ADVERTISEMENT

ಆರೋಗ್ಯ ಇಲಾಖೆ ಕ್ರಮ: 16ನೇ ಸ್ಥಾನಕ್ಕೆ ಕುಸಿತ

ಎಚ್‌ಐವಿ: ದಶಕದ ಹಿಂದೆ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದ ಬಾಗಲಕೋಟೆ ಜಿಲ್ಲೆ

ವೆಂಕಟೇಶ ಜಿ.ಎಚ್.
Published 3 ಡಿಸೆಂಬರ್ 2020, 0:31 IST
Last Updated 3 ಡಿಸೆಂಬರ್ 2020, 0:31 IST
ಡಾ.ಜಯಶ್ರೀ ಎಮ್ಮಿ
ಡಾ.ಜಯಶ್ರೀ ಎಮ್ಮಿ   

ಬಾಗಲಕೋಟೆ: ಎಚ್‌ಐವಿ ಪೀಡಿತರ ಪಟ್ಟಿಯಲ್ಲಿ ದಶಕದ ಹಿಂದೆ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದ ಬಾಗಲಕೋಟೆ ಜಿಲ್ಲೆ ಈಗ 16ನೇ ಸ್ಥಾನಕ್ಕೆ ಕುಸಿದಿದೆ. ಸೋಂಕಿನ ವಿಚಾರದಲ್ಲಿ ಹಿಂಬಡ್ತಿಯ ಈ ಶ್ರೇಯಕ್ಕೆ ಆರೋಗ್ಯ ಇಲಾಖೆ ಕೈಗೊಂಡ ಕ್ರಮ ಪರಿಣಾಮಕಾರಿ ಫಲ ನೀಡಿದೆ.

2007–2011ರವರೆಗೆ ಎಚ್‌ಐವಿ ಸೋಂಕು ಪರೀಕ್ಷೆ ಮಾಡಿಸುವ 100 ಜನ ಸಾಮಾನ್ಯರಲ್ಲಿ ಶೇ 33.1ರಷ್ಟು ಇದ್ದ ಸೋಂಕಿನ ಪ್ರಮಾಣ, ಈಗ 1.3ಕ್ಕೆ ಕುಸಿದಿದೆ. ಗರ್ಭಿಣಿಯಲ್ಲಿ ಶೇ 4.10 ಇದ್ದ ಸೋಂಕಿತರ ಪ್ರಮಾಣ ಈಗ ಶೇ 0.005 ಕುಸಿದಿದೆ.

‘2009ರಲ್ಲಿ 15,088 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಿದ್ದು, 5,287 ಮಂದಿಗೆ ಸೋಂಕು ದೃಢಪಟ್ಟಿತ್ತು. 2020ರಲ್ಲಿ 72,128 ಮಂದಿಯ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ 1,168 ಮಂದಿಗೆ ಎಚ್ಐವಿ ಪಾಸಿಟಿವ್ ಆಗಿದೆ’ ಎಂದು ಜಿಲ್ಲೆಯ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಡಾ.ಜಯಶ್ರೀ ಎಮ್ಮಿ ಹೇಳುತ್ತಾರೆ.

ADVERTISEMENT

ಕಾಂಡೋಮ್ ಹಂಚಿಕೆ, ಜಾಗೃತಿ: ಎಚ್ಐವಿ ಸೋಂಕಿತರ ವಿಚಾರದಲ್ಲಿ ಜಿಲ್ಲೆ 2009–12ರಲ್ಲಿ ಉತ್ತುಂಗದಲ್ಲಿತ್ತು. ಆಗ
1,000 ಗರ್ಭಿಣಿಯರನ್ನು ಪರೀಕ್ಷಿಸಿದರೆ 300ರಿಂದ 350 ಸೋಂಕಿತರು ಪತ್ತೆಯಾಗುತ್ತಿದ್ದರು.

ಜಿಲ್ಲೆಯಲ್ಲಿ ಪತ್ತೆಯಾದ ಎಚ್ಐವಿ ಪ್ರಕರಣಗಳಲ್ಲಿ ಶೇ 85ರಷ್ಟು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಬರುತ್ತಿದ್ದವು. ಅದನ್ನು ತಡೆಯಲು ವ್ಯಾಪಕ ಪ್ರಮಾಣದಲ್ಲಿ ಕಾಂಡೋಮ್ ಹಂಚಿದೆವು. ಬಸ್ ನಿಲ್ದಾಣ, ಶೌಚಾಲಯ, ಮಾರುಕಟ್ಟೆ, ಹೆದ್ದಾರಿ ಬದಿ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಕಾಂಡೋಮ್ ಸಿಗುವಂತೆ ನೋಡಿಕೊಂಡೆವು. ಸಾರ್ವಜನಿಕ ಜಾಗೃತಿ ಜೊತೆಗೆ ಶಾಲಾ–ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್‌ಗಳನ್ನು ಸ್ಥಾಪಿಸಿ ಮಕ್ಕಳನ್ನು ಏಡ್ಸ್ ವಿರುದ್ಧದ ಹೋರಾಟ
ದಲ್ಲಿ ಸಹಭಾಗಿಗಳನ್ನಾಗಿಸಿದ್ದೆವು.

ಫಲ ನೀಡಿದ ಸೀಮಂತ ಕಾರ್ಯ: ‘ಗರ್ಭಿಣಿಯರಿಗೆ ಹೆರಿಗೆಗೆ ಮುನ್ನ ಕಡ್ಡಾಯವಾಗಿ ಎಚ್ಐವಿ ಪರೀಕ್ಷೆ ಮಾಡಲು ಕಾನೂನು ತೊಡಕು ಇದೆ. ಕೆಲವರು ಅದಕ್ಕೆ ಒಪ್ಪುತ್ತಿರಲಿಲ್ಲ. ನಾವೂ ಬಲವಂತವಾಗಿ ಮಾಡುವಂತಿರಲಿಲ್ಲ. ಈ ಸಮಸ್ಯೆಯಿಂದ ಹೊರಬರಲು ಸಾಮೂಹಿಕ ಸೀಮಂತ ಕಾರ್ಯ ಆರಂಭಿಸಿದೆವು. ಅದು ಫಲ ನೀಡಿತು’ ಎಂದು ಡಾ.ಜಯಶ್ರೀ ಹೇಳುತ್ತಾರೆ.

‘ಉಡಿ ತುಂಬಿ, ಬಳೆಶಾಸ್ತ್ರ ಮಾಡಿದ ನಂತರ ಎಲ್ಲರಿಗೂ ಎಚ್ಐವಿ ತಪಾಸಣೆ ಮಾಡತೊಡಗಿದೆವು. ಅದನ್ನು ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ವಿಸ್ತರಿಸಿದೆವು. ಅದೊಮ್ಮೆ ಹಳ್ಳಿಯೊಂದರಲ್ಲಿ ಸೀಮಂತ ಕಾರ್ಯದಲ್ಲಿ ತಪಾಸಣೆ ವೇಳೆ 32 ಹೆಣ್ಣುಮಕ್ಕಳಲ್ಲಿ 22 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖವಾದೆವು’ ಎಂದು ಎಚ್‌ಐವಿ ವಿರುದ್ಧದ ಹೋರಾಟದ ಹಾದಿಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.