ADVERTISEMENT

ರಬಕವಿ ಬನಹಟ್ಟಿ: ಹಿಪ್ಪರಗಿ ಬ್ಯಾರೇಜ್‌ಗೆ ಬೇಕಿದೆ ಕಾಯಕಲ್ಪ

ವಿಶ್ವಜ ಕಾಡದೇವರ
Published 24 ಜನವರಿ 2026, 8:22 IST
Last Updated 24 ಜನವರಿ 2026, 8:22 IST
ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್
ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್   

ರಬಕವಿ ಬನಹಟ್ಟಿ: ಅಖಂಡ ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಹಲವಾರು ನಗರ ಮತ್ತು ನೂರಾರು ಗ್ರಾಮೀಣ ಪ್ರದೇಶಗಳ ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರನ ಬಳಕೆಗಾಗಿ ಮತ್ತು ಈ ಭಾಗದ ನೂರಾರು ಎಕರೆ ರೈತರ ಭೂಮಿಗೆ ನೀರು ಒದಗಿಸುವ ಉದ್ದೇಶಕ್ಕಾಗಿ 1972, 73ರಲ್ಲಿ ಹಿಪ್ಪರಗಿ ಬ್ಯಾರೇಜ್‌ನ ಕಾಮಗಾರಿ ಆರಂಭಗೊಂಡಿತು.

ಕಾಮಗಾರಿ ಆರಂಭಗೊಂಡ ಮೂರು ದಶಕಗಳ ನಂತರ 2002ರಲ್ಲಿ ಬ್ಯಾರೇಜ್ ಕಾಮಗಾರಿ ಪೂರ್ಣಗೊಂಡಿತು. ನಂತರ 2004 ರಲ್ಲಿ ಮೊದಲ ಬಾರಿಗೆ ನೀರಿನ ಸಂಗ್ರಹವನ್ನು ಮಾಡಲಾಯಿತು. ಒಟ್ಟು 6 ಟಿಎಂಸಿ ಅಡಿ ನೀರು ಸಂಗ್ರಹವನ್ನು ಬ್ಯಾರೇಜ್ ಹೊಂದಿದೆ. ಇದರಲ್ಲಿ 5.20 ಟಿಎಂಸಿ ಅಡಿ ನೀರು ಬಳಕೆಗೆ ಉಪಯೋಗವಾಗುತ್ತದೆ.

ಹಿಪ್ಪರಗಿ ಬ್ಯಾರೇಜ್‌ನಿಂದ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಿತು. ಇದರಿಂದಾಗಿ ಇಲ್ಲಿಯ ರೈತರು ಕಬ್ಬು,ಬಾಳೆ ಮತ್ತು ಅರಿಸಿನ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯಲಾರಂಭಿಸಿದರು.

ADVERTISEMENT

ಬ್ಯಾರೇಜ್ ನಿರ್ಮಾಣಗೊಂಡು ಎರಡು ದಶಕಗಳಿಗಿಂತೆ ಹೆಚ್ಚು ಸಮಯವಾಯಿತು. 2004ರಲ್ಲಿ ಬ್ಯಾರೇಜ್‌ನ ಗೇಟ್ ಸಮಸ್ಯೆಯಿಂದಾಗಿ ತೊಂದರೆಯಾಯಿತು. ಈಗ ಮತ್ತೆ 22ನೇ ಗೇಟ್ ಕಿತ್ತು ಹೋಗಿದ್ದರಿಂದ ಇದ್ದ 5 ಟಿಎಂಸಿ ಅಡಿ ನೀರಿನಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಖಾಲಿಯಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತೇರದಾಳ, ಮುಧೋಳ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಕುಡಚಿ ತಾಲ್ಲೂಕುಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ತೊಂದರೆಯಾಗಲಿದೆ.

ಬ್ಯಾರೇಜ್ ಗೆ ಕಾಯಕಲ್ಪ ಅಗತ್ಯ: ಸದ್ಯ ಹಿಪ್ಪರಗಿ ಬ್ಯಾರೇಜ್‌ಗೆ ಕಾಯಕಲ್ಪದ ಅಗತ್ಯವಿದೆ. ಎರಡುವರೆ ದಶಕಗಳ ಹಿಂದೆ ಅಳವಡಿಸಲಾದ ಗೇಟ್‌ಗಳು ಸವೆದು ಹೋಗಿವೆ. ಈಗ 22ನೇ ಗೇಟ್‌ಗೆ ಮಾತ್ರ ತೊಂದರೆಯಾಗಿದೆ. ಎಲ್ಲ ಗೇಟ್ ಗಳ ಸ್ಥಿತಿ ಗತಿಗಳ ಬಗ್ಗೆ ಅಧ್ಯಯನವಾಗಬೇಕಾಗಿದೆ. ಈ ಕುರಿತು ತಜ್ಞರ ಅಭಿಪ್ರಾಯವನ್ನು ಸರ್ಕಾರ ಪಡೆದುಕೊಳ್ಳಬೇಕಾಗಿದೆ.

ಬ್ಯಾರೇಜ್‌ನ ಕಾರ್ಯಾಲಯದಲ್ಲಿ ಬಹುತೇಕ ಹುದ್ದೆಗಳು ಖಾಲಿಯಾಗಿವೆ. ಪ್ರಭಾರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಅಧಿಕಾರಿಗಳಲ್ಲಿಯ ಕಾರ್ಯ ಕ್ಷಮತೆಯು ಕಡಿಮೆಯಾಗಿದೆ.

