ADVERTISEMENT

ಗುಳೇದಗುಡ್ಡ: ಗಮನ ಸೆಳೆದ ರೊಟ್ಟಿಜಾತ್ರೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:05 IST
Last Updated 10 ಡಿಸೆಂಬರ್ 2025, 4:05 IST
ಗುಳೇದಗುಡ್ಡದಲ್ಲಿ ಶರಣ ಸಂಗಮ ಸಮಾರಂಭದ ಅಂಗವಾಗಿ ನಡೆದ ಮಹಿಳೆಯರ ರೊಟ್ಟಿ ಜಾತ್ರೆ ಮೆರವಣಿಗೆ.
ಗುಳೇದಗುಡ್ಡದಲ್ಲಿ ಶರಣ ಸಂಗಮ ಸಮಾರಂಭದ ಅಂಗವಾಗಿ ನಡೆದ ಮಹಿಳೆಯರ ರೊಟ್ಟಿ ಜಾತ್ರೆ ಮೆರವಣಿಗೆ.   

ಗುಳೇದಗುಡ್ಡ: ಪಟ್ಟಣದಲ್ಲಿ ಅನೇಕ ಮಹಿಳೆಯರು ಗುರುಸಿದ್ದೇಶ್ವರ ಬೃಹನ್ಮಠದ ಶರಣ ಸಂಗಮ ಸಮಾರಂಭದ ಅಂಗವಾಗಿ ನಡೆಸಿದ ರೊಟ್ಟಿ ಜಾತ್ರೆ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳವರ 40ನೇ ವರ್ಷದ ಪುಣ್ಯರಾಧನೆಯ ನಿಮಿತ್ತ ಸೋಮವಾರ ಮಹಿಳೆಯರಿಂದ ಈ ರೊಟ್ಟಿ ಜಾತ್ರೆ ಮೆರವಣಿಗೆ ನಡೆಯಿತು.

ಇಲ್ಲಿನ ಸಾಲೇಶ್ವರ ದೇವಸ್ಥಾನದಿಂದ ಆರಂಭಗೊಂಡ ಈ ರೊಟ್ಟಿ ಜಾತ್ರೆ ಮೆರವಣಿಗೆ ಪವಾರ್‌ ಕ್ರಾಸ್, ಗುಗ್ಗರಿಪೇಟೆ, ಅರಳಿಕಟ್ಟಿ, ಚೌಬಜಾರ್, ಕಂಠಿಪೇಟೆ ಮೂಲಕ ಗುರುಸಿದ್ದೇಶ್ವರ ಮಠಕ್ಕೆ ಬಂದು ತಲುಪಿತು. ಪಟ್ಟಸಾಲಿ ನೇಕಾರ ಸಮಾಜದ ಹಾಗೂ ಬೇರೆ ಬೇರೆ ಸಮಾಜದ ಸಾಕಷ್ಟು ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಸಿದ್ದಪಡಿಸಿದ್ದ ಖಡಕ್ ರೊಟ್ಟಿ, ನಾನಾ ಬಗೆಯ ಖಾರದ ಚಟ್ನಿ, ವಿವಿಧ ತೆರನಾದ ಸಿಹಿ ಖಾದ್ಯಗಳನ್ನು ತಯಾರಿಸಿಕೊಂಡು ಅವುಗಳನ್ನು ಒಂದು ಬುಟ್ಟಿಯಲ್ಲಿ ಕಟ್ಟಿಕೊಂಡು ಅದನ್ನು ಪ್ರತಿಯೊಬ್ಬ ಮಹಿಳೆಯರು ತಲೆಯ ಮೇಲೆ ಇಟ್ಟುಕೊಂಡು ರೊಟ್ಟಿ ಜಾತ್ರೆ ಮೆರವಣಿಗೆ ನಡೆಸಿದರು.

ಗ್ರಾಮೀಣ ಪ್ರದೇಶದ ಸೊಗಡಿನ ಪರಂಪರೆಯನ್ನು ಪ್ರತಿಬಿಂಬಿಸುವ ಈ ರೊಟ್ಟಿ ಜಾತ್ರೆ ಮೆರವಣಿಗೆಯಲ್ಲಿ ಮಹಿಳೆಯರು ಇಳಕಲ್ಲ ಸೀರೆ, ಗುಳೇದಗುಡ್ಡ ಖಣದ ಕುಪ್ಪಸಗಳನ್ನು ಧರಿಸಿ ಮಹಿಳೆಯರು, ಯುವತಿಯರು ಈ ಆಕರ್ಷಕ ರೊಟ್ಟಿಬುತ್ತಿ ಜಾತ್ರೆ ಮೆರವಣಿಗೆಗೆ ಮೆರಗು ತಂದರು.

ಪಟ್ಟಸಾಲಿ ನೇಕಾರ ಸಮಾಜ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ಭಾಗ್ಯಾ ಉದ್ನೂರ, ನಾಗರತ್ನಾ ಯಣ್ಣಿ, ತಾರಾಮತಿ ರೋಜಿ, ಮಾಲಾ ರಾಜನಾಳ, ಗೀತಾ ಬಂಕಾಪುರ, ಜಂಪವ್ವ ಕಲಬುರ್ಗಿ, ಶಾಂತಾ ಅದ್ವಾನಿ, ಗೀತಾ ತಿಪ್ಪಾ, ಶಶಿಕಲಾ ಮದ್ದಾನಿ, ಅಶ್ವಿನಿ ಪುರಾಣಿ, ಶಶಿಕಲಾ ಭಾವಿ, ಈರಮ್ಮ ರಾಜನಾಳ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.