ADVERTISEMENT

ಬಿಜೆಪಿ, ಜೆಡಿಎಸ್ ನಡುವೆ ಒಡಕು: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 7:24 IST
Last Updated 31 ಜುಲೈ 2024, 7:24 IST
ಗೃಹಸಚಿವ ಜಿ. ಪರಮೇಶ್ವರ್
ಗೃಹಸಚಿವ ಜಿ. ಪರಮೇಶ್ವರ್   

ಬಾಗಲಕೋಟೆ: ಪಾದಯಾತ್ರೆಗೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ನಡುವೆ ಒಡಕುಂಟಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನವರು ಮೊದಲು ಬಿಜೆಪಿಯೊಂದಿಗೆ ಇದ್ದರು. ನಂತರ ನಮ್ಮೊಂದಿಗೆ ಇದ್ದರು. ಈಗ ಮತ್ತೆ ಬಿಜೆಪಿ ಕಡೆಗೆ ಹೋಗಿದ್ದಾರೆ. ಹೊಂದಾಣಿಕೆ ಎಷ್ಟು ದಿನ ನಡೆಯಲಿದೆ ಕಾದು ನೋಡೋಣ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಮೂರು ಏಜೆನ್ಸಿಗಳು ನಡೆಸುತ್ತಿವೆ. ಮುಡಾ ನಿವೇಶನ ಹಂಚಿಕೆಯ ತನಿಖೆಗೆ ಆಯೋಗ‌ ರಚನೆ ಮಾಡಲಾಗಿದೆ. ತನಿಖೆಯಲ್ಲಿ ಸತ್ಯಾಂಶ ಹೊರಗಡೆ ಬರಲಿದೆ ಎಂದು ಹೇಳಿದರು.

ADVERTISEMENT

ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅದನ್ನು ಮೀರಿದರೆ ಅನುಮಾನ ಶುರುವಾಗುತ್ತದೆ. ಷೋಕಾಸ್ ನೋಟಿಸ್ ನೀಡದಿರುವುದು ರಾಜ್ಯಪಾಲರ ನಡೆ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆ ಅನಾವಶ್ಯಕ ಎಂದರು

ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾತನಾಡಿ, ರಾಜ್ಯಪಾಲರು ಕೇಂದ್ರದ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಜ್ಯಪಾಲರ ಹುದ್ದೆ ದುರುಪಯೋಗ ಮಾಡಿಕೊಂಡಿರುವುದನ್ನು ಕಾಣಬಹುದಾಗಿದೆ. ಬೇರೆ ಪಕ್ಷಗಳು ಆಡಳಿತ ನಡೆಸಬಾರದು ಎನ್ನುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.