆಗೂ ಸ್ವಂತ ಕಟ್ಟಡ ಹೊಂದಿಲ್ಲ.
ಬಾಲಕಿಯರು ಮಲಗಲು ಇರುವುದು ಮೂರು ಕೊಠಡಿಗಳು ಮಾತ್ರ. ಅವುಗಳಲ್ಲಿ ಒಂದೊಂದು ಕೊಠಡಿಯಲ್ಲಿ 30 ರಿಂದ 35 ಬಾಲಕಿಯರು ನೆಲದ ಹಾಸಿನಲ್ಲಿ ಮಲಗಬೇಕಾಗಿದೆ. ಅದು ಇಕ್ಕಟ್ಟಾದ ಜಾಗ. ಕೊಠಡಿ ಒಳಭಾಗದ ಸುತ್ತಲೂ ಟ್ರಂಕ್ ಗಳನ್ನಿಡಲಾಗಿದೆ. ಅಲ್ಲಿಯೇ ಬಟ್ಟೆಗಳನ್ನು ಇಡಲಾಗಿದೆ. ಪ್ರತಿ ಕೊಠಡಿಯ ಮೂಲೆಯಲ್ಲಿ ಬಾಲಕಿಯರಿಗೆ ಮೀಸಲಾಗಿರುವ ಬೆಡ್‌ಶೀಟ್‌ಗಳಿದ್ದು, ಒಂದರ ಮೇಲೊಂದು ಜೋಡಿಸಿ ಇಡಲಾಗಿದೆ. ಬೆಡ್‌ಶೀಟ್‌ಗಳನ್ನು ಹಾಸಿದರೆ ಎಲ್ಲರಿಗೂ ಮಲಗಲು ಜಾಗದ ಕೊರತೆ ಎದುರಾಗುತ್ತದೆ. ಹೀಗಾಗಿ ಬೆಡ್‌ಶೀಟ್‌ಗಳು ಇದ್ದೂ ಇಲ್ಲದಂತಾಗಿವೆ. ಸಾಲಾಗಿ ಹೊಂದಿಕೊಂಡು ಮಲಗಿದರೂ ಜಾಗ ಸಾಕಾಗುವುದಿಲ್ಲ. ಹೀಗಾಗಿ ಬಾಲಕಿಯರಿಗೆ ನಿತ್ಯ ನರಕಯಾತನೆ ಅನುಭವಿಸುವುದು ಮಾತ್ರ ತಪ್ಪಿಲ್ಲ.
ಶೌಚಾಲಯಕ್ಕೆ ಬಯಲೇ ಗತಿ: ವಸತಿ ನಿಲಯದಲ್ಲಿರುವ ನೂರು ಬಾಲಕಿಯರಿಗೆ ಹಾಗೂ ಸಿಬ್ಬಂದಿ ಬಳಕೆಗೆ ಕೇವಲ ಮೂರು ಶೌಚಾಲಯ ಮಾತ್ರ ಇವೆ. ಹೀಗಾಗಿ ವಿಧಿಯಿಲ್ಲದೆ ಬಾಲಕಿಯರು ಬಯಲು ಬಹಿರ್ದೇಸೆಗೆ ಹೋಗಬೇಕಾದ ದುಸ್ಥಿತಿ ಬಂದೊದಗಿದೆ.
ಒಂದು ಸ್ನಾನ ಗೃಹ: ವಸತಿ ನಿಲಯದಲ್ಲಿರುವ ನೂರು ಬಾಲಕಿಯರಿಗೆ ಒಂದೇ ಒಂದು ಸ್ನಾನ ಗೃಹ ಇದೆ. ಅದರೊಂದಿಗೆ ಶೌಚಾಲಯದ ಮುಂಭಾಗವಿರುವ ಖಾಲಿ ಜಾಗದಲ್ಲಿ ಸ್ನಾನ ಮಾಡಬೇಕಾಗಿದೆ. ಹೀಗಾಗಿ ಬಾಲಕಿಯರು ನಸುಕಿನ ಜಾವ ಬೇಗ ಎದ್ದು ನಾ ಮುಂದು ತಾ ಮುಂದು ಎಂದು ಸ್ನಾನ ಮಾಡಬೇಕಾದ ದಯನೀಯ ಸ್ಥಿತಿ ಇಲ್ಲಿದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಬಾಲಕಿಯರ ಗೋಳು ಕೇಳೋರು ಯಾರೂ ಇಲ್ಲದಂತಾಗಿದೆ. ವಸತಿ ನಿಲಯಕ್ಕೆ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ ಜೊತೆಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.
ವಸತಿ ನಿಲಯದಲ್ಲಿ ಶೌಚಾಲಯ, ಸ್ನಾನ ಗೃಹ ಕೊಠಡಿಗಳ ಸಮಸ್ಯೆ ಜೊತೆಗೆ ಮಲಗಲು ಜಾಗದ ಕೊರತೆ ಇದೆ. ಸಂಬಂಧಪಟ್ಟವರು ಆದಷ್ಟು ಬೇಗ ಸೌಲಭ್ಯಗಳನ್ನು ಕಲ್ಪಿಸಿ ಅನುಕೂಲ ಮಾಡಿಕೊಡಬೇಕು.–ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿನಿಯರು
ವಸತಿ ನಿಲಯದಲ್ಲಿ ಜಾಗದ ಕೊರತೆಯಿದ್ದು, ಗ್ರಾಮಸ್ಥರು ಈಗಾಗಲೇ 33 ಗುಂಟೆ ಜಾಗ ಕೊಟ್ಟಿದ್ದಾರೆ. ಸ್ವಂತ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.–ಎ ಎಂ. ಬಡಿಗೇರ ಮುಖ್ಯ ಶಿಕ್ಷಕಿ, ಕರ್ನಾಟಕ ಕಸ್ತೂರಿ ಬಾ ಗಾಂಧಿ ವಸತಿ ನಿಲಯ ನಾಗೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.