ರಬಕವಿ ಬನಹಟ್ಟಿ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕಿಂತ ಮುಂಚಿತವಾಗಿ ಚರ್ಚೆ ಮಾಡಿ ಮೀಸಲಾತಿ ನೀಡುವುದಕ್ಕೆ ನಿರ್ಣಯ ಮಾಡಬೇಕು. ಇಲ್ಲದಿದ್ದರೆ ಸುವರ್ಣ ಸೌಧದ ಅಂಗಳದಲ್ಲಿ ಇಷ‍್ಠಲಿಂಗ ಪೂಜೆಯೊಂದಿಗೆ ಹೋರಾಟ ಮಾಡಲಾಗುವುದು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ 2 ಎ ಮೀಸಲಾತಿಗಾಗಿ ಭಾನುವಾರ ಇಷ್ಠಲಿಂಗ ಪೂಜೆಯನ್ನು ನೆರವೇರಿಸುವುದರ ಮೂಲಕ 6 ನೇ ಹಂತದ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ಮೋದಿಯವರ ಮಧ್ಯಸ್ಥಿಕೆಯಲ್ಲಿ 2 ಡಿ ಮೀಸಲಾತಿಯನ್ನು ನೀಡಲಾಗಿತ್ತು. ಆದರೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಯಾವುದೇ ಮೀಸಲಾತಿ ಅನುಷ್ಠಾನಕ್ಕೆ ಬಂದಿಲ್ಲ. ಈಗಾಗಲೇ ಏಳು ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಇಷ್ಠಲಿಂಗ ಪೂಜೆಯ ಮೂಲಕ ಹೋರಾಟವನ್ನು ಮಾಡಲಾಗಿದೆ. ಲೋಕಸಭೆಯ ಚುನಾವಣೆಗಿಂತ ಮುಂಚಿತವಾಗಿ 2 ಎ ಮೀಸಲಾತಿಯನ್ನು ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
‘ಮಕ್ಕಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಉದ್ಯೋಗದಲ್ಲಿ ಅಭಿವೃದ್ದಿ ಹೊಂದಲು ಮೀಸಲಾತಿ ಅಗತ್ಯವಾಗಿದೆ. ಮೀಸಲಾತಿ ಹೋರಾಟದಲ್ಲಿ ಯಾವುದೆ ಸ್ವಾರ್ಥವಿಲ್ಲ. ನಮ್ಮ ಸಮಾಜದ ಮುಂದಿನ ಪೀಳಿಗೆಯ ಉದ್ಧಾರಕ್ಕಾಗಿ ಮೀಸಲಾತಿ ಅವಶ್ಯವಾಗಿದೆ. ಹೋರಾಟ ಮಾಡದ ಹೊರತು ನಮಗೆ ನ್ಯಾಯ ದೊರೆಯುವುದಿಲ್ಲ. ಆದ್ದರಿಂದ ಈ ಹೋರಾಟದಲ್ಲಿ ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಸ್ವಾರ್ಥವನ್ನು ಬದಿಗಿಟ್ಟು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು‘ ಎಂದು ಕರೆ ನೀಡಿದರು.
ರಾಜ್ಯ ಹೆದ್ದಾರಿ ಸಂಚಾರವನ್ನು ಅರ್ಧ ಗಂಟೆಗಳ ಕಾಲ ತಡೆದು ಇಷ್ಠಲಿಂಗ ಪೂಜೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಕಂಚಿನ ಮೂರ್ತಿಯ ಪ್ರತಿಷ್ಠಾಪನಾ ಸ್ಥಳದ ಭೂಮಿಪೂಜೆಯನ್ನು ನೆರವೇರಿಸಲಾಯಿತು.
ಶಾಸಕ ಸಿದ್ದು ಸವದಿ, ಶ್ರೀಮಂತ ಇಂಡಿ, ಶ್ರೀಶೈಲ ದಲಾಲ, ಲಕ್ಕಪ್ಪ ಪಾಟೀಲ, ಸಂಗಮೇಶ ಪಾಟೀಲ, ಈಶ್ವರ ಬಿರಾದಾರಪಾಟೀಲ, ಗೌರಿ ಮಿಳ್ಳಿ, ಪವಿತ್ರಾ ತುಕ್ಕನವರ, ಭೀಮಶಿ ಪಾಟೀಲ, ಶೇಖರ ನೀಲಕಂಠ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ ಭೀಮಶಿ ಹಂದಿಗುಂದ, ವಿದ್ಯಾಧರ ಸವದಿ, ಪುಂಡಲೀಕ ಪಾಲಭಾವಿ ಸೇರಿದಂತೆ ಅನೇಕರು ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.