ಈ ಬ್ಯಾರೇಜ್ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ಇದರಿಂದಾಗಿ ದಿನನಿತ್ಯ ಬ್ಯಾರೇಜ್ ಮೇಲೆ ನೂರಾರು ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ಭಾರಿ ವಾಹನಗಳ ಓಡಾಟವೂ ಕೂಡಾ ಇದೆ. ಸಕ್ಕರೆ ಕಾರ್ಖಾನೆಗಳು ಆರಂಭವಾದರೆ ಬ್ಯಾರೇಜ್ ಮೇಲೆ ಕಬ್ಬು ತುಂಬಿದ ಟ್ರಕ್ ಮತ್ತು ಟ್ರ್ಯಾಕ್ಟರ್ ಓಡಾಟ ಹೆಚ್ಛಾಗುತ್ತಿದೆ. ಇದರಿಂದಾಗಿ ಬ್ಯಾರೇಜ್ ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೊಂದರೆಯಾಗಲಿದೆ.

ವಾಹನಗಳ ಓಡಾಟಕ್ಕೆ ಬ್ಯಾರೇಜ್ ಕೆಳ ಭಾಗದಲ್ಲಿ ದಶಕಗಳ ಹಿಂದೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಈ ಕಾಮಗಾರಿಯೂ ಕೂಡಾ ಅರ್ಧಕ್ಕೆ ನಿಂತಿದೆ. ಈ ಕುರಿತು ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇನ್ನೂ ಇಲ್ಲಿಯ ಗುತ್ತಿಗೆದಾರ ಕಾರ್ಮಿಕರಿಗೆ ಕಳೆದ ಹತ್ತು ತಿಂಗಳುಗಳಿಂದ ಸಂಬಳವನ್ನು ನೀಡಿಲ್ಲ. ಈ ಕುರಿತು ಗುತ್ತಿಗೆದಾರರಿಗೆ ಸಂಬಳ ನೀಡುವ ಗುತ್ತಿಗೆದಾರನ ಮೇಲೆ ಯಾವುದೆ ಕ್ರಮವಿಲ್ಲ. ಸದ್ಯ ಇಷ್ಟು ಸಮಸ್ಯೆಗಳನ್ನು ಹಿಪ್ಪರಗಿ ಬ್ಯಾರೇಜ್ ಎದುರಿಸುತ್ತಿದೆ.

ಬ್ಯಾರೇಜ್ ಗೆ ಹೊಸ ಗೇಟ್ ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗನೆ ಕ್ರಮ ತೆಗೆದುಕೊಳ್ಳಬೇಕು. ಹತ್ತು ಎಂ.ಎಂ. ದಪ್ಪವಿರುವ ಗೇಟ್ ಗಳು ಈಗ ಕೇವಲ 3 ರಿಂದ 4 ಎಂ.ಎಂ ದಪ್ಪವಾಗಿವೆ. ನೆರೆಯ ಮಹಾರಾಷ್ಟ್ರದಿಂದ ನೀರು ಬಿಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.
ಸಿದ್ದು ಸವದಿ, ಶಾಸಕ ತೇರದಾಳ
ಭಾರಿ ವಾಹನಗಳ ಓಡಾಟದಿಂದ ಸೇತುವೆ ಕಂಪಿಸುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಬ್ಯಾರೇಜ್ ಗೆ ಇನ್ನಷ್ಟು ತೊಂದರೆಯಾಗಲಿದೆ.
ಜಗದೀಶ ಗುಡಗುಂಟಿಮಠ, ಶಾಸಕರು ಜಮಖಂಡಿ
ಹಿಪ್ಪರಗಿ ಬ್ಯಾರೇಜ್ ನಲ್ಲಿರುವ ಖಾಲಿ ಹುದ್ದೆಗಳ ಮಾಹಿತಿ

₹33 ಕೋಟಿ ಪ್ರಸ್ತಾವ ಸಲ್ಲಿಕೆ

ಇನ್ನೂ ಈಗಿರುವು ಬ್ಯಾರೇಜ್ ಮೇಲಿರುವು ರಸ್ತೆ ಬ್ಯಾರೇಜ್ ನಿರ್ಹಣೆಗೆ ಮಾತ್ರ ಬಳಸಬೇಕಾಗಿದೆ. ಆದರೆ ಬೃಹತ್ ವಾಹನಗಳು ಓಡಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬ್ಯಾರೇಜ್ ಗೆ ಭಾರಿ ಸಮಸ್ಯೆಯಾಗುವುದು ಕಟ್ಟಿಟ್ಟ ಬುತ್ತಿ. ಮೂವರು ಜನ ಸಹಾಯಕ ಎಂಜಿನಿಯರ್ ಮತ್ತು ಮೂವರು ಕಿರಿಯ ಎಂಜಿನಿಯರ್ ಗಳನ್ನು ಸರ್ಕಾರ ಆದಷ್ಟು ಬೇಗನೆ ನೇಮಕ ಮಾಡಬೇಕು.
ಶಿವಮೂರ್ತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಿಪ್ಪರಗಿ ಬ್ಯಾರೇಜ್
ಈಚೇಗೆ ಗೇಟ್ ಕಿತ್ತು ಹೋದ ಪರಿಣಾಮವಾಗಿ ಅಪಾರ ಪ್ರಮಣದ ನೀರು ಹರಿದು ಹೋಗುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.