ಪ್ರಾತಿನಿಧಿಕ ಚಿತ್ರ
ಬಾಗಲಕೋಟೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜ.15ರಂದು ಹರ ಜಾತ್ರೆ ನಡೆಯಲಿದೆ’ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಚನಾನಂದ ಸ್ವಾಮೀಜಿಯವರು ಪೀಠಕ್ಕೆ ಬಂದು ಎಂಟು ವರ್ಷಗಳಾದ ಹಿನ್ನೆಲೆಯಲ್ಲಿ ಅಷ್ಟಮ ವಾರ್ಷಿಕ ಪೀಠಾರೋಹಣ, ಮಹಾಂತ ಸ್ವಾಮೀಜಿಯವರ 15ನೇ ಪುಣ್ಯಸ್ಮರಣೆ ಆಚರಿಸಲಾಗುವುದು’ ಎಂದರು.
‘ಗುರುಭವನ, ದಾಸೋಹ ಭವನ, ಹರ ಮಂದಿರ, ಧ್ಯಾನ ಮಂದಿರ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅತಿಥಿ ಗೃಹವನ್ನೂ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಸಾಧಿಸಿದ ವಿಜಯಕ್ಕೆ ದ್ವಿಶತಮಾನೋತ್ಸವ ಆಗಿದೆ. ಆ ಹಿನ್ನೆಲೆಯಲ್ಲಿ ಪ್ರತಿ ವರ್ಷ ಚನ್ನಮ್ಮನ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಈ ವರ್ಷ ಮಹಿಳೆಗೆ ನೀಡಲಾಗುತ್ತಿದೆ. ಸಮಿತಿ ರಚಿಸಲಾಗಿದ್ದು, ಜ.10 ರಂದು ಪ್ರಶಸ್ತಿ ಪ್ರಕಟಿಸಲಾಗುವುದು ಎಂದರು.
‘ಕೂಡಲಸಂಗಮದ ಪಂಚಮಸಾಲಿ ಪೀಠದ ಬಗ್ಗೆ ಏನೂ ಹೇಳುವುದಿಲ್ಲ. ಸಮುದಾಯಕ್ಕೆ ಮೀಸಲಾತಿ ಪಡೆಯುವ ವಿಷಯದಲ್ಲಿ ಇಬ್ಬರದ್ದೂ ಒಂದೇ ಗುರಿಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಕೇಂದ್ರದಿಂದ ಒಬಿಸಿ ಮೀಸಲಾತಿ ಪಡೆಯಲು ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ರಾಜ್ಯವು ಕೇಂದ್ರಕ್ಕೆ ಶಿಫಾರಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ವೀರಶೈವ ಲಿಂಗಾಯತದ ಎಲ್ಲ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ದೊರೆಯಲಿದೆ’ ಎಂದು ಆಶಾಭಾವ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ನೀಡಿದ್ದ 2ಡಿ ಮೀಸಲಾತಿಯನ್ನು ಒಪ್ಪಿರಲಿಲ್ಲ. ಬೇರೆಯವರದ್ದು ರದ್ದು ಮಾಡಿ ನಮ್ಮ ಸಮುದಾಯಕ್ಕೆ ನೀಡಿದ್ದರಿಂದ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿಯೂ ಮೀಸಲಾತಿ ಪಡೆಯಲಾಗುವುದು. ಸರ್ಕಾರ ಧನಾತ್ಮಕವಾಗಿದೆ. ಸ್ವಲ್ಪ ತಡವಾಗಬಹುದು, ಆದರೆ, ಮೀಸಲಾತಿ ದೊರೆಯಲಿದೆ’ ಎಂದರು.
ರವಿಕುಮಾರ ಪಟ್ಟಣದ, ಲಕ್ಷ್ಮಣ ನಂದಿಹಾಳ, ಶ್ರೀಕಾಂತ ಸಂದಿಮನಿ, ವಿರುಪಾಕ್ಷಪ್ಪ, ಮಲ್ಲಿಕಾರ್ಜುನ, ಶಂಕರ ಅರಿಷಣಗೋಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.