ADVERTISEMENT

ಹುನಗುಂದ | ಈರುಳ್ಳಿ ದರ ಕುಸಿತ: ರೈತ ಕಂಗಾಲು

ಸಂಗಮೇಶ ಹೂಗಾರ
Published 16 ಅಕ್ಟೋಬರ್ 2025, 4:45 IST
Last Updated 16 ಅಕ್ಟೋಬರ್ 2025, 4:45 IST
ಹುನಗುಂದ ತಾಲ್ಲೂಕಿನ ವೀರಾಪೂರ ಗ್ರಾಮದ ರೈತರೊಬ್ಬರು ರಸ್ತೆ ಬದಿಯಲ್ಲಿ ಉಳ್ಳಾಗಡ್ಡಿ ಹಾಕಿರುವುದು
ಹುನಗುಂದ ತಾಲ್ಲೂಕಿನ ವೀರಾಪೂರ ಗ್ರಾಮದ ರೈತರೊಬ್ಬರು ರಸ್ತೆ ಬದಿಯಲ್ಲಿ ಉಳ್ಳಾಗಡ್ಡಿ ಹಾಕಿರುವುದು   

ಹುನಗುಂದ: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಉಳ್ಳಾಗಡ್ಡೆ ದರ ಕುಸಿಯುತ್ತಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಲಾಗಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿಗೆ ₹200 ರಿಂದ ₹ 800 ಇದೆ. ಕಳೆದ ಕೆಲವು ತಿಂಗಳುಗಳಿಂದ ಉಳ್ಳಾಗಡ್ಡೆ ಬೆಲೆಯಲ್ಲಿ ಏರಿಕೆ ಕಂಡಿಲ್ಲ.

ಈ ಬಾರಿ ಮುಂಗಾರು ಹಂಗಾಮಿನಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾದ ಉಳ್ಳಾಗಡ್ಡೆಯನ್ನು ಹುನಗುಂದ ತಾಲ್ಲೂಕಿನಲ್ಲಿ 5,000 ಹೆಕ್ಟೇರ್ ಹಾಗೂ ಇಳಕಲ್ ತಾಲ್ಲೂಕಿನಲ್ಲಿ 2,000 ಹೆಕ್ಟೇರ್ ಸೇರಿದಂತೆ ಒಟ್ಟು 7,000 ಹೆಕ್ಟೇರ್ ಪ್ರದೇಶದಲ್ಲಿ (ಮಳೆ ಆಶ್ರಿತ ಮತ್ತು ನೀರಾವರಿ ಪ್ರದೇಶ) ಬಿತ್ತನೆ ಮಾಡಲಾಗಿತ್ತು.

ADVERTISEMENT

ಎರಡು ತಾಲ್ಲೂಕುಗಳಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಮಳೆ ಆಗಿದೆ. ಅತಿವೃಷ್ಟಿಯಿಂದಾಗಿ ಅರ್ಧಕ್ಕೂ ಹೆಚ್ಚಿನ ಬೆಳೆ ಹಾಳಾಗಿದೆ. ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ರೋಗ ಬಾಧೆ ಸೇರಿದಂತೆ ಹತ್ತಾರು ಸಮಸ್ಯೆಗಳ ನಡುವೆ ಸಾವಿರಾರು ರೂಪಾಯಿ ಖರ್ಚು ಮಾಡಿ ಉಳ್ಳಾಗಡ್ಡಿ ಬೆಳೆದ ರೈತನಿಗೆ ದರ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಲಿಲ್ಲ. ಹೀಗಾಗಿ ಉತ್ತಮ ಇಳುವರಿ ಕೂಡ ಬರಲಿಲ್ಲ. ಈ ಬಾರಿ ಆದರೂ ಉತ್ತಮ ಬೆಲೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಉಳ್ಳಾಗಡ್ಡಿ ದರ ಕಣ್ಣಲ್ಲಿ ನೀರು ತರಿಸಿದೆ.

ಉಳ್ಳಾಗಡ್ಡಿ ದರ ಕುಸಿದಿರುವುದರಿಂದ ಎರಡೂ ತಾಲ್ಲೂಕುಗಳಲ್ಲಿ ಕೆಲವು ರೈತರು ಕಟಾವಿಗೆ ಬಂದ ಉಳ್ಳಾಗಡ್ಡೆ ಬೆಳೆಯನ್ನು ಟ್ರ್ಯಾಕ್ಟರ್ ಸಹಾಯದಿಂದ ರೋಟವೇಟರ್ ಮೂಲಕ ಮಣ್ಣಿನಲ್ಲಿ ಮುಚ್ಚುತ್ತಿದ್ದಾರೆ. ಇನ್ನೂ ಕೆಲವರು ಬೆಳೆಯನ್ನು ಕಟಾವು ಮಾಡದೇ ಹೊಲದಲ್ಲಿಯೇ ಬಿಟ್ಟಿದ್ದು, ಬೆಳೆ ಕೊಳೆಯುತ್ತಿದೆ.

ಜಮೀನನ್ನು ಭೋಗ್ಯಕ್ಕೆ ಪಡೆದು ಉಳ್ಳಾಗಡ್ಡೆ ಬೆಳೆದಿರುವವರ ಸಂಕಷ್ಟವಂತೂ ಹೇಳತೀರದು.

ಹನ್ನೆರಡು ಎಕರೆಯಲ್ಲಿ ಉಳ್ಳಾಗಡ್ಡೆ ಬೆಳೆದಿದ್ದೆ. ಲಕ್ಷಾಂತರ ರೂಪಾಯಿ ಖರ್ಚಾಗಿದೆ. ತಿಂಗಳ ಹಿಂದೆ ಸುರಿದ ಮಳೆಗೆ ಅರ್ಧ ಬೆಳೆ ಹಾನಿಯಾಗಿದೆ. ಈಗ ದರ ಕುಸಿದಿರುವುದು ಮತ್ತಷ್ಟು ನಷ್ಟವಾಗಲಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಚಿತ್ತವಾಡಗಿ ಗ್ರಾಮದ ರೈತ ಹೊನ್ನಪ್ಪ ಆಂದೇಲಿ ತಿಳಿಸಿದರು.

ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮದ ಹೊಲದಲ್ಲಿ ಉಳ್ಳಾಗಡ್ಡಿ ಬೆಳೆ ಕಿತ್ತಿಹಾಕಿರುವುದು
ಅರ್ಧಕ್ಕೂ ಹೆಚ್ಚು ಈರುಳ್ಳಿ ಬೆಳೆ ಹಾನಿ
ಎರಡು ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದಾಗಿ ಅರ್ಧಕ್ಕೂ ಹೆಚ್ಚು ಈರುಳ್ಳಿ ಬೆಳೆ ಹಾನಿಯಾಗಿದೆ. ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು ಅತಿ ಶೀಘ್ರದಲ್ಲಿ ಹಾನಿಗೊಳಗದ ರೈತರ ಪಟ್ಟಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಲಾಗುವುದು-ಸುಭಾಷ್ ಸುಲ್ಪಿ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.