
ಗುಳೇದಗುಡ್ಡ: ಪುರಸಭೆಯಲ್ಲಿ ಸಿಬ್ಬಂದಿ ತ್ವರಿತ ಕಾರ್ಯಗಳಿಗೆ ಸಾರ್ವಜನಿಕರಿಂದ ನಿಯಮಾನುಸಾರ ಪುರಸಭೆ ದರಪಟ್ಟಿ ಪ್ರಕಾರ ಹಣ ಪಡೆಯದೇ, ಮನಬಂದಂತೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ಪುರಸಭೆ ಎದುರಿನ ಸಾರ್ವಜನಿಕರ ಕಟ್ಟೆಯ ಮೇಲೆ ಕುಳಿತು ಮಂಗಳವಾರ ಸತ್ಯಾಗ್ರಹ ನಡೆಸಿದರು.
ಮಾಜಿ ಶಾಸಕ ರಾಜಶೇಖ ಶೀಲವಂತ ಮಾತನಾಡಿ, ಪ್ರತಿಯೊಂದೂ ಸೇವೆಗೂ ಪುರಸಭೆಯಲ್ಲಿ ಮಿತಿಮೀರಿ ಹಣವನ್ನು ವಸೂಲಿ ಮಡುತ್ತಿದ್ದಾರೆ. ಇದರಿಂದ ನಾಗರಿಕರು ರೋಸಿ ಹೋಗಿದ್ದಾರೆ. ಪಟ್ಟಣದಲ್ಲಿ ಸ್ವಚ್ಛತೆಗೆ ಬಗ್ಗೆ ಗಮನ ಹರಿಸುತ್ತಿಲ್ಲ. ಪಟ್ಟಣದ ಸಾರ್ವಜನಿಕರಿಗೆ ಪೂರೈಕೆಯಾಗುವ ಕಮತಗಿಯಲ್ಲಿರುವ ಶುದ್ಧ ನೀರಿನ ಘಟಕ ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.
ಗೋಡೆಗೆ ದರಪಟ್ಟಿ ಪ್ರದರ್ಶನ: ಪುರಸಭೆಯಲ್ಲಿ ಯಾವ ಯಾವ ಸೇವೆಗೆ ಎಷ್ಟೆಷ್ಟು ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆಂದು ಆರೋಪಿಸಿ ದರಪಟ್ಟಿಯನ್ನು ಪುರಸಭೆ ಗೋಡೆಗೆ ತೂಗು ಹಾಕಿ ಪ್ರತಿಭಟನೆಕಾರರು ಅಣಕು ಪ್ರದರ್ಶನ ಮಾಡಿದರು. ಈ ದರ ಪಟ್ಟಿ ಕೆಳಗೆ ಪುರಸಭೆ ಮುಖ್ಯಾಧಿಕಾರಿ ಎಂದು ಬರೆಯಲಾಗಿತ್ತು. ಇದನ್ನು ಕಂಡ ಮುಖ್ಯಾಧಿಕಾರಿ ಬೋರ್ಡ್ ತೆಗೆಸಲು ಮುಂದಾದಾಗ ಬಿಜೆಪಿ ಕಾರ್ಯಕರ್ತರು ಮತ್ತು ಮುಖ್ಯಾಧಿಕಾರಿ ಮಧ್ಯೆ ವಾಗ್ವಾದ ನಡೆಯಿತು. ನಿಯಮಾನುಸಾರದ ದರ ಪಟ್ಟಿ ಹಾಕಿ ನಂತರ ಈ ಬೋರ್ಡ್ ತೆಗೆಯುತ್ತೇವೆ ಎಂದು ಪ್ರತಿಭಟನಾಕಾರರೂ ಪಟ್ಟು ಹಿಡಿದರು.
ಹೆಚ್ಚು ಹಣ ವಸೂಲಿ ಮಾಡಿದ ಸಿಬ್ಬಂದಿ ಮೇಲೆ ಕ್ರಮವಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪುರಸಭೆ ಎಂಜಿನಿಯರ್ ಎಂ.ಜಿ.ಕಿತ್ತಲಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಸಾ ದೊಂಗಡೆ, ಕಮಲಕಿಶೋರ ಮಾಲಪಾಣಿ, ಭಾಗ್ಯಾ ಉದ್ನೂರ, ಅಶೋಕ ಹೆಗಡಿ, ಶ್ರೀಕಾಂತ ಭಾವಿ, ಪ್ರಶಾಂತ ಜವಳಿ ಇದ್ದರು.
ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿ ಸೂಕ್ತ ಕ್ರಮ ಜರುಗಿಸಲು ಶಿಫಾರಸು ಮಾಡಲಾಗುವುದುವೆಂಕಟೇಶ ಹುಣಸಿಮರದ ಕಾರ್ಯಪಾಲಕ ಎಂಜಿನಿಯರ್ ಜಿಲ್ಲಾ ನಗರಾಭಿವೃದ್ಧಿ ಕೋಶ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